ಜಿಎಸ್​ಟಿ ಬಾಕಿ ವಿಳಂಬ ಇಲ್ಲ: ವಿತ್ತ ಸಚಿವೆ ನಿರ್ಮಲಾ ಮಾಹಿತಿ; ಎಜಿ ಪ್ರಮಾಣಪತ್ರ ಸಲ್ಲಿಸಲು ಸೂಚನೆ

Samsad
Published on

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್​ಟಿ) ಸಂಬಂಧಿಸಿದಂತೆ ರಾಜ್ಯಗಳಿಗೆ ಹಣ ಪಾವತಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಆದರೆ, ರಾಜ್ಯಗಳು ಲೇಖಪಾಲರಿಂದ (ಅಕೌಂಟೆಂಟ್ ಜನರಲ್- ಎಜಿ) ಸಂಬಂಧಿಸಿದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಸೋಮವಾರ ತಿಳಿಸಿದರು.

ಜಿಎಸ್​ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಕಳೆದೈದು ವರ್ಷಗಳಿಂದ ರಾಜ್ಯಗಳಿಗೆ ನಿರಂತರವಾಗಿ ಪಾವತಿ ಮಾಡಲಾಗುತ್ತಿದೆ. ಈವರೆಗಿನ ಲೆಕ್ಕದಂತೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಸೆಸ್ (ಹೆಚ್ಚುವರಿ ಸುಂಕ) ಸಂಗ್ರಹವಾದ ಎಲ್ಲವನ್ನೂ ರಾಜ್ಯಗಳಿಗೆ ಹಂಚಲಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇರಿಸಿರುವ ರಾಜ್ಯಗಳು ಎಜಿಗಳ ಮೂಲಕ ಸೂಕ್ತ ಪ್ರಮಾಣ ಪತ್ರವನ್ನು ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದು. ಎಜಿ ಪ್ರಮಾಣ ಪತ್ರ ಸಲ್ಲಿಕೆಯಲ್ಲಿ ವಿಳಂಬವಾದರೆ ಪರಿಹಾರ ಬಿಡುಗಡೆಯೂ ತಡವಾಗುತ್ತದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ಹೇಳಿದರು.

ಸಂಸ್ಕೃತ, ಹಿಂದಿಗೆ ರಾಷ್ಟ್ರೀಯ ಸ್ಥಾನಕ್ಕೆ ಒತ್ತಾಯ: ದೇವಭಾಷೆಯಾದ ಸಂಸ್ಕೃತ ಮತ್ತು ಭಾರತದಲ್ಲಿ ಬಹುರಾಜ್ಯಗಳ ಮಾತನಾಡುವ ಹಿಂದಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಉತ್ತರ ಪ್ರದೇಶದ ಹಮೀರ್ಪರ್ ಕ್ಷೇತ್ರದ ಬಿಜೆಪಿ ಸಂಸದ ಪುಷ್ಪೇಂದ್ರ ಸಿಂಗ್ ಚಾಂಡೆಲ್ ಒತ್ತಾಯಿಸಿದರು. ಭಾರತದಲ್ಲಿ ಅಧಿಕೃತವಾಗಿ ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷೆ ಎಂಬ ಪುರಸ್ಕಾರ ಇಲ್ಲ. ಆದರೆ, ಸಂವಿಧಾನದ 343ನೇ ವಿಧಿಯಲ್ಲಿ ದೇವನಾಗರಿ ಲಿಪಿ ಹೊಂದಿರುವ ಹಿಂದಿಯನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆ ಎಂದು ಹೇಳಲಾಗಿದೆ. ಇದರೊಟ್ಟಿಗೆ 22 ಭಾಷೆಗಳನ್ನು ಗುರುತಿಸಲಾಗಿದೆ. ಅವೆಲ್ಲವುಗಳನ್ನು ಸಮನ್ವಯಗೊಳಿಸುವ ತಾಯಿ ಭಾಷೆ ಸಂಸ್ಕೃತ. ಹೀಗಾಗಿ ಸಂಸ್ಕೃತ ಮತ್ತು ಹಿಂದಿಗಳಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಮಸೂದೆಗೆ ಸಂಸತ್ ಒಪ್ಪಿಗೆ: ಪಳಯುಳಿಕೆಯಲ್ಲದ ಇಂಧನ ಮೂಲ ಮತ್ತು ಕಾರ್ಬನ್ ಕ್ರೆಡಿಟ್ ವ್ಯಾಪಾರಕ್ಕೆ ಉತ್ತೇಜನ ನೀಡುವ ತಿದ್ದುಪಡಿ ಮಸೂದೆಗೆ ಸಂಸತ್ ಒಪ್ಪಿಗೆ ನೀಡಿದೆ. ಈ ಮಸೂದೆಯಿಂದ ಜೈವಿಕ ಮೂಲದ ಇಂಧನ, ಎಥನಾಲ್, ಹಸಿರು ಜಲಜನಕಗಳ ವ್ಯಾಪಾರಕ್ಕೆ ಅನುಕೂಲ ಆಗಲಿದೆ. ಈ ಮಸೂದೆಗೆ ಲೋಕಸಭೆ ಮಳೆಗಾಲದ ಅಧಿವೇಶನದಲ್ಲೇ ಒಪ್ಪಿಗೆ ನೀಡಿತ್ತು.

ಜಾತಿ-ಧರ್ಮ ಉಲ್ಲೇಖಿಸಿದರೆ ಹುಷಾರ್: ಸದನ ಸದಸ್ಯರನ್ನು ಜಾತಿ ಇಲ್ಲವೆ ಧರ್ಮದ ಮೂಲಕ ಉಲ್ಲೇಖಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕಾರಣ ಅವರು ಹಿಂದಿಯಲ್ಲಿ ಪ್ರಾವೀಣ್ಯತೆಯಿಂದ ಕೆಲವು ಟೀಕೆ-ಟಿಪ್ಪಣಿ ಮಾಡಿದ್ದಾರೆ ಎಂದು ಕಾಂಗ್ರೆಸ್​ನ ಸಂಸದ ಎ.ಆರ್.ರೆಡ್ಡಿ ಹೇಳಿದರು. ಜತೆಗೆ ಅವರು ತಮ್ಮ ಸಮುದಾಯವನ್ನೂ ಉಲ್ಲೇಖಿಸಿ ಮಾತನಾಡಿದರು. ಇದರಿಂದ ಕುಪಿತರಾದ ಸ್ಪೀಕರ್, ಜನರು ಜಾತಿ, ಧರ್ಮದ ಆಧಾರದಲ್ಲಿ ಸಂಸದರನ್ನು ಆಯ್ಕೆ ಮಾಡಿ ಇಲ್ಲಿಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

2000 ರೂ. ನೋಟ್ ನಿಷೇಧಿಸಿ: ನೋಟು ಅಮಾನ್ಯೀಕರಣದ ನಂತರ ಚಲಾವಣೆಗೆ ಬಂದ 2000 ಮುಖಬೆಲೆಯ ನೋಟನ್ನು ನಿಷೇಧಿಸುವಂತೆ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದರು. 2000ದ ನೋಟುಗಳನ್ನು ಹೊಂದಿರುವವರು ಅವುಗಳನ್ನ ಬ್ಯಾಂಕ್​ಗಳಿಗೆ ಜಮೆ ಮಾಡಲು ಎರಡು ವರ್ಷ ಕಾಲಾವಕಾಶ ನೀಡಿ, ಅವುಗಳ ಚಲಾವಣೆಯನ್ನು ನಿಲ್ಲಿಸಬೇಕು ಎಂದು ಶೂನ್ಯವೇಳೆ ಕಲಾಪದಲ್ಲಿ ಆಗ್ರಹಿಸಿದರು.

ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಉದಾಸಿ ಆಗ್ರಹ: ದೇಶದಲ್ಲಿ ಕ್ರಿಪ್ಟೊಕರೆನ್ಸಿಯನ್ನು ನಿಷೇಧಿಸಿ ಆದರೆ, ಬ್ಲಾಕ್​ಚೈನ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸಿ. ಇದರಿಂದ ಜನ ಜೀವನ ಮತ್ತು ಬೆಳವಣಿಗೆ ಸಲೀಸಾಗುತ್ತದೆ ಎಂದು ಕರ್ನಾಟಕದ ಹಾವೇರಿಯ ಸಂಸದ ಶಿವಕುಮಾರ ಉದಾಸಿ ಲೋಕಸಭೆಯಲ್ಲಿ ಒತ್ತಾಯಿಸಿದರು.

ಸಂಸತ್​ಗೆ ಸರ್ಕಾರದ ಉತ್ತರ

  • ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. 2004ರಲ್ಲಿ ಜಾರಿಯಾದ ರಾಷ್ಟ್ರೀಯ ಪಿಂಚಣಿ ಯೋಜನೆಯೇ ಮುಂದುವರಿಯಲಿದೆ.
  • 2019ರ ಏಪ್ರಿಲ್​ನಿಂದ ಕಳೆದ ನವೆಂಬರ್ ವರೆಗೆ ಗೇಮಿಂಗ್ ಕಂಪನಿಗಳಿಂದ ಆಗಿರುವ 23,000 ಕೋಟಿ ರೂ. ಜಿಎಸ್​ಟಿ ವಂಚನೆ ಕುರಿತು ತನಿಖೆ ನಡೆಸಲಾಗುವುದು.
  • ಸಿಯುಇಟಿಯಿಂದ ಕೇಂದ್ರೀಯ ವಿವಿಗಳ ಶೈಕ್ಷಣಿಕ ವರ್ಷ ವಿಳಂಬ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗದ ಮೇಲೂ ಪರಿಣಾಮ ಉಂಟಾಗಿಲ್ಲ. ತಾಂತ್ರಿಕ ಮತ್ತು ಹವಾಮಾನ ವೈಪರೀತ್ಯದಿಂದ ಸಿಯುಇಟಿ ಪರೀಕ್ಷೆ ದಿನಾಂಕದಲ್ಲಿ ಕೆಲವು ಕಡೆ ವ್ಯತ್ಯಯ ಆಗಿದೆ ಅಷ್ಟೆ.
  • ಕೋವಿಡ್ ನಂತರದಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದ್ದು, ಖಾಸಗಿ ಶಾಲೆಗಳ ಪ್ರವೇಶಾತಿಯಲ್ಲಿ ಇಳಿಕೆ ಆಗಿದೆ. 2019-20ರಲ್ಲಿ 13.49 ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗಿದ್ದರೆ 2020-21ರಲ್ಲಿ ಈ ಸಂಖ್ಯೆ 14.32 ಕೋಟಿ ಮೀರಿದೆ.
  • ಭಾರತದ 3,560 ಕಂಪನಿಗಳಲ್ಲಿ ಚೀನಾ ಮೂಲದ ನಿರ್ದೇಶಕರು ಇದ್ದಾರೆ. ಚೀನಾ ಮೂಲದ 174 ಕಂಪನಿಗಳು ವಿದೇಶಿ ಸಂಸ್ಥೆಗಳಾಗಿ ನೋಂದಣಿಯಾಗಿವೆ.
  • ಕಳೆದ ಮೂರು ತ್ರೖೆಮಾಸಿಕದಿಂದ ಹಣದುಬ್ಬರ ಏರುಗತಿಯಲ್ಲಿ ಇದ್ದಿದ್ದರ ಕುರಿತು ಆರ್​ಬಿಐ ಸಲ್ಲಿಸಿರುವ ವರದಿಯನ್ನು ಸರ್ಕಾರ ಸಾರ್ವತ್ರಿಕಗೊಳಿಸುವುದಿಲ್ಲ. ಆರ್​ಬಿಐ ಕಾಯ್ದೆ 45ಝೆಡ್​ಎನ್ ಸೆಕ್ಷನ್ ಪ್ರಕಾರ ವರದಿಯನ್ನು ಬಹಿರಂಗ ಪಡಿಸಬೇಕು ಎಂಬ ಕಟ್ಟಲೆಯೇನೂ ಇಲ್ಲ.
  • ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರು, ಪ್ರಾಂಶುಪಾಲರ ಕೊರತೆ ಇಲ್ಲ. ಗುತ್ತಿಗೆ ಆಧಾರದ ನೇಮಕಾತಿಗಳು ವಿಳಂಬ ಇಲ್ಲದೆ ಕಾಲಕಾಲಕ್ಕೆ ನಡೆಯುತ್ತಿವೆ.
  • 2023ರ 10ನೇ ತರಗತಿ ಸಿಬಿಎಸ್​ಇ ಪರೀಕ್ಷೆ ಯಲ್ಲಿ ಶೇ. 40 ಮತ್ತು 12ನೇ ತರಗತಿ ಯಲ್ಲಿ ಶೇ. 30ರಷ್ಟು ಪ್ರಶ್ನೆಗಳು ಸ್ಪರ್ಧಾತ್ಮಕ ಸಾಮರ್ಥ್ಯದ ಆಧಾರದಲ್ಲಿ ಇರಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net