

| ಅನಿಲ್ ಭಾರಧ್ವಜ್, ಎಂಡಿ ಮತ್ತು ಸಿಇಒ, ವೆಲ್ತ್ಬಾಕ್ಸ್ ಇನ್ವೆಸ್ಟ್ಮೆಂಟ್ ಸರ್ವೀಸ್ ಪ್ರೈವೆಟ್ ಲಿಮಿಟೆಡ್
Thematic Investing : ಹೂಡಿಕೆ ಇಂದಿನ ಕಾಲದಲ್ಲಿ ಬಹಳ ಮುಖ್ಯ. ನೀವು ಸಂಪಾದಿಸಿದ ಹಣವನ್ನು ಸುಮ್ಮನೇ ಕೂಡಿಡುವ ಬದಲು ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಹಣ ದುಪ್ಪಟ್ಟಾಗಿ ಆರ್ಥಿಕ ಹೊರೆಯನ್ನು ಇಳಿಸುತ್ತದೆ. ಆದರೆ, ಹೂಡಿಕೆ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಸೂಕ್ತ ಯೋಜನೆಯೊಂದಿಗೆ ಯಾವಾಗಲೂ ಹೂಡಿಕೆ ಮಾಡಬೇಕು. ನಿಮ್ಮ ಹೂಡಿಕೆ ಯಾವ ರೀತಿ ಇರಬೇಕೆಂದರೆ, ನೀವು ಭಾರತದಾದ್ಯಂತ ರಸ್ತೆ ಪ್ರವಾವನ್ನು ಯೋಜಿಸುವ ರೀತಿ. ಒಂದು ನಿಗದಿತ ತಾಣಕ್ಕೆ ಭೇಟಿ ನೀಡುವ ಬದಲು, ನೀವು ಸೀಸನ್ ಆಧಾರದ ಮೇಲೆ ನಿಮ್ಮ ನಿಲ್ದಾಣಗಳನ್ನು ಆರಿಸಿಕೊಳ್ಳುತ್ತೀರಿ. ಅಂದರೆ, ಬೇಸಿಗೆಯಲ್ಲಿ ಗಿರಿಧಾಮಗಳು, ಮಾನ್ಸೂನ್‌ನಲ್ಲಿ ಕಡಲತೀರಗಳು. ಹವಾಮಾನಕ್ಕೆ ತಕ್ಕಂತೆ ನಿಮ್ಮ ಮಾರ್ಗಗಳು ಬದಲಾಗುತ್ತವೆ. ಅದೇ ರೀತಿ ನಿಮ್ಮ ಹೂಡಿಕೆ ಕೂಡ ಆರ್ಥಿಕ ಟ್ರೆಂಡ್ ಅಂದರೆ, ಮಾರುಕಟ್ಟೆ ಟ್ರೆಂಡ್ಗೆ ತಕ್ಕಂತೆ ಬದಲಾಗಬೇಕು. ಥಿಮ್ಯಾಟಿಕ್ ಹೂಡಿಕೆ ಕೂಡ ಇದನ್ನೇ ಕೇಂದ್ರೀಕರಿಸುತ್ತದೆ. ಥಿಮ್ಯಾಟಿಕ್ ಹೂಡಿಕೆ ಅಂದರೆ ವಿಷಯಾಧಾರಿಯ ಹೂಡಿಕೆ ಎಂದರ್ಥ.
ಥಿಮ್ಯಾಟಿಕ್ ಹೂಡಿಕೆ ಎಂದರೆ ಹೆಚ್ಚುತ್ತಿರುವ ಆರೋಗ್ಯ ರಕ್ಷಣಾ ಅಗತ್ಯಗಳು, ಡಿಜಿಟಲ್ ಅಳವಡಿಕೆ ಅಥವಾ ಶುದ್ಧ ಇಂಧನದಂತಹ ದೀರ್ಘಕಾಲೀನ ವಿಚಾರಗಳಿಗೆ ಹಣವನ್ನು ಹೂಡಿಕೆ ಮಾಡುವುದು. ಒಂದೇ ವಲಯಕ್ಕೆ ಅಂಟಿಕೊಳ್ಳುವ ಬದಲು, ಪ್ರಯೋಜನ ಪಡೆಯುವ ನಿರೀಕ್ಷೆಯಿರುವ ಸಂಬಂಧಿತ ವಲಯಗಳಲ್ಲಿ ಹೂಡಿಕೆ ಮಾಡುವುದನ್ನು ಇದು ಒಟ್ಟುಗೂಡಿಸುತ್ತದೆ. ಮಾರುಟ್ಟೆಗಳಲ್ಲಾಗುವ ಬದಲಾವಣೆಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆಗಳನ್ನು ಜೋಡಿಸುವುದು ಥಿಮ್ಯಾಟಿಕ್ ಹೂಡಿಕೆಯ ಗುರಿಯಾಗಿದೆ.
ಫ್ಯಾಷನ್ ಅಥವಾ ಪ್ರವಾಸದ ಟ್ರೆಂಡ್ಗಳಂತೆ ಹೂಡಿಕೆ ವಿಷಯಗಳು ಸ್ಥಿರವಾಗಿರುವುದಿಲ್ಲ. ಬದಲಾಗುತ್ತಿರುವ ಬಡ್ಡಿದರಗಳು, ಸರ್ಕಾರಿ ನೀತಿ, ಜಾಗತಿಕ ಬೇಡಿಕೆ ಅಥವಾ ಆರ್ಥಿಕ ಬಿಕ್ಕಟ್ಟುಗಳಿಗೆ ತಕ್ಕಂತೆ ಹೂಡಿಕೆಗಳು ಕೂಡ ಬದಲಾಗುತ್ತಿರುತ್ತವೆ. ಇಲ್ಲಿ ಯಶಸ್ವಿಯಾಗುವವರು ಕೂಡ ನಿಯಮಿತವಾಗಿ ಬದಲಾಗುತ್ತಾರೆ. 2014 ರಲ್ಲಿ ಬ್ಯಾಂಕುಗಳು ಮುನ್ನಡೆ ಸಾಧಿಸಿದವು. ಅದೇ ರೀತಿ 2015 ರಲ್ಲಿ ಫಾರ್ಮಾ ಕಂಪನಿಗಳು ಯಶಸ್ವಿಯಾದವು. 2016 ರಲ್ಲಿ ಸರಕುಗಳ ಉನ್ನತ ಮಟ್ಟವನ್ನು ತಲುಪಿತು ಮತ್ತು 2020ರಲ್ಲಿ ಕರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಫಾರ್ಮಾ ಕಂಪನಿಗಳು ಆರ್ಥಿಕ ವಿಚಾರದಲ್ಲಿ ಮತ್ತೆ ಉತ್ತುಂಗಕ್ಕೆ ಏರಿತು. ಹೀಗೆ ಮಾರುಕಟ್ಟೆಯಲ್ಲಿ ನಿರಂತರ ಬದಲಾವಣೆಗಳು ಸಂಭವಿಸುತ್ತಲೇ ಇರುತ್ತದೆ. ಇದನ್ನು ಪತ್ತೆಹಚ್ಚುವುದು ಚಿಲ್ಲರೆ ಹೂಡಿಕೆದಾರರಿಗೆ ಸುಲಭವಲ್ಲ. ಒಂದು ವಿಷಯ ಯಾವಾಗ ವೇಗ ಪಡೆಯುತ್ತಿದೆ ಅಥವಾ ಅದು ಯಾವಾಗ ಕುಸಿಯುತ್ತದೆ ಎಂಬುದನ್ನು ಗುರುತಿಸಲು ಸಮಯ, ವಿಶ್ಲೇಷಣೆ ಮತ್ತು ಶಿಸ್ತು ಬೇಕಾಗುತ್ತದೆ.
ನಮ್ಮ ಭಾವನೆಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಹೆಚ್ಚಾಗಿ ಮಂಕಾಗಿಸುತ್ತವೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. 1999 ರಿಂದ 2000ದವರೆಗೆ ಡಾಟ್-ಕಾಮ್ ಉತ್ತುಂಗದ ಸಮಯದಲ್ಲಿ, ತಂತ್ರಜ್ಞಾನ ಷೇರುಗಳು 740% ರಷ್ಟು ಏರಿತು. ಆದರೆ, ಮುಂದಿನ ವರ್ಷ ಕುಸಿತ ಕಂಡವು. ಈ ವೇಳೆ ತಡವಾಗಿ ಹೂಡಿಕೆ ಮಾಡಿದ ಅನೇಕರು ಭಾರೀ ನಷ್ಟವನ್ನು ಅನುಭವಿಸಿದರು. ಮತ್ತೊಂದೆಡೆ, 2013ರಲ್ಲಿ ಇದೇ ಭಯವು ಹೂಡಿಕೆದಾರರನ್ನು ಐಟಿ ಮತ್ತು ಫಾರ್ಮಾದಿಂದ ದೂರವಿಟ್ಟಿತು. ಈ ಎರಡೂ ವಲಯಗಳು ಬಲವಾದ ಆದಾಯವನ್ನು ನೀಡುವುದಾದರೂ ದುರಾಸೆ ಮತ್ತು ಭಯವು ಆಯ್ಕೆಯನ್ನು ಕಷ್ಟಕರವಾಗಿಸಿತು. ಹೀಗಾಗಿ ಭಾವನೆ ಅಂಶವೂ ಪ್ರಮುಖವಾಗುತ್ತದೆ.
ಇಲ್ಲಿ ಒಂದು ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದೇನೆಂದರೆ, ಯಾವುದೇ ಥೀಮ್ ಶಾಶ್ವತವಾಗಿ ಉನ್ನತ ಸ್ಥಾನದಲ್ಲಿ ಉಳಿಯುವುದಿಲ್ಲ. ಒಂದೇ ಒಂದು ವಿಷಯದಲ್ಲಿ ಹೂಡಿಕೆ ಮಾಡುವುದರಿಂದ ನೀವದನ್ನು ಅರಿತುಕೊಳ್ಳಬಹುದು. ಬ್ಯಾಂಕಿಂಗ್‌ನಂತಹ ಆವರ್ತಕ ವಲಯಗಳನ್ನು ಆರೋಗ್ಯ ರಕ್ಷಣೆಯಂತಹ ರಕ್ಷಣಾತ್ಮಕ ವಲಯಗಳೊಂದಿಗೆ ಬೆರೆಸುವುದು ಮತ್ತು ಮಾರುಕಟ್ಟೆ ಬದಲಾವಣೆಗಳಿಗೆ ಹೊಂದಿಕೊಳ್ಳಲು ನಿಯಮಿತವಾಗಿ ಮರುಸಮತೋಲನಗೊಳಿಸುವ ಥೀಮ್‌ಗಳಲ್ಲಿ ಹೂಡಿಕೆ ಮಾಡುವುದು ಒಂದು ಉತ್ತಮ ತಂತ್ರವಾಗಿದೆ.
ಹೆಚ್ಚಿನ ಹೂಡಿಕೆದಾರರಿಗೆ, ಥಿಮ್ಯಾಟಿಕ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ನಿರ್ವಹಿಸಬಹುದಾದ ಪರಿಹಾರವನ್ನು ನೀಡುತ್ತವೆ. ಸದ್ಯ ಎದ್ದುಕಾಣುವ ಒಂದೇ ಒಂದು ಆಯ್ಕೆಯೆಂದರೆ ICICI ಪ್ರುಡೆನ್ಶಿಯಲ್ ಥಿಮ್ಯಾಟಿಕ್ ಅಡ್ವಾಂಟೇಜ್ ಫಂಡ್ (FoF). ಇದು ಮ್ಯಾಕ್ರೋ ಮತ್ತು ಮೌಲ್ಯಮಾಪನ ಒಳನೋಟಗಳನ್ನು ಬಳಸಿಕೊಂಡು ವಲಯಗಳು ಮತ್ತು ಥೀಮ್‌ಗಳಲ್ಲಿ ಹೊಸ ಅವಕಾಶಗಳನ್ನು ಗುರುತಿಸುತ್ತದೆ. 2025, ಮೇ 30ರ ಹೊತ್ತಿಗೆ, ಇದು 21.38% ರ ಮೂರು ವರ್ಷಗಳ CAGR ಮತ್ತು 28.74% ರ ಐದು ವರ್ಷಗಳ CAGR ನೊಂದಿಗೆ 20.85% ರ ಒಂದು ವರ್ಷದ ಲಾಭವನ್ನು ನೀಡಿದೆ. ಹೀಗಾಗಿ ವೃತ್ತಿಪರ ನಿರ್ವಹಣೆಯು ಆಲೋಚನೆಗಳನ್ನು ಹೇಗೆ ಆದಾಯವಾಗಿ ಪರಿವರ್ತಿಸಬಹುದು ಎಂಬುದನ್ನು ಥಿಮ್ಯಾಟಿಕ್ ಮ್ಯೂಚುವಲ್ ಫಂಡ್ ತೋರಿಸುತ್ತದೆ.