ಯುವಜನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ವ್ಯಾಸ ದೇಶಪಾಂಡೆ

minchu
ಧಾರವಾಡದಲ್ಲಿ ಮಿಂಚು ಶ್ರೀನಿವಾಸ ಕುಟುಂಬದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಗಿರಿಜಾ ಶಂಕರ್, ರಾಜೀವ ಕಿದಿಯೂರು, ಸುಮಂಗಲಾ ರತ್ನಾಕರ್, ಜೆ.ದಾದಾಗೌಡ ಪಾಟೀಲ್, ಮಂಜುನಾಥ ಹೆಗಡೆ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
Published on

ಶಿವಮೊಗ್ಗ:ಪತ್ರಿಕಾ ಕ್ಷೇತ್ರ ಕವಲುದಾರಿಯಲ್ಲಿ ಇರುವುದರ ಜತೆಗೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂಥಹ ಸಂಕ್ರಮಣ ಕಾಲಘಟ್ಟದಲ್ಲಿ ಯುವ ಸಮೂಹದಲ್ಲಿ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಬೆಳೆಸಬೇಕಿದೆ ಎಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವ್ಯಾಸ ದೇಶಪಾಂಡೆ ಅಭಿಪ್ರಾಯಪಟ್ಟರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಶಿವಮೊಗ್ಗದ ಮಿಂಚು ಶ್ರೀನಿವಾಸ ಕುಟುಂಬ, ಧಾರವಾಡದ ಸಾಕಾರ- ಸಾಂಸ್ಕೃತಿಕ ಹಾಗೂ ಮಾಧ್ಯಮ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪತ್ರಿಕಾ ಭಾಷೆ, ಸಾಹಿತ್ಯ ಹಾಗೂ ರಂಗಭೂಮಿ ಭಾಷೆ ಬದಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸಮಷ್ಟಿ ಚಿಂತನೆಗಳು ನಡೆಯಬೇಕು. ಖಾದ್ರಿ ಶಾಮಣ್ಣ, ಟಿ.ಎಸ್.ರಾಮಚಂದ್ರ ರಾವ್ ಸೇರಿದಂತೆ ಆ ತಲೆಮಾರಿನ ಪತ್ರಕರ್ತರು ಬಳಸುತ್ತಿದ್ದ ಭಾಷೆಗೂ, ಆನಂತರ ಬಂದ ಲಂಕೇಶ್, ರವಿ ಬೆಳಗೆರೆ ಅವರು ಬಳಸುತ್ತಿದ್ದ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಸಾಹಿತ್ಯ, ರಂಗಭೂಮಿಯ ಪರಿಭಾಷೆ ಬದಲಾಗುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ. ಈ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಲೇ ಈ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಬೇಕಿದೆ. ಮಾಹಿತಿಗಳ ಭರಪೂರ ಸಂಗ್ರಹವೇ ಅಂಗೈಯಲ್ಲಿದೆ. ಇಲ್ಲಿ ಭಾಷೆ ಎಂಬುದು ಒಂದು ವಾಹಕವಾಗಿ ಉಳಿದಿದೆಯೇ ಹೊರತು ಅಡ್ಡಿಯಾಗಿಲ್ಲ. ಭಾಷೆಯ ಮೂಲ ಸೆಲೆಯನ್ನು ಉಳಿಸಿಕೊಂಡೇ ಪತ್ರಿಕಾ ಕ್ಷೇತ್ರವನ್ನು ಕಟ್ಟಿದವರು ಮಿಂಚು ಶ್ರೀನಿವಾಸ್ ಎಂದು ಬಣ್ಣಿಸಿದರು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಎಸ್.ಗಿರಿಜಾಶಂಕರ್ ಮಾತನಾಡಿ, ಪತ್ರಿಕಾ ರಂಗವು ಪತ್ರಿಕೋದ್ಯಮವಾಗಿ ಬದಲಾದ ನಂತರ ಅನೇಕ ಸವಾಲುಗಳನ್ನು ಒಳಗೆ ಮತ್ತು ಹೊರಗೆ ಎದುರಿಸುತ್ತಿದೆ. ಆದರೂ ಸ್ಥಳೀಯ ಪತ್ರಿಕೆಗಳು ಅಸ್ತಿತ್ವ ಉಳಿದುಕೊಂಡಿವೆ. ಸಮಾಜಕ್ಕೆ ಈ ಪತ್ರಿಕೆಗಳ ಅಗತ್ಯವಿದೆ ಎಂದರು.

2023-24ನೇ ಸಾಲಿನ ಮಿಂಚು ಶ್ರೀನಿವಾಸ ಪುರಸ್ಕಾರವನ್ನು ಅನುಕ್ರಮವಾಗಿ ಗದಗದ ನವೋದಯ ಪ್ರಾದೇಶಿಕ ಪತ್ರಿಕೆಯ ಸಂಪಾದಕ ರಾಜೀವ ಕಿದಿಯೂರು, ಚಿಕ್ಕಮಗಳೂರಿನ ಜನಮಿತ್ರ ಪತ್ರಿಕೆ ಸಂಪಾದಕ ಎಸ್.ಗಿರಿಜಾ ಶಂಕರ್‌ರವರಿಗೆ ಪ್ರದಾನ ಮಾಡಲಾಯಿತು.

ವಿದುಷಿ ಸುಮಂಗಲಾ ರತ್ನಾಕರ್ ಅವರಿಗೆ ಸಿ.ಆರ್.ಭಟ್ ಹೆಸರಿನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪುರಸ್ಕಾರ, ಜೆ.ದಾದಾಗೌಡ ಪಾಟೀಲ್ ಅವರಿಗೆ ದತ್ತಾತ್ರೇಯ ಕುಲಕರ್ಣಿ ಹೆಸರಿನಲ್ಲಿ ಶಿಕ್ಷಣ ಸಿರಿ ಪುರಸ್ಕಾರ ಹಾಗೂ ಮಂಜುನಾಥ ಹೆಗಡೆ ಅವರಿಗೆ ಎಂ.ಎಲ್.ಜೋಷಿ ಅವರ ಹೆಸರಿನಲ್ಲಿ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಾಕಾರದ ಗೌರವಾಧ್ಯಕ್ಷ ನಾಗರತ್ನಾ ಎನ್. ಹಡಗಲಿ, ಕಾರ್ಯಾಧ್ಯಕ್ಷೆ ಡಾ. ಶುಭದಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net