

ನವದೆಹಲಿ: ದೇಶದಲ್ಲಿ ಜನವರಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿದ್ದು, ಮುಂದಿನ 40 ದಿನಗಳು ನಿರ್ಣಾಯಕವಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಹಿಂದೆ, ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ 30ರಿಂದ 35 ದಿನಗಳ ನಂತರ ಕರೊನಾ ಹೊಸ ಅಲೆಯು ಭಾರತಕ್ಕೆ ಅಪ್ಪಳಿಸಿತ್ತು. ಇದೊಂದು ಪ್ರವೃತ್ತಿಯಾಗಿದ್ದು, ಇದು ಮತ್ತೆ ಮರುಕಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರೊನಾ ಅಲೆಯಿದ್ದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಮತ್ತು ಸೋಂಕಿನ ತೀವ್ರತೆ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಮಧ್ಯೆ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್, ಥಾಯ್ಲೆಂಡ್ ಮತ್ತು ಸಿಂಗಾಪುರ್ಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರು ಹೊರಡುವುದಕ್ಕೆ 72 ತಾಸು ಮುಂಚಿತವಾಗಿ ಈ ಪರೀಕ್ಷೆಯನ್ನು ಮಾಡಿಸಿ ಕೊಂಡಿರಬೇಕು ಮತ್ತು ಇದನ್ನು ‘ಏರ್ ಸುವಿಧಾ’ ಅರ್ಜಿ ಯಲ್ಲಿ ನಮೂದಿಸಿರಬೇಕು ಎಂಬ ಸೂಚನೆಯನ್ನು ಸರ್ಕಾರ ನೀಡಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಕಡ್ಡಾಯ ಪರೀಕ್ಷೆ ರದ್ದುಗೊಳಿಸಿದ ಹಾಂಕಾಂಗ್: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯವಾದ ಕೋವಿಡ್ ಪರೀಕ್ಷೆಯನ್ನು ರದ್ದು ಗೊಳಿಸಿರುವುದಾಗಿ ಹಾಂಕಾಂಗ್ ಬುಧವಾರ ಪ್ರಕಟಿಸಿದೆ. ಆದರೆ ಪ್ರಯಾಣಿಕರು ದೇಶವನ್ನು ಪ್ರವೇಶಿಸಲು ನೆಗಟಿವ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆಯ ಅಗತ್ಯವಿರುತ್ತದೆ ಎಂದು ಆ ದೇಶದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇದಲ್ಲದೆ ದೈನಿಕ ಕೋವಿಡ್ ಪ್ರಕರಣಗಳನ್ನು ಪ್ರಕಟಿಸುವುದನ್ನು ಭಾನುವಾರದಿಂದ ನಿಲ್ಲಿಸಿದೆ. ಜನವರಿ ಮಧ್ಯದ ವೇಳೆಗೆ ಚೀನಾದ ಗಡಿಯನ್ನು ಮತ್ತೆ ತೆರೆಯುವುದಾಗಿ ಹಾಂಕಾಂಗ್ನ ಆಡಳಿತಗಾರ ಜಾನ್ ಲೀ ಶನಿವಾರ ಹೇಳಿದ್ದರು. ಇದರ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ. ಚೀನಾ ಕೂಡ ಜನವರಿ 8ರಿಂದ ತನ್ನ ದೇಶಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕರೊನಾ ವೈರಸ್ ಕ್ವಾರಂಟೈನ್ ನಿಯಮ ವನ್ನು ಕೊನೆಗೊಳಿಸುವುದಾಗಿ 2 ದಿನಗಳ ಹಿಂದಷ್ಟೇ ಘೋಷಿಸಿದೆ.
25 ಕೋಟಿ ಕೋವಿಡ್ ಲಸಿಕೆ ಡೋಸ್ ಸಂಗ್ರಹ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್ನ ಎರಡು ಪ್ರಮುಖ ಲಸಿಕೆ ತಯಾರಿಕಾ ಕಂಪನಿಗಳಾದ ಬಯೋಲಾಜಿಕಲ್-ಇ ಲಿಮಿಟೆಡ್ ಮತ್ತು ಭಾರತ್ ಬಯೋಟೆಕ್ಗೆ ಒಟ್ಟು 25 ಕೋಟಿ ಡೋಸ್ ಕೋವಿಡ್ -19 ಲಸಿಕೆಗೆ ಆರ್ಡರ್ ನೀಡಲಾಗಿದೆ. ಅಷ್ಟೂ ಪ್ರಮಾಣದ ಲಸಿಕೆಗಳನ್ನು ಪೂರೈಸಲು ಎರಡೂ ಕಂಪನಿಗಳು ಸಿದ್ಧವಾಗಿವೆ.
ಬಯೋಲಾಜಿಕಲ್ ಇ ಕಂಪನಿಯು ಕಾರ್ಬೆವ್ಯಾಕ್ಸ್ ಲಸಿಕೆಯ 20 ಕೋಟಿ ಡೋಸ್ಗಳು, ಭಾರತ್ ಬಯೋಟೆಕ್ 5 ಕೋಟಿ ಕೋವ್ಯಾಕ್ಸಿನ್ ಡೋಸ್ ಅನ್ನು ಉತ್ಪಾದಿಸಿದ್ದು, ಅವುಗಳನ್ನು ಪೂರೈಸಲು ಸಿದ್ಧವಾಗಿವೆ.
ಕೇಂದ್ರ ಸರ್ಕಾರದ ಲಸಿಕೆ ತಯಾರಿಕೆಯ ಬದ್ಧತೆಯ ಭಾಗವಾಗಿ ಸಂಸ್ಥೆಯು ಒಟ್ಟು 30 ಕೋಟಿ ಕಾರ್ಬೆವ್ಯಾಕ್ಸ್ ಡೋಸ್ ಉತ್ಪಾದಿಸಿದೆ ಎಂದು ಬಯೋಲಾಜಿಕಲ್ ಇ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ (ತಯಾರಿಕೆ) ಡಾ. ವಿಕ್ರಮ್ ಪರಾಡ್ಕರ್ ಹೇಳಿದ್ದಾರೆ.
ಭಾರತದಲ್ಲಿ 188 ಹೊಸ ಕೇಸ್...
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 188 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,468ಕ್ಕೇರಿದೆ. ಒಟ್ಟು ಚೇತರಿಕೆ ಪ್ರಮಾಣ ಶೇ.98.80 ತಲುಪಿದ್ದು, ಚೇತರಿಸಿಕೊಂಡವರ ಸಂಖ್ಯೆ 4,41,43,483ಕ್ಕೇರಿದೆ. ಒಟ್ಟು 47 ಸಕ್ರಿಯ ಪ್ರಕರಣಗಳ ಸಂಖ್ಯೆ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.01 ಪ್ರತಿಶತವನ್ನು ಒಳಗೊಂಡಿದೆ. ಸಾವಿನ ಸಂಖ್ಯೆ 5,30,696ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.