

Anaya Bangar : ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ.
ಪ್ರಸ್ತುತ, ತೃತೀಯ ಲಿಂಗಿ ಕ್ರಿಕೆಟಿಗರು ಮಹಿಳಾ ಕ್ರಿಕೆಟ್ನಲ್ಲಿ ಭಾಗವಹಿಸಲು ಅವಕಾಶವಿಲ್ಲ. 2023ರ ಏಕದಿನ ವಿಶ್ವಕಪ್ ನಂತರ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಆದರೆ, ತೃತೀಯ ಲಿಂಗಿ ಕ್ರೀಡಾಪಟುವಾಗಿ ಬದಲಾದ ಅನಯಾ ಬಂಗಾರ್, ತನ್ನ ಹೆಣ್ಣಾಗಿ ಪರಿವರ್ತನೆಯಾದ ಎಂಟು ಪುಟಗಳ ವೈಜ್ಞಾನಿಕ ವರದಿಯನ್ನು ಹಂಚಿಕೊಂಡಿದ್ದಾರೆ. ಈ ವೈಜ್ಞಾನಿಕ ವರದಿಯನ್ನು ಐಸಿಸಿ ಮತ್ತು ಬಿಸಿಸಿಐಗೆ ಸಲ್ಲಿಸಲು ಅನಯಾ ಯೋಜಿಸಿದ್ದಾರೆ.
ಮೊದಲ ಬಾರಿಗೆ, ಟ್ರಾನ್ಸ್ ಮಹಿಳಾ ಕ್ರೀಡಾಪಟುವಾಗಿ ನನ್ನ ಪ್ರಯಾಣವನ್ನು ದಾಖಲಿಸುವ ವೈಜ್ಞಾನಿಕ ವರದಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷದಲ್ಲಿ ನಾನು ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ ರಚನಾತ್ಮಕ ಶಾರೀರಿಕ ಮೌಲ್ಯಮಾಪನಗಳಿಗೆ ಒಳಗಾಗಿದ್ದೇನೆ. ಈ ವರದಿಯು ನನ್ನ ಪರಿವರ್ತನೆಯ ನೈಜ, ಅಳೆಯಬಹುದಾದ ಪರಿಣಾಮವನ್ನು ಸೆರೆಹಿಡಿಯುತ್ತದೆ ಹೊರತು ಯಾವುದೇ ಅಭಿಪ್ರಾಯಗಳನ್ನಲ್ಲ ಅಥವಾ ಊಹೆಗಳನಲ್ಲ. ಆದರೆ ಇದು ಡೇಟಾ ಎಂದು ಅನಯಾ ಹೇಳಿದ್ದಾರೆ.
ನಾನಿದನ್ನು ಸಂಪೂರ್ಣ ಪಾರದರ್ಶಕತೆ ಮತ್ತು ಭರವಸೆಯೊಂದಿಗೆ ಬಿಸಿಸಿಐ ಮತ್ತು ಐಸಿಸಿಗೆ ಸಲ್ಲಿಸುತ್ತಿದ್ದೇನೆ. ನನ್ನ ಏಕೈಕ ಉದ್ದೇಶ ಭಯದ ಆಧಾರದ ಮೇಲೆ ಅಲ್ಲ, ಸತ್ಯಗಳ ಆಧಾರದ ಮೇಲೆ. ನೀವು ಒಪ್ಪುತ್ತೀರೋ ಇಲ್ಲವೋ, ನೀವೆಲ್ಲ ಸಾಕ್ಷಿಯಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅನಯಾ ಹೇಳಿದ್ದಾರೆ. ಅಲ್ಲದೆ, ವಿಜ್ಞಾನ ಹೇಳುತ್ತದೆ ನಾನು ಮಹಿಳಾ ಕ್ರಿಕೆಟ್ಗೆ ಅರ್ಹಳು ಎಂದು. ಈಗ ಪ್ರಶ್ನೆ ಏನೆಂದರೆ ಜಗತ್ತು ಸತ್ಯವನ್ನು ಕೇಳಲು ಸಿದ್ಧವಾಗಿದೆಯೇ ಅಥವಾ ಇಲ್ಲವೇ? ಎಂದು ವಿಡಿಯೋ ಶೀರ್ಷಿಕೆ ಮೂಲಕ ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ, ಗಂಡಾಗಿ ಜನಿಸಿದ ಅನಯಾ ನಂತರ ಹೆಣ್ಣಾಗಿ ಪರಿವರ್ತನೆಗೊಂಡರು. 23 ವರ್ಷದ ಅನಯಾ ಒಂದು ವರ್ಷದ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಪೂರ್ಣಗೊಳಿಸಿದ ನಂತರ ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಮಾಡಿಕೊಂಡರು. ಪರೀಕ್ಷೆಗಳು ಆಕೆಯ ಸ್ನಾಯು ಶಕ್ತಿ, ಸಹಿಷ್ಣುತೆ, ಗ್ಲೂಕೋಸ್ ಮತ್ತು ಆಮ್ಲಜನಕದ ಮಟ್ಟಗಳ ಡೇಟಾವನ್ನು ಸಂಗ್ರಹಿಸಿ, ಅವುಗಳನ್ನು ಸಿಸ್ಜೆಂಡರ್ ಮಹಿಳಾ ಕ್ರೀಡಾಪಟುಗಳೊಂದಿಗೆ ಹೋಲಿಸಿದವು. ಫಲಿತಾಂಶಗಳು ಸಿಸ್ಜೆಂಡರ್ ಮಹಿಳಾ ಕ್ರೀಡಾಪಟುಗಳ ಮಾನದಂಡಗಳೊಳಗೆ ಬರುತ್ತವೆ. ಹೀಗಾಗಿ ಮಹಿಳಾ ಕ್ರಿಕೆಟ್ಗೆ ಆಯ್ಕೆ ಮಾಡಿಕೊಳ್ಳುವಂತೆ ಅನಯಾ ಕೋರಿದ್ದಾರೆ.
ಅಂದಹಾಗೆ, ಅನಯಾ ಅವರ ತಂದೆ ಸಂಜಯ್ ಬಂಗಾರ್, ಟೀಮ್ ಇಂಡಿಯಾ ಪರ 12 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಂತರ ಅವರು 2014 ರಿಂದ 2019 ರವರೆಗೆ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು. (ಏಜೆನ್ಸೀಸ್)