ಈ ಪ್ರವಾಸಿ ತಾಣಗಳಲ್ಲಿ ಸೌಲಭ್ಯವೇ ಇಲ್ಲ

tourist place
ವಸಿಷ್ಠ ತೀರ್ಥದ ತೂಗು ಸೇತುವೆಗೆ ಹೋಗುವ ದಾರಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಮೋರಿ.
Published on

ಕಳಸ: ಪ್ರವಾಸಿಗರ ಸ್ವರ್ಗವಾಗಿರುವ ಕಳಸ ತಾಲೂಕಿನ ಪ್ರವಾಸಿ ತಾಣಗಳಿಗೆ ಸರಿಯಾದ ಮೂಲ ಸೌಲಭ್ಯ ಕಲ್ಪಿಸದಿರುವುದರಿಂದ ಸ್ಥಳೀಯರು, ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ತಾಲೂಕಿನ ಕ್ಯಾತನಮಕ್ಕಿ, ಮೈದಾಡಿ, ಸುರುಮನೆ ಾಲ್ಸ್, ಕುದುರೆಮುಖ, ಅಂಬಾತೀರ್ಥ ಜತೆ ವಸಿಷ್ಠ ತೀರ್ಥದಲ್ಲಿರುವ ತೂಗು ಸೇತುವೆ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳಗಳು. ಕಳಸ ಪಟ್ಟಣ ಸಮೀಪವೇ ಇರುವ ವಸಿಷ್ಠ ತೀರ್ಥದ ತೂಗುಸೇತುವೆ ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಚಿತ್ರ ನಿರ್ಮಾಪಕರು, ಪ್ರೀ ವೆಡ್ಡಿಂಗ್ ಶೂಟ್‌ಗೆ ಈ ಜಾಗ ಅಚ್ಚುಮೆಚ್ಚಿನ ಸ್ಥಳ. ಭದ್ರಾ ನದಿಗೆ ಈ ತೂಗು ಸೇತುವೆ ನಿರ್ಮಿಸಿದ್ದು, ಸುತ್ತಲೂ ಬೆಟ್ಟ ಗುಡ್ಡ, ಆನೆ ಗುಡ್ಡದ ಸೊಬಗಿನಿಂದ ತೂಗು ಸೇತುವೆ ನಿಜವಾಗಿಯೂ ಪ್ರವಾಸಿಗರ ಸ್ಪರ್ಗ.
ಈ ಸ್ಥಳ ವೀಕ್ಷಣೆಗೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಈ ಭಾಗದ ಗ್ರಾಮಸ್ಥರು ಹಾಗೂ ಪ್ರವಾಸಿಗರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆ ಕಂಚಿನಕೆರೆ, ಕಾಳಿಕೆರೆ, ಕೊಂಡದಮನೆ, ಮಾಗಲ್ ಮುಂತಾದ ಗ್ರಾಮಗಳಿಗೆ ತೆರಳುವ ರಸ್ತೆಯೂ ಆಗಿದೆ. ಸುಮಾರು ಮುನ್ನೂರು ಕುಟುಂಬಗಳಿಗೆ ಇದೇ ರಸ್ತೆ ಆಧಾರ.
ರಸ್ತೆ ಅತ್ಯಂತ ಕಿರಿದಾಗಿದ್ದು, ಹೊಂಡಗಳಿಂದ ಕೂಡಿದೆ. ಮಳೆಗಾಲದಲ್ಲಂತೂ ರಸ್ತೆ ಕೆಸರುಮಯವಾಗುತ್ತದೆ. ಅಲ್ಲದೆ ತೂಗು ಸೇತುವೆ ಮೂಲಕ ತೆರಳುವ ಗ್ರಾಮಸ್ಥರಿಗೆ ಪ್ರವಾಸಿಗರು ತೂಗು ಸೇತುವೆಯಲ್ಲಿ ನಿಂತು ತೊಂದರೆ ನೀಡುತ್ತಿದ್ದಾರೆ. ಒಂದು ವಾಹನ ಹೋಗುವಷ್ಟು ಕಿರಿದಾದ ರಸ್ತೆಯಾಗಿರುವುದರಿಂದ ನಿತ್ಯ ಬರುವ ನೂರಾರು ಪ್ರವಾಸಿಗರ ವಾಹನಗಳಿಂದ ಸ್ಥಳೀಯರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ.
ಪ್ರವಾಸಿ ವಾಹನಗಳು, ಸ್ಥಳೀಯರ ವಾಹನಗಳಿಗೆ ದಾರಿಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿದಿನ ಗಲಾಟೆಗೆ ಕಾರಣವಾಗುತ್ತಿದೆ. ಅತಿ ವೇಗದಲ್ಲಿ ಬರುವ ಪ್ರವಾಸಿಗರ ವಾಹನದಿಂದ ಶಾಲೆಗೆ ಹೋಗುವ ಮಕ್ಕಳಿಗೆ ಕೆಸರು ಹಾರಿಸಿ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ. ಕಿರಿದಾದ ರಸ್ತೆಯಿಂದ ಸ್ಥಳೀಯರು ಜೀವಭಯದಲ್ಲಿ ಸಂಚರಿಸುವಂತಾಗಿದೆ.
ಇದು ಒಂದು ಪ್ರವಾಸಿ ತಾಣದ ಸಮಸ್ಯೆಯಲ್ಲ. ತಾಲೂಕಿನ ಬಹುತೇಕ ಎಲ್ಲ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳು ಶಿಥಿಲಗೊಂಡಿದ್ದು, ಅದನ್ನು ದುರಸ್ತಿಪಡಿಸುವ ಕೆಲಸಗಳು ಆಗುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಕಳಸ ತಾಲೂಕಿನಲ್ಲಿ ಸಾಕಷ್ಟು ಅನುಕೂಲಗಳಿದ್ದರೂ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಸೇತುವೆ ವೀಕ್ಷಣೆಗೆ ದರ ನಿಗದಿಗೊಳಿಸಿ: ನಮ್ಮೂರಿಗೆ ಪ್ರವಾಸಿಗರು ಬರಬೇಕು. ಇದರಿಂದ ನಮ್ಮ ಊರು ಅಭಿವೃದ್ಧಿಯಾಗುತ್ತಿದೆ. ಪ್ರವಾಸಿಗರಿಂದ ಸಾಕಷ್ಟು ಕುಟುಂಬಗಳು ಜೀವನ ಮಾಡುತ್ತಾರೆ. ಆದರೆ ಪ್ರವಾಸಿ ತಾಣಗಳ ಪ್ರದೇಶಗಳಲ್ಲಿ ಸಮರ್ಪಕ ಮೂಲ ಸೌಲಭ್ಯ ನೀಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ನೆಮ್ಮದಿ ಕಳೆದುಕೊಳ್ಳುತ್ತಾರೆ. ಪ್ರವಾಸಿಗರಿಂದ ನಿತ್ಯವೂ ಗ್ರಾಮಸ್ಥರಿಗೆ ತೊಂದರೆ ಆಗುವುದಾದರೆ ಅಂತಹ ಪ್ರವಾಸಿಗರು ಬಂದು ಏನು ಪ್ರಯೋಜನ? ರಸ್ತೆ ಸರಿ ಮಾಡಲು ಅನುದಾನ ಇಲ್ಲವಾದರೆ ಸಂಬಂಧಿಸಿದವರು ತೂಗುಸೇತುವೆ ವೀಕ್ಷಣೆಗೆ ಬರುವವರಿಗೆ ದರ ನಿಗದಿ ಮಾಡಿ ಅದರಲ್ಲಿ ಬಂದ ಹಣದಿಂದ ರಸ್ತೆ ದುರಸ್ತಿ ಮಾಡಲಿ ಎಂಬುದು ಗ್ರಾಮಸ್ಥರ ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net