

ಬೆಂಗಳೂರು: ಶಿಕ್ಷಣ, ಉದ್ಯೋಗದಲ್ಲಿ ಮೀಸಲು, ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಗುತ್ತದೆ ಎಂಬ ಅರಿವಿಲ್ಲ. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಗೊತ್ತಿಲ್ಲ, ಸೌಲಭ್ಯಗಳೂ ಸುಳಿದಿಲ್ಲ. ಹಾಸಿ ಹೊದ್ದು ಮಲಗುವಷ್ಟಿರುವ ಬಡತನಕ್ಕೆ ಬರವಿಲ್ಲ.
ಇದು ಯಾವುದೇ ದ್ವೀಪ, ಕಗ್ಗತ್ತಲೆ ಖಂಡ, ದಟ್ಟಾರಣ್ಯದ ನಿವಾಸಿಗಳ ಕಥೆ-ವ್ಯಥೆಯಲ್ಲ. ನಮ್ಮೊಂದಿಗೆ, ನಮ್ಮ ಸುತ್ತಮುತ್ತಲಿರುವ ಅಭಿವೃದ್ಧಿ ವಂಚಿತ, ನಿರ್ಲಕ್ಷಿತ ಸೂಕ್ಷ್ಮ, ಅತಿಸೂಕ್ಷ್ಮ, ಸಣ್ಣ ಶೋಷಿತ ಸಮುದಾಯಗಳ ಸ್ಥಿತಿಗತಿ.
ಎಸ್‌ಸಿ ಮೀಸಲು ವರ್ಗೀಕರಣ ಉದ್ದೇಶದಿಂದ ಪರಿಶಿಷ್ಟರ 101 ಜಾತಿಗಳ ಸಮಗ್ರ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಸಲ್ಲಿಕೆಯಾದ ನ್ಯಾ.ಎಚ್.ಎನ್. ನಾಗಮೋಹನ್‌ದಾಸ್ ವರದಿಯು ಕಟುಸತ್ಯಗಳ ಭಂಡಾರವನ್ನು ತೆರೆದಿಟ್ಟಿದೆ.
ಪದವಿ ಶಿಕ್ಷಣವೇ ದೊಡ್ಡದು, ಸರ್ಕಾರಿ ನೌಕರಿಯನ್ನೇ ಪಡೆಯದ ಜಾತಿಗಳು, ಅಭಿವೃದ್ಧಿ ನಿಗಮ ಇವೆ ಎಂಬ ಕಲ್ಪನೆಯೇ ಇಲ್ಲದ, ಅನುದಾನ ಪಡೆಯದವರು, ಅಸ್ಪೃಶ್ಯರೊಳಗೆ ಅಸ್ಪೃಶ್ಯತೆ, ತಾರತಮ್ಯ ಆಚರಣೆ, ಸವಲತ್ತುಗಳಿಂದ ವಂಚಿತರು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬಹು ಉದ್ದವಾಗುತ್ತದೆ.
ರಾಜಕೀಯ ಪ್ರಾತಿನಿಧ್ಯವೇ ಸಿಕ್ಕಿಲ್ಲ
ಪರಿಶಿಷ್ಟರ 101 ಜಾತಿಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆಯದೆ ಇರುವ ಒಳಜಾತಿಗಳ ಪಟ್ಟಿಯಲ್ಲಿ ಅನಾಮುಕ್, ಆರ್ಯಮಾಲಾ, ಅರುಂಧತಿಯಾರ್, ಅಶ್ವಮಾಲಾ, ಬಾಕಡ್, ಬಂಡಿ, ಬಿಂಡ್ಲಾ, ಚಕ್ಕಿಲಿಯನ್, ಚಂಡಾಲ, ಡಕ್ಕಲ್(ದೊಕ್ಕಲವಾರ್), ದಕ್ಕಲಿಗ, ಕುರುವನ್, ಲಿಂಗಾಡೇರ್, ಸಪಾರಿ, ವಲ್ಲುವನ್, ಮಹ್ಯಾವಂಶಿ (ಧೆಡ್, ವಂಕರ್, ಮಾರು, ವಂಕರ್) ಮಾಲಾ ಹನ್ನಯ್, ಮಾಲಾ ಜಂಗಮ್, ಮಾಲಾ ಮಾಸ್ತಿ, ಮಾಲಾ ಸಾಲೆ, ನೆತ್ಕಾನಿ, ಸಂಬನ್, ಗಾರೋಡಾ (ಗಾರೋ), ಗೊಡ್ಡಾ, ಹಸಲಾ, ಜಗ್ಗಲಿ, ಕದಾಯನ್, ಕೆಪ್ ಮಾರೀಸ್, ಕೊಲುಪುಲ್ ವಂಡು, ಕೂಸ, ಕುಡುಂಬನ್, ಮಚಲಾ, ಮಾದಾರಿ, ಸಿಂದೊಳ್ಳು (ಚಿಂದೊಳ್ಳು), ಮನ್ನೆ, ಮಾವಿಲನ್, ಮೆಘವಾಲ್ (ಮೆಂಘವಾರ್, ಎಲ್ಲಮಲವಾರ್ (ಯೆಲ್ಲಮ್ಮಲವಾಂಡ್ಲು), ನಯಾಡಿ, ಪಂಚಮ, ಪನ್ನಿಯಾಂಡಿ, ತಿರ್‌ಗರ್ (ತಿರ್‌ಬಂದ), ನಾಡಿಯಾ (ಹಾಡಿ) ಸೇರಿ 42 ಒಳಜಾತಿಗಳು ಸೇರಿವೆ.
ಅತೀ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದ 51 ಸಮುದಾಯಗಳಿವೆ. ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದವರ ಪಟ್ಟಿಯಲ್ಲಿ ಹೊಲೆಯ ಮೊದಲ ಸ್ಥಾನದಲ್ಲಿದೆ. ಮಾದಿಗ, ಆದಿ ಕರ್ನಾಟಕ, ಬಂಜಾರ ಮತ್ತು ಭೋವಿ ಆನಂತರದ ಸ್ಥಾನದಲ್ಲಿವೆ.
ಕಾರಣ ಏನು?
ಬಡತನ, ಅನಕ್ಷರತೆ, ಕಡಿಮೆಜನಸಂಖ್ಯೆ, ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಅರಿವಿನ ಕೊರತೆ, ರಾಜಕೀಯ, ಸಾಮಾಜಿಕ ಪ್ರಜಾಪ್ರಭುತ್ವದ ತಿಳುವಳಿಕೆ ಇಲ್ಲದೆ ಇರುವುದರ ಜತೆಗೆ ಸಂಘಟನೆಗಳು ದುರ್ಬಲವಾಗಿರಬಹುದು ಎಂದು ಉಲ್ಲೇಖಿಸಲಾಗಿದೆ.
ಯೋಜನೆಗಳ ಬಗ್ಗೆ ಅರಿವೇ ಇಲ್ಲ
ಶೇ.41.59 ಎಸ್‌ಸಿ ಒಳಜಾತಿಯವರಿಗೆ ನಿಗಮ-ಮಂಡಳಿಗಳ ಬಗ್ಗೆ ಮತ್ತು ಅವುಗಳ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ. ಯಾರೊಬ್ಬರು ನೇರವಾಗಿ ಸಂಪರ್ಕದಲ್ಲಿ ಇಲ್ಲ. ಸರ್ಕಾರದಿಂದ ಬಿಡುಗಡೆ ಆಗುವ ಅನುದಾನದಲ್ಲಿ ಶೇ.88.52 ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣ ಖರ್ಚಾಗದೆ ಉಳಿದಿದೆ. ಬಿಡುಗಡೆಯಾದ ಶೇ.88.52ರಲ್ಲಿ ಶೇ.58.41 ಅನುದಾನ ಮಾತ್ರ ವಿನಿಯೋಗವಾಗಿದೆ. ಕೆಲವು ಯೋಜನೆಗಳು ಲಾನುಭವಿಗಳ ಅವಶ್ಯಕತೆಗಳಿಗೆ ತಕ್ಕಂತೆ ಇಲ್ಲದಿರುವುದು ಕಂಡು ಬಂದಿದೆ. ಅವರ ಕಸುಬಿನ ಮತ್ತು ಅವಶ್ಯಕತೆ ಆಧಾರದ ಮೇಲೆ ಯೋಜನೆಗಳು ರೂಪುಗೊಂಡಿಲ್ಲ. ಅಸ್ಪೃಶ್ಯತೆ ಮತ್ತು ಬಡತನ ಹೋಗಲಾಡಿಸಲು ಸೂಕ್ತ ಯೋಜನೆ ರೂಪಿಸುವ ಬಗ್ಗೆ ನಿಗಮ-ಮಂಡಳಿಗಳು ಗಮನಹರಿಸುವಂತೆ ಸಲಹೆ ನೀಡಲಾಗಿದೆ.
12 ಒಳಜಾತಿಗಳಲ್ಲಿ ಸರ್ಕಾರಿ ನೌಕರರೇ ಇಲ್ಲ
101 ಎಸ್‌ಸಿ ಒಳಜಾತಿಗಳ ಪೈಕಿ ಆದಿ ದ್ರಾವಿಡ, ಆದಿ ಕರ್ನಾಟಕ, ಬಂಜಾರ ( ಲಂಬಾಣಿ, ಲಂಬಾಡ), ಭಂಬಿ (ಅಸೊಡಿ, ಚಮರ್, ಹರಲಿ), ಭೋವಿ (ಒಡ್ಡ, ಒಡ್ಡರ್), ಛಲವಾದಿ, ಹೊಲಯಾ, ಕೊರಮಾ, ಮಾದಿಗ, ಸಮಗರ ಈ ಒಳಜಾತಿಗಳು ಹೆಚ್ಚು ಉದ್ಯೋಗ ಪಡೆದಿವೆ. 28 ಒಳಜಾತಿ ಮಧ್ಯಮ ಮಟ್ಟದ ಪ್ರಾತಿನಿಧ್ಯ, 51 ಒಳಜಾತಿ ಕಡಿಮೆ ಪ್ರತಿನಿಧ್ಯ ಪಡೆದಿವೆ. ಆದರೆ ಚಾಂಡಾಲ, ಗರೋಡಾ, ಕೆಪ್ಮರಿಸ್, ಕುಟುಂಬನ್, ಮಹ್ಯವಂಶಿ, (ಧೇಡ್, ವಂಕರ್, ಮಾರು), ಮಾಲಾ ಹನ್ನೆ , ಮಾಲಾ ಮಾಸ್ತಿ, ಮಾಲಾ ಸೇಲ್ (ನೆಟ್ಕಣಿ), ಮಾಸ್ತಿ, ಮಾವಿಲನ್, ಪನ್ನೀಂಡಿ, ಸಿಂಧೋಲ್ಲು (ಚಿಂದೋಲ್ಲು) ಒಳಜಾತಿಗಳಲ್ಲಿ ಯಾರೊಬ್ಬರು ಸರ್ಕಾರಿ ನೌಕರಿಯಲ್ಲಿ ಇಲ್ಲ ಎಂಬುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಶೇ.75 ಅಸ್ಪೃಶ್ಯತೆ ಜೀವಂತ!
ಸ್ವಾತಂತ್ರ್ಯಾನಂತರದಲ್ಲಿಯೂ ಅಸ್ಪೃಶ್ಯತೆ ನೀಗಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿನ 101 ಜಾತಿಗಳು ಒಂದಲ್ಲ ಒಂದು ರೀತಿಯಲ್ಲಿ ಅಸ್ಪೃಶ್ಯತೆಗೊಳಗಾಗಿದ್ದು, ಶೇ.75 ಜನರು ಇಂದಿಗೂ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದ್ದಾರೆ. ಅಚ್ಚರಿ ಅಂದರೆ ಶೇ.45 ಜಾತಿಗಳು, ದೌರ್ಜನ್ಯ ಪ್ರಶ್ನಿಸುವ ಧೈರ್ಯವಿಲ್ಲದೆ ಭಯದಲ್ಲಿ ಜೀವಿಸುತ್ತಿವೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಯಾವ ರೀತಿ ಅಸ್ಪೃಶ್ಯತೆ?
ದೇವಾಲಯಗಳ ಪ್ರವೇಶ ನಿಷೇಧ, ಸಾಮೂಹಿಕ ಆಹಾರ ಸೇವನೆಯಲ್ಲಿ ನಿಷೇಧ, ಪ್ರತ್ಯೇಕ ಟೀ ಲೋಟ ನೀಡಿಕೆ, ಪ್ರತ್ಯೇಕ ಆಸನ ವ್ಯವಸ್ಥೆ, ಮನೆಗಳ ಪ್ರವೇಶ ನಿಷೇಧ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧ, ರಸ್ತೆಗಳ ಬಳಕೆಗೆ ನಿಷೇಧ, ಶಾಲೆಗಳಲ್ಲಿ ತಾರತಮ್ಯ, ಜೀತ ಪದ್ಧತಿ ಆಚರಣೆ, ಬಲತ್ಕಾರ ಮತ್ತು ದೌರ್ಜನ್ಯ ಹೆಸರಿನಲ್ಲಿ ತಾರತಮ್ಯ ಈಗಲೂ ಜಾರಿಯಲ್ಲಿವೆ ಎಂದು ವರದಿ ತಿಳಿಸಿದೆ.
ಮೂರು ಗುಂಪುಗಳು ಅಸಮ
ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸೇರಿ 3 ಜಾತಿಗಳ ಗುಂಪುಗಳಿವೆ. ಈ ಗುಂಪಿನಲ್ಲಿರುವ ಎ ವೃಂದದಲ್ಲಿ 1062, ಬಿ ವೃಂದದಲ್ಲಿ 1312, ಸಿ ವೃಂದದಲ್ಲಿ 14,939 ಹಾಗೂ ಡಿ ಉದ್ಯೋಗದಲ್ಲಿ 8107 ಸೇರಿ ಒಟ್ಟು 25,420 ಜನರು (ಇವರ ಒಟ್ಟು ಜನಸಂಖ್ಯೆಯ ಶೇ.5.35) ಸರ್ಕಾರಿ ಉದ್ಯೋಗ ಅವಲಂಬಿಸಿದ್ದಾರೆ. 3826 ರಾಜಕೀಯ ಪ್ರತಿನಿಧಿಗಳು (0.81 ಪ್ರತಿನಿಧ್ಯತೆ) ಇದ್ದರೆ, ಆರ್ಥಿಕವಾಗಿ ಇವರು ಹೊಂದಿರುವ ಭೂ ಒಡೆತನದ ಪ್ರಮಾಣ ಶೇ.20.34 ಎಂದು ವರದಿಯಲ್ಲಿ ನಮೂದಿಸಲಾಗಿದೆ.
ಲಿಂಗ ಸಮಾನತೆ
101 ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 1.07 ಕೋಟಿ ಮೀರಿದೆ. ಪರಿಶಿಷ್ಟ ಜಾತಿಯಲ್ಲಿ ಲಿಂಗ ಸಮಾನತೆ ಸಕಾರಾತ್ಮಕವಾಗಿದೆ. ಶೇ.50.12 ಪುರುಷರು (53,64,014) ಇದ್ದರೆ, ಮಹಿಳೆಯರು ಶೇ.49.80 (53,33,273) ಇದ್ದಾರೆ.