ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಸ್ಥಾನ ತುಂಬುವ ಆಟಗನ್ಯಾರು? ಹೆಸರು ಬಹಿರಂಗಪಡಿಸಿದ ರಿಷಭ್​ ಪಂತ್! Virat Kohli ​

Virat Kohli
Published on

Virat Kohli : ಟೀಮ್​ ಇಂಡಿಯಾದ ಟೆಸ್ಟ್​ ಕ್ರಿಕೆಟ್‌ ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನವು ತುಂಬಾ ವಿಶೇಷವಾಗಿದೆ. ವಿಕೆಟ್‌ಗಳು ಬೇಗನೆ ಬಿದ್ದಾಗ ಇನ್ನಿಂಗ್ಸ್ ಅನ್ನು ಕಾಯ್ದುಕೊಳ್ಳುವುದು ಮತ್ತು ಅಗತ್ಯಬಿದ್ದಾಗ ಗೇರ್ ಬದಲಾಯಿಸುವುದು ಮತ್ತು ವೇಗವಾಗಿ ಆಡುವುದು ಈ ಸ್ಥಾನದ ವಿಶೇಷವಾಗಿದೆ.

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ಸ್ಥಾನದಲ್ಲಿ ಭಾರತಕ್ಕಾಗಿ ಅನೇಕ ಟೆಸ್ಟ್‌ಗಳನ್ನು (179 ಟೆಸ್ಟ್‌ಗಳು) ಆಡಿದ್ದಾರೆ. ಈ 4ನೇ ಸ್ಥಾನ ತಂಡದ ಬೆನ್ನೆಲುಬಾಗಿದ್ದು, ಸಚಿನ್ ನಿವೃತ್ತಿಯ ನಂತರ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (99 ಟೆಸ್ಟ್‌ಗಳು) ಆ ಸ್ಥಾನವನ್ನು ತುಂಬಿದರು. ಈಗ ಕೊಹ್ಲಿ ಕೂಡ ಟೆಸ್ಟ್‌ಗಳಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ, ಕೊಹ್ಲಿ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ತನ್ನ ಅದ್ಭುತ ಬ್ಯಾಟಿಂಗ್‌ನೊಂದಿಗೆ ಟೆಸ್ಟ್ ಪಂದ್ಯದ ಹಾದಿಯನ್ನು ನಿರ್ದೇಶಿಸುವ ಸಾಮರ್ಥ್ಯವನ್ನು ಹೊಂದಿರುವ ಈ ನಿರ್ಣಾಯಕ ಸ್ಥಾನಕ್ಕೆ ಹೊಸ ಆಟಗಾರ ಎಂಟ್ರಿ ಕೊಡುತ್ತಿದ್ದಾರೆ. ಅವರು ಯಾರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ಜೂನ್ 20 ರಂದು ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭಮಾನ್ ಗಿಲ್ ನಿರ್ಣಾಯಕ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇದನ್ನು ಟೀಮ್ ಇಂಡಿಯಾದ ಟೆಸ್ಟ್ ಉಪನಾಯಕ ರಿಷಭ್ ಪಂತ್ ಘೋಷಿಸಿದರು.

ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಲ್ಲಿ ಭಾಗವಹಿಸಿದ್ದ ಪಂತ್, ಹಲವಾರು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇದೆ. ಸದ್ಯಕ್ಕೆ, ಗಿಲ್ ನಾಲ್ಕನೇ ಸ್ಥಾನದಲ್ಲಿ ಆಡುತ್ತಾರೆ ಮತ್ತು ನಾನು ಐದನೇ ಸ್ಥಾನದಲ್ಲಿ ಆಡುತ್ತೇನೆ. ಉಳಿದ ಸ್ಥಾನಗಳ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ ಎಂದು ಪಂತ್ ಹೇಳಿದರು.

ಶುಭಮಾನ್ ಗಿಲ್ ಮತ್ತು ನಾನು ಮೈದಾನಾದಿಂದಾಚೆಗೆ ಉತ್ತಮ ಸ್ನೇಹಿತರಾಗಿದ್ದೇವೆ. ಅದು ಮೈದಾನದಲ್ಲಿಯೂ ಕಾಣಿಸಿಕೊಳ್ಳುತ್ತದೆ. ನಾವು ಚೆನ್ನಾಗಿ ಹೊಂದಿಕೊಳ್ಳುತ್ತೇವೆ. ನಮ್ಮ ನಡುವೆ ಉತ್ತಮ ತಿಳುವಳಿಕೆ ಇದೆ. ಮೈದಾನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ನಾವು ಭಾವಿಸುತ್ತೇವೆ ಎಂದು ರಿಷಭ್ ಪಂತ್ ವಿಶ್ವಾಸದಿಂದ ಹೇಳಿದರು.

ಮೊದಲ ಟೆಸ್ಟ್ ಪಂದ್ಯದ ಹೊರತಾಗಿ, ಗಿಲ್ ಮತ್ತು ಪಂತ್ ಉಳಿದ ಪಂದ್ಯಗಳಲ್ಲಿಯೂ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಆಡುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ ಬದಲಿಗೆ ಗಿಲ್ ಆಡಬೇಕೆಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಕೊಹ್ಲಿ ಸ್ಥಾನವನ್ನು ಇದೀಗ ಗಿಲ್​ ತುಂಬಲಿದ್ದಾರೆ. ನಾಳೆಯಿಂದ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನ ನಾಲ್ಕನೇ ಆವೃತ್ತಿಯನ್ನು ಟೀಮ್​ ಇಂಡಿಯಾ ಆರಂಭಿಸಲಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net