ಮುಂದಿನ ಚುನಾವಣೇಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇಲ್ಲ

ashok naik
ಮಾಜಿ ಶಾಸಕ ಅಶೋಕ್‌ನಾಯ್ಕ ಜನ್ಮದಿನಾಚರಣೆ ಅಂಗವಾಗಿ ಆನವೇರಿಯ ಹಿರಿಮಾವುರದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಲ್ಲೇಶಪ್ಪ, ಕಿರಣ್‌ಕುಮಾರ್, ಜಗದೀಶಪ್ಪ ಗೌಡ, ಎ.ಕೆ.ರಮೇಶ್, ಎಸ್.ಶ್ರೀನಿವಾಸ್ ಇತರರಿದ್ದರು.
Published on

ಹೊಳೆಹೊನ್ನೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲದೆ ಬಿಜೆಪಿ ಏಕಾಂಗಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಗ್ರಾಮಾಂತರ ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ ಹೇಳಿದರು.

ಸಮೀಪದ ಆನವೇರಿಯ ಹಿರಿಮಾವುರದಮ್ಮ ದೇವಸ್ಥಾನದಲ್ಲಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇರುವುದಿಲ್ಲ. ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾರ್ಯಕರ್ತರು ಹೊಸ ಹುರುಪಿನಿಂದ ಪಕ್ಷದ ಏಳಿಗೆಗೆ ಶ್ರಮಿಸಬೇಕು. ಆದ್ದರಿಂದ ಕಾರ್ಯಕರ್ತರು ಈಗಿನಿಂದಲೇ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಿಗೂ ಪಕ್ಷವನ್ನು ಸದೃಢಗೊಳಿಸಬೇಕಿದೆ. ಏನನ್ನಾದರೂ ಕಳೆದುಕೊಂಡ ಮೇಲೆ ಅದರ ಬೆಲೆ ತಿಳಿಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಿಮ್ಮ ಸಹಕಾರ ಕೇಳುತ್ತಿದ್ದೇನೆ ಎಂದರು.

ನಾಮಫಲಕಕ್ಕಾಗಿ ನಾವು ಕೆಲಸ ಮಾಡಿದವರಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿವೆ. ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರವನ್ನು ಮರೆಯುವಂತಿಲ್ಲ. ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ರಚೆನೆಯಾಗಿ, ಪಟ್ಟಣಕ್ಕೆ ಒಂದು ಹೊಸ ರೂಪ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರಕ್ಕೆ ಯಾವ ಅನುದಾನವೂ ಬಂದಿಲ್ಲ ಎಂದು ಟೀಕಿಸಿದರು.

ರಾಮ್ಕೋ ಅಧ್ಯಕ್ಷ ಜಗದೀಶಪ್ಪ ಗೌಡ ಮಾತನಾಡಿ, ಗ್ರಾಮಾಂತರ ಕ್ಷೇತ್ರದ ಜನ ಅಭಿವೃದ್ಧಿ ಕಾಣದೆ ಸೊರಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅನುಕಂಪಕ್ಕೆ ಮರುಗಿ ಮತ ನೀಡಿದ ಗ್ರಾಮೀಣ ಜನರ ನಿರೀಕ್ಷೆ ತಲೆಕೆಳಗಾಗಿದೆ ಎಂದು ಹೇಳಿದರು.

ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಯುವ ಮೋರ್ಚಾ ಅಧ್ಯಕ್ಷ ಕಿರಣ್‌ಕುಮಾರ್, ಎ.ಕೆ.ರಮೇಶ್, ಎಸ್.ಶ್ರೀನಿವಾಸ್, ಡಿ.ಮಂಜುನಾಥ, ಸುಬ್ರಹ್ಮಣಿ, ರಾಧಕೃಷ್ಣ, ಸಿದ್ದಲಿಂಗಪ್ಪ, ಜಗದೀಶಪ್ಪ ಗೌಡ, ನಾಗೇಶ್ ರೆಡ್ಡಿ, ಸಿದ್ದಪ್ಪ, ವೆಂಕಟೇಶ್, ಶಿವನ ಗೌಡ, ರಂಗಪ್ಪ, ಶಂಕರಮೂರ್ತಿ, ಈಶ್ವರಪ್ಪ, ಕಿರಣ್‌ಕುಮಾರ್, ತಿಪ್ಪೇಶ್, ವಿರೇಶಪ್ಪ, ಬಸವರಾಜಪ್ಪ, ವಿಜಯಮ್ಮ, ರೇಣುಕಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net