

Increase Water Bills: ಕುಡಿಯುವ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ನಗರದ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂ ಆರ್ ಡಿ ಎ ಅಧಿಕಾರಿಗಳ ಜತೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು. ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣ, ನೀರಿನ ಸಂಪರ್ಕ ಹಾಗೂ ಬಳಕೆಯ ನಿಖರವಾದ ಲೆಕ್ಕವನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
2014 ರಿಂದ ಇಲ್ಲಿಯ ತನಕ ಅಂದರೆ 11 ವರ್ಷಗಳಿಂದ ನಗರದಲ್ಲಿ ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬಿಡ್ಬ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿಯಾಗುತ್ತಿತ್ತು. ಈ ಬಾರಿ 75 ಕೋಟಿಯಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ ಡಿಸಿಎಂ ಹೇಳಿದರು.
ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ನಗರದ ಎಲ್ಲಾ ಶಾಸಕರ ಬಳಿ ಹೋಗಿ ಮಂಡಳಿಯವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಜಾಲ ವಿಸ್ತರಣೆ ಮಾಡುವ ಸಲುವಾಗಿ ಅನೇಕ ಬ್ಯಾಂಕ್ ಗಳ ಬಳಿ ಸಾಲ ಕೇಳಲೂ ಆಗುತ್ತಿಲ್ಲ. ಬ್ಯಾಂಕ್ ಅವರು ಮಂಡಳಿ ನಷ್ಟದಲ್ಲಿದೆ ನಾವು ಸಹಾಯ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಹಣ ನೀಡುತ್ತಿರುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕು ಎಂದಾದರೆ ಹಣ ವಾಪಸಾತಿಯ ಬಗ್ಗೆ ಭರವಸೆ ನೀಡಿ ಎಂದು ತಿಳಿಸುತ್ತಿದ್ದಾರೆ ಎಂದರು.
ಈ ಹಿಂದೆ ಕೊಳೆಗೇರಿ ಹಾಗೂ ಬಡವರ ಉಪಯೋಗಕ್ಕೆ ಸರ್ಕಾರ ರೂ.20 ಕೋಟಿ ಹಣ ಮೀಸಲಿಟ್ಟಿತ್ತು. ಹಿಂದಿನ ಬಿಜೆಪಿ ಸರ್ಕಾರ ಈ ಸಹಾಯಧನವನ್ನು ನಿಲ್ಲಿಸಿತ್ತು. ಇದನ್ನು ಮುಂದುವರೆಸಲಾಗುವುದು. ಬಡವರಿಗೆ ನೀರು ನೀಡಿದರೂ ಸಹ ಅದು ಕೂಡ ಲೆಕ್ಕಕ್ಕೆ ಸಿಗಬೇಕು. 1 ಪೈಸೆ ಹಣ ನೀಡಿಯಾದರೂ ಸಂಪರ್ಕ ನೀಡಬೇಕು. ಯಾರು ಎಷ್ಟು ನೀರು ಪಡೆಯುತ್ತಿದ್ದಾರೆ ಎನ್ನುವ ಲೆಕ್ಕ ಸರ್ಕಾರಕ್ಕೆ ಸಿಗಬೇಕು. ಅನೇಕ ಕಡೆ ಕೊಳೆಗೇರಿ ಹೆಸರಿನಲ್ಲಿ ಉಳ್ಳವರು ನೀರು ಪಡೆಯುತ್ತಿದ್ದಾರೆ ಎಂದರು.