

ಬೆಂಗಳೂರು: ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಏಕೆಂದರೆ, ರಾಜ್ಯ ಸರ್ಕಾರ ಶೇ.15 ಶುಲ್ಕ ಹೆಚ್ಚಳ ಮಾಡಲು ಆಲೋಚನೆ ನಡೆಸುತ್ತಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ಮಾಲೀಕರ ಸಂಘ, ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಲು ಗುರುವಾರ ದಿನಾಂಕ ನಿಗದಿ ಮಾಡಿಕೊಂಡಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ಸಾಧ್ಯವಾಗಲಿಲ್ಲ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ ಶೇ.15 ಮತ್ತು ಖಾಸಗಿ ಕಾಲೇಜುಗಳಲ್ಲಿ ಶೇ.25 ಶುಲ್ಕ ಹೆಚ್ಚಳ ಮಾಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ವೈದ್ಯಕೀಯ ಕಾಲೇಜುಗಳು ಶೇ.25ರಿಂದ 30 ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಮುಂದಿಟ್ಟಿವೆ ಎಂದು ತಿಳಿದು ಬಂದಿದೆ. ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯಗಳು ವೈದ್ಯಕೀಯ ಕೋರ್ಸ್‌ಗೆ 12ರಿಂದ 15 ಲಕ್ಷ ರೂ. ಶುಲ್ಕ ನಿಗದಿ ಮಾಡಿವೆ. ಇದರಿಂದ ನಮ್ಮ ಕಾಲೇಜುಗಳಲ್ಲಿ ಸಹ ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಖಾಸಗಿ ವೈದ್ಯಕೀಯ ಕಾಲೇಜಿನ ಮಾಲೀಕರೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ವೈದ್ಯಕೀಯ ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟಿಗೆ 1,28,746 ರೂ. ಹಾಗೂ ಖಾಸಗಿ ಕಾಲೇಜಿನಲ್ಲಿ 9,81,956 ರೂ. ಇದೆ. ಇನ್ನು ದಂತ ವೈದ್ಯಕೀಯ ಕೋರ್ಸ್‌ಗೆ ಕ್ರಮವಾಗಿ 83,356 ರೂ. ಹಾಗೂ 6,66,023 ರೂ. ಇದೆ. ಕಳೆದ 10 ವರ್ಷದಲ್ಲಿ ವೈದ್ಯಕೀಯ ಕೋರ್ಸ್‌ನ ಶುಲ್ಕವನ್ನು ಶೇ.200 ಹೆಚ್ಚಳ ಮಾಡಿದೆ. 2006-07ರಲ್ಲಿ ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟು ಪಡೆಯಲು ವಿದ್ಯಾರ್ಥಿಗಳು 42 ಸಾವಿರ ರೂ. ಪಾವತಿಸಬೇಕಾಗಿತ್ತು.