ರೆಪೊ ದರದಲ್ಲಿ ಬದಲಾವಣೆ ಇಲ್ಲ; ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆ ತೀರ್ಮಾನ

RBI
Published on

ಮುಂಬೈ: ಸತತ 8ನೇ ಸಾರಿಯೂ ರೆಪೊ ದರ ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು ಶೇ. 3.35 ರಲ್ಲೇ ಮುಂದುವರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ), ಮಾರ್ಜಿನಲ್ ಸ್ಟಾ್ಯಂಡಿಂಗ್ ಫೆಸಿಲಿಟಿ (ಎಂಎಸ್​ಎಫ್) ಮತ್ತು ಬ್ಯಾಂಕ್​ಗಳ ಬಡ್ಡಿ ದರವನ್ನು ಶೇ. 4.25ರಲ್ಲೇ ಸ್ಥಿರಗೊಳಿಸಿದೆ. 2021-22ನೇ ಸಾಲಿನ ಹಣದುಬ್ಬರದ ಪ್ರಮಾಣವನ್ನು ಶೇ. 5.3ಕ್ಕೆ ಇಳಿಸಿದೆ. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ವನ್ನು ಶೇ. 9.5ಕ್ಕೆ ಎತ್ತರಿಸಿದೆ. ತತಕ್ಷಣದ ಪಾವತಿ ಸೇವೆಯ (ಐಎಂಪಿಎಸ್) ಮಿತಿಯನ್ನು 2 ಲಕ್ಷ ರೂಪಾಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವ ಮಾಡಿದೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಪನ್ನವಾದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್-19 ಸಂಕಷ್ಟದಿಂದ ನಲುಗಿದ್ದ ಆರ್ಥಿಕತೆ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಬಡ್ಡಿ ದರ ಕಡಿತದ ಬಗ್ಗೆ ಆರ್​ಬಿಐ ಮುಕ್ತವಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹಣದುಬ್ಬರದ ದರ ತುಸು ಇಳಿಕೆ: 2021-22ನೇ ಸಾಲಿಗೆ ಈ ಮೊದಲು ಅಂದಾಜಿಸಿದ್ದ ಶೇ. 5.7ರ ಹಣದುಬ್ಬರ ಪ್ರಮಾಣವನ್ನು ಶೇ. 5.3ಕ್ಕೆ ಆರ್​ಬಿಐ ಇಳಿಸಿದೆ. ಈ ಹಣಕಾಸು ವರ್ಷದ ಮೂರನೇ ತ್ರೖೆಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ತಗ್ಗುವ ನೀರಿಕ್ಷೆಯನ್ನು ಅದು ವ್ಯಕ್ತಪಡಿಸಿದೆ. ಹಣದುಬ್ಬರ ದರ ಶೇ. 4ರೊಳಗೆ ಇರುವುದು ಉತ್ತಮ ಎಂಬುದು ಆರ್​ಬಿಐ ಸಲಹೆ. ಆದರೆ, ಇತ್ತೀಚಿನ ಅನೇಕ ತಿಂಗಳಿಂದ ಇದು ಆರ್​ಬಿಐ ಸೂಚಿಸಿದ್ದಕ್ಕಿಂತ ಶೇ. 2 ಹೆಚ್ಚಾಗಿಯೇ ಇದೆ.

ಶೇ. 9.5 ಜಿಡಿಪಿ ಬೆಳವಣಿಗೆ: ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ)ವನ್ನು ಶೇ. 9.5ಕ್ಕೆ ಆರ್​ಬಿಐ ಎತ್ತರಿಸಿದೆ. 2021-22ನೇ ಸಾಲಿನ ಎರಡನೇ ತ್ರೖೆಮಾಸಿಕದಲ್ಲಿ ಇದು ಶೇ. 7.9ರಷ್ಟು ಇರಲಿದೆ ಎಂದು ಅದು ಹೇಳಿದೆ. ಸೆಪ್ಟೆಂಬರ್​ಗೆ ಕೊನೆಗೊಂಡಿರುವ ಈ ತ್ರೖೆಮಾಸಿಕದ ವರದಿ ಇನ್ನಷ್ಟೆ ಬರಬೇಕಿದೆ. ಕರೊನಾ ಸಾಂಕ್ರಾಮಿಕದ 2ನೇ ಅಲೆ ವೇಳೆ ನೆಲಕಚ್ಚಿದ್ದ ಎಲ್ಲ ವಲಯಗಳು ನಿರಂತರ ಚಟುವಟಿಕೆಯಿಂದ ಕೂಡಿರುವುದರಿಂದ ಜಿಡಿಪಿಯಲ್ಲಿ ಪ್ರಗತಿ ಆಗುತ್ತಿದೆ ಎಂದು ಆರ್​ಬಿಐ ತಿಳಿಸಿದೆ.

ಐಎಂಪಿಎಸ್ ಮಿತಿ ಹೆಚ್ಚಳ: ದಿನದ 24 ತಾಸಿನಲ್ಲೂ ಖಾತೆಯಿಂದ ಖಾತೆಗೆ ಹಣ ವರ್ಗಾಯಿಸುವ ಐಎಂಪಿಎಸ್ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಲು ಎಂಪಿಸಿ ಸಭೆಯಲ್ಲಿ ಪ್ರಸ್ತಾವ ಮಂಡನೆಯಾಗಿದೆ. ಎಸ್​ಎಂಎಸ್ ಮತ್ತು ಐವಿಆರ್​ಎಸ್ ಮೂಲಕ ಐಎಂಪಿಎಸ್ ಸೇವೆಯನ್ನು ಪಡೆಯಲು ಕನಿಷ್ಠ 5 ಸಾವಿರ ರೂಪಾಯಿಗಳ ವರ್ಗಾವಣೆ ಕಡ್ಡಾಯ ಎಂದು ಆರ್​ಬಿಐ ತಿಳಿಸಿದೆ.

ಪಾಯಿಂಟ್ ಆಫ್ ಸೇಲ್ (ಪಿಒಎಸ್), ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಮೂಲಕ ನಡೆಯುವ ಪಾವತಿ ಸ್ವೀಕೃತಿ (ಪಿಎ)ಯ ವ್ಯಾಪಕ ಲಭ್ಯತೆ ಹೆಚ್ಚಿಸಲು ಆರ್​ಬಿಐ ಮುಂದಾಗಿದೆ. ಪಿಎ ಮೂಲಸೌಕರ್ಯದ ಕೊರತೆ ಹೊಂದಿರುವ ಪ್ರದೇಶದಲ್ಲಿ ಜಿಯೋ ಟ್ಯಾಗಿಂಗ್ ತಂತ್ರಜ್ಞಾನದ ಚೌಕಟ್ಟನ್ನು (ಫ್ರೇಮ್ ವರ್ಕ್) ಪರಿಚಯಿಸಲು ಬಯಸಿದೆ.

ಹಣದುಬ್ಬರ ಹೆಚ್ಚಾಗಲು ಇಂಧನ ತೈಲ ದರದ ಏರಿಕೆಯೇ ಪ್ರಮುಖ ಕಾರಣ. ಹೀಗಾಗಿ ತೈಲದ ಮೇಲೆ ವಿಧಿಸಲಾಗಿರುವ ತೆರಿಗೆಗಳನ್ನು ಸರ್ಕಾರ ತಗ್ಗಿಸಬೇಕು. ಇದರಿಂದ ಶ್ರೀಸಾಮಾನ್ಯನ ಜೀವನ ಸುಗಮವಾಗುತ್ತದೆ. ಖಾದ್ಯ ತೈಲದ ಬೆಲೆ ಕೂಡ ಕಳವಳಕಾರಿಯಾಗಿದೆ. | ಶಕ್ತಿಕಾಂತ್ ದಾಸ್ ಆರ್​ಬಿಐ ಗವರ್ನರ್

ಸಭೆಯ ಇತರ ನಿರ್ಧಾರಗಳು

  • ಹಣಕಾಸು ವಂಚನೆ ತಡೆಯಲು ‘ರೆಗ್ಯುಲಟರಿ ಸ್ಯಾಂಡ್​ಬಾಕ್ಸ್ ಸ್ಕೀಂ’ ಪರಿಚಯ.
  • ಎನ್​ಬಿಎಫ್​ಸಿಗಳಲ್ಲಿ ಗ್ರಾಹಕರ ಕುಂದುಕೊರತೆ ನಿವಾರಿಸಲು ಆಂತರಿಕ ಒಂಬುಡ್ಸ್​ಮನ್ ವ್ಯವಸ್ಥೆ.
  • ಜಿಎಸ್​ಎಪಿ ಕಾರ್ಯಕ್ರಮದಲ್ಲಿ ಸರ್ಕಾರಿ ಬಾಂಡ್​ಗಳ ಖರೀದಿ ಸ್ಥಗಿತ.
  • ವಿಆರ್​ಆರ್​ಆರ್ 14 ದಿನದ ಹರಾಜು ಪ್ರಕ್ರಿಯೆ ಸ್ಥಗಿತ. ಮುಂದಿನ ಎರಡು ತಿಂಗಳಿಗೆ ಹರಾಜಿನ ಮೊತ್ತ 1ರಿಂದ 2 ಲಕ್ಷ ಕೋಟಿ ರೂ.ಗೆ ನಿಗದಿ.
  • ಸಣ್ಣ ಬ್ಯಾಂಕ್​ಗಳ ಎಸ್​ಎಲ್​ಟಿಆರ್​ಒ ಸಾಲ ಯೋಜನೆ ಮೂರು ವರ್ಷ ವಿಸ್ತರಣೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net