ಬಿಕ್ಕಳಿಕೆಯಿಂದ ಬಿಡುಗಡೆಗೆ ಆಯುರ್ವೆದದಲ್ಲಿದೆ ಮದ್ದು

Hiccups
Published on
d
ಬಿಕ್ಕಳಿಕೆಯಲ್ಲಿ ಐದು ವಿಧಗಳನ್ನು ಹೇಳಿರುವ ಆಯುರ್ವೆದವು ರೋಗದ ಉತ್ಪತ್ತಿಗೆ ನಾನಾ ಕಾರಣಗಳನ್ನು ಪಟ್ಟಿಮಾಡಿ ಹೇಳಿದೆ. ಹೊಟ್ಟೆಯಲ್ಲಿ ಉರಿಯನ್ನು ಉಂಟುಮಾಡುವ ಗುಣವುಳ್ಳ ಆಹಾರ ಪದಾರ್ಥಗಳ ಸೇವನೆ, ಜೀರ್ಣಕ್ಕೆ ಕಷ್ಟಕರವಾದ ಅನ್ನಪಾನಾದಿಗಳು, ಮಲಬದ್ಧತೆಯನ್ನು ಉಂಟುಮಾಡುವ ಆಹಾರ ವಸ್ತುಗಳು, ಒಣ ಆಹಾರ ಸೇವನೆ, ದೇಹದ ಸೂಕ್ಷ್ಮ ನಾಡಿಗಳಲ್ಲಿ ತಡೆಯನ್ನು ಉಂಟು ಮಾಡುವ ಪದಾರ್ಥಗಳ ಭೋಜನ, ಅತಿಶೀತಲವಾದ ಅನ್ನಪಾನಾದಿ ಗಳು, ಧೂಳು ಹಾಗೂ ಹೊಗೆಗಳಿಂದ ಮಾಲಿನ್ಯಗೊಂಡ ಪ್ರದೇಶಗಳಲ್ಲಿ ಇರುವುದು, ಮಿತಿಮೀರಿ ವ್ಯಾಯಾಮ ಮಾಡುವುದು, ಅತಿಯಾದ ಭಾರವನ್ನು ಎತ್ತುವುದು, ಕಾಲ್ನಡಿಗೆ ಒಳ್ಳೆಯದೆಂದುಕೊಂಡು ಬಹಳ

ದೂರ ನಡೆದಾಡುವುದು, ಮಲಮೂತ್ರಾದಿ ಸಹಜ ಪ್ರಕ್ರಿಯೆಗಳನ್ನು ಪ್ರಕೃತಿಗೆ ವಿರುದ್ಧವಾಗಿ ತಡೆಹಿಡಿಯುವುದು, ಪ್ರಖರವಾದ ಬಿಸಿಲಿಗೆ ಮೈಯನ್ನು ಒಡ್ಡುವುದು, ಶರೀರದ ಶಕ್ತಿಯನ್ನು ಮೀರಿ ಉಪವಾಸ ಮಾಡುವುದು, ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸದೆ ದೇಹವನ್ನು ದಂಡಿಸುವುದು, ಕಫವನ್ನು ಹೆಚ್ಚಿಸುವ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೆಗೆದುಕೊಳ್ಳುವುದು ಇವೇ ಮೊದಲಾದ ಕಾರಣಗಳಿಂದ ಶರೀರ ಪೋಷಕ ರಸಗಳು ದೇಹಕ್ಕೆ ಬೇಕಾದ ಪ್ರಮಾಣ

ದಲ್ಲಿ ಸಿಗದೆ ಹಾಗೂ ಉಸಿರಾಟಕ್ಕೆ ಪರಿಶುದ್ಧ ಗಾಳಿಯು ಲಭ್ಯವಾಗದೆ ಪ್ರಾಣವಹ ಸ್ರೋತಸ್​ನಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಇವೆಲ್ಲವುಗಳ ಜೊತೆಯಲ್ಲಿ ಪಚನಶಕ್ತಿಯೂ ಕಡಿಮೆಯಾದರೆ ಸರಿಯಾಗಿ ಜೀರ್ಣಿಸದೆ ಪುಪ್ಪುಸದ ಕಾರ್ಯದಕ್ಷತೆಯ ಮೇಲೆ ಮತ್ತಷ್ಟು ದುಷ್ಪರಿಣಾಮವನ್ನು ಬೀರುತ್ತದೆ. ಕಾಲಕ್ರಮೇಣ ಇವೆಲ್ಲವೂ ನಿಧಾನವಾಗಿ ಬಿಕ್ಕಳಿಕೆಗೆ ಕಾರಣವಾಗುತ್ತವೆ. ಐದು ವಿಧವಾದ ಬಿಕ್ಕಳಿಕೆ ರೋಗಗಳ ಪೈಕಿ ಅನ್ನಜ ಹಿಕ್ಕಾ, ಕ್ಷುದ್ರ ಹಿಕ್ಕಾ, ಯಮಲ ಹಿಕ್ಕಾಗಳು ಯಾವುದೇ ವಿಧವಾದ ಸಂಕೀರ್ಣತೆಗಳಿಂದ ಕೂಡಿಲ್ಲವಾಗಿದ್ದಲ್ಲಿ ಸುಲಭವಾಗಿ ವಾಸಿಯಾಗುತ್ತವೆ. ಗಂಭೀರ ಹಿಕ್ಕಾ ಹಾಗೂ ಮಹತೀ ಹಿಕ್ಕಾಗಳು ಸಾಮಾನ್ಯವಾಗಿ ಆಯುರ್ವೆದ ಔಷಧೋಪಚಾರಗಳಿಂದ ನಿಯಂತ್ರಣಕ್ಕೆ ಬರಬಹುದು, ಆದರೆ ಗುಣವಾಗುವುದಿಲ್ಲ. ವಾತ, ಕಫ ದೋಷಗಳು ಶರೀರದಲ್ಲಿ ಅತಿಯಾಗಿ

ಉಲ್ಬಣಗೊಂಡಿದ್ದರೆ, ಸರಿಯಾದ ಪ್ರಮಾಣದಲ್ಲಿ ಆಹಾರವಿಲ್ಲದೆ ದೇಹವು ತುಂಬಾ ಕ್ಷೀಣವಾಗಿದ್ದರೆ, ಬೇರೆ ಕಾಯಿಲೆಗಳ ಪರಿಣಾಮ ವಾಗಿ ದೇಹವು ಶಕ್ತಿ ಕಳೆದುಕೊಂಡಿದ್ದರೆ, ಮುಪ್ಪಿನಿಂದಾಗಿ ದೇಹವು ದುರ್ಬಲವಾಗಿದ್ದರೆ, ಮಿತಿಮೀರಿದ ಲೈಂಗಿಕ ಕ್ರಿಯೆಯಿಂದ ಶರೀರವು ಸೊರಗಿದ್ದರೆ ಗುಣಪಡಿಸಲು ಸಾಧ್ಯವಿರುವಂತಹ ಬಿಕ್ಕಳಿಕೆಯೂ ಪ್ರಾಣಾಪಾಯವನ್ನು ತಂದೊಡ್ಡುವ ಸಾಧ್ಯತೆಯಿರು ತ್ತದೆ. ಅಸಂಬದ್ಧ ಮಾತು, ವ್ಯಥೆ, ಅತಿಬಾಯಾರಿಕೆ, ಎಚ್ಚರ ತಪ್ಪುವುದು, ಮೊದಲಾದ ಸನ್ನಿವೇಶಗಳಲ್ಲಿ ಯಮಲ ಹಿಕ್ಕಾವು ಚಿಕಿತ್ಸೆಗೆ ಕಷ್ಟಕರವಾಗುವ ಸಾಧ್ಯತೆಯಿರುತ್ತದೆ. ಶರೀರವು ಸದೃಢವಾಗಿದ್ದು ದೇಹವನ್ನು ಆಧರಿಸುವ ಧಾತುಗಳು ಪುಷ್ಟಿಯಿಂದ ಕೂಡಿದ್ದು ಮನಸ್ಸು ಲವಲವಿಕೆಯಿಂದ ಉಲ್ಲಸಿತವಾಗಿದ್ದು ಇಂದ್ರಿಯಗಳು ಪಟುತ್ವದಿಂದ ಕೂಡಿದ್ದಾಗ ಯಮಲ ಹಿಕ್ಕಾವನ್ನು ಗುಣಪಡಿಸು ವುದು ಸುಲಭಸಾಧ್ಯವಾಗುತ್ತದೆ. ಆರು ತಿಂಗಳಿ

ಗಿಂತಲೂ ಹಳೆಯ ಅಕ್ಕಿ ಅದರಲ್ಲೂ ವಿಶೇಷವಾಗಿ ಕೆಂಪಕ್ಕಿ, ಹಳೆಯ ಜೋಳ ಹಾಗೂ ಗೋಧಿ, ಹೆಸರುಕಾಳು, ಹುರುಳಿ, ಮೂಲಂಗಿ, ದೇಶೀದನದ ತುಪ್ಪ, ಆಡಿನ ಹಾಲು, ಜೇನುತುಪ್ಪ,ಸೊಪ್ಪುಗಳು, ನುಗ್ಗೆಕಾಯಿ, ಪಡುವಲಕಾಯಿ, ದ್ರಾಕ್ಷಿಹಣ್ಣು, ಅರಿಶಿನ, ಹಿಪ್ಪಲಿ, ಸೈಂಧವ ಲವಣಗಳು ಬಿಕ್ಕಳಿಕೆಯನ್ನು ಗುಣಪಡಿಸಲು ಸಹಾಯಕವಾಗುವ ಪಥ್ಯ ಉಪಚಾರಗಳು. ಒಣ ಆಹಾರ,ಅತಿ ತಂಪಾದ ಆಹಾರ, ಪಚನಕ್ಕೆ ಕಷ್ಟಕರವಾದ ಗುರು ಆಹಾರ, ಶೀತಲ ಪಾನೀಯ, ತಣ್ಣಗಿರುವ ನೀರು, ಧೂಳು, ಹೊಗೆಗಳಿಂದ ದೂಷಿತವಾಗಿರುವ ವಾತಾವರಣ, ಎಮ್ಮೆಯ ಹಾಲು, ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳು, ತಂಪಾದ ಕೋಣೆಯಲ್ಲಿರುವುದು, ಉದ್ದು, ಮೊಸರುಗಳ ಅತಿಯಾದ ಸೇವನೆ, ಮಲೆನಾಡಿನ ಪ್ರಾಣಿಗಳ ಮಾಂಸಾಹಾರ, ದೈಹಿಕ ಶ್ರಮದ ಕೆಲಸಗಳನ್ನು ಅಧಿಕವಾಗಿ ಮಾಡುವುದು, ಪೂರ್ವದಿಕ್ಕಿನ ಗಾಳಿ ಸೇವನೆ, ಅಗತ್ಯಕ್ಕಿಂತ ಹೆಚ್ಚಿನ ವ್ಯಾಯಾಮ, ನಡಿಗೆ ಮುಂತಾದ ಚಟುವಟಿಕೆಗಳು, ಮಲಮೂತ್ರ ಮೊದಲಾದ ಆಯುರ್ವೆದ ಹೇಳಿದ ಶಾರೀರಿಕ ಸಹಜ ವೇಗಗಳನ್ನು ತಡೆಯುವುದು, ಅತಿ ಲೈಂಗಿಕಕ್ರಿಯೆ, ರೋಗಕ್ಕೆ ಕಾರಣಗಳಾಗಿ ಪ್ರಸ್ತಾಪಿಸಿದ ಅನ್ಯವಿಚಾರಗಳು. ಇವುಗಳೆಲ್ಲ ಅಪಥ್ಯಗಳಾಗಿರುವುದರಿಂದ ಇವನ್ನು ವರ್ಜಿಸಿದರೆ ಬಿಕ್ಕಳಿಕೆ

ಯನ್ನು ಬೇಗನೆ ಗುಣಪಡಿಸಿಕೊಳ್ಳಬಹುದು. ಬಿಕ್ಕಳಿಕೆಗೆ ಅದರ ವಿಧಕ್ಕನುಸಾರವಾಗಿ ನಾನಾ ಚಿಕಿತ್ಸೆಯನ್ನು ಆಯುರ್ವೆದ ಹೇಳಿದೆ. ಪಂಚಕರ್ಮ ಚಿಕಿತ್ಸೆಯಲ್ಲಿ ಹೇಳಲಾದ ಸ್ನೇಹನ, ಸ್ವೇದನ, ದೇಹ ಶುದ್ಧೀಕರಣದ ವಿಧಾನಗಳಾದ ವಮನ, ವಿರೇಚನ ಕರ್ಮಗಳನ್ನು ಅಗತ್ಯಕ್ಕೆ ಅನುಸಾರವಾಗಿ ಅಳವಡಿಸಿಕೊಂಡರೆ ಲಾಭದಾಯಕ. ಬಿಸಿಬಿಸಿಯಾಗಿರುವ ಹಾಲಿನ ಸೇವನೆ, ಕೊತ್ತಂಬರಿ ಬೀಜದ ಕಷಾಯ ಕುಡಿಯುವುದು, ಶುಂಠಿಗೆ ಉಪ್ಪು ಸೇರಿಸಿ ಬಾಯಿಯಲ್ಲಿಟ್ಟು ಚಪ್ಪರಿಸುವುದು, ಮುಖಕ್ಕೆ ತಣ್ಣೀರನ್ನು ಎರಚುವುದು, ಮನಸ್ಸನ್ನು ಬೇರೆ ವಿಚಾರದೆಡೆಗೆ ಸೆಳೆಯುವುದು, ಅನಿರೀಕ್ಷಿತವಾಗಿ ಒಂದುಕ್ಷಣ ಭೀತಿಗೊಳಿಸುವುದು, ಬೆಚ್ಚಿಬೀಳುವಂತೆ ಮಾಡುವುದು, ರೋಗಿಯಲ್ಲಿ ಕ್ಷಣಿಕವಾಗಿ ಕೋಪ, ಹರ್ಷ, ಪ್ರೀತಿ ಹಾಗೂ ಉದ್ವೇಗಗಳನ್ನು ಉಂಟುಮಾಡುವುದು, ಸಮರ್ಪಕ ಅನ್ನ ಪಾನಾದಿಗಳ ಸೇವನೆಯು ಹಿಕ್ಕಾವನ್ನು ತಕ್ಷಣಕ್ಕೆ ನಿಲ್ಲಿಸಲು ಅನುಕೂಲವಾಗುವ ಮಾರ್ಗಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net