

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರು ಸಣ್ಣಪುಟ್ಟ ವಿಚಾರಗಳಿಗೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಉತ್ತಮ ಭವಿಷ್ಯ ಹೊಂದಿರುವ ಯುವ ಜನಾಂಗ ಪ್ರೀತಿ, ಮದುವೆ ಹಾಗೂ ಉದ್ಯೋಗ ಹೀಗೆ ನಾನಾ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ತಪ್ಪು ನಿರ್ಧಾರಗಳಿಂದ ಪಾಲಕರಿಗೆ ಜೀವನ ಪರ್ಯಾಂತ ನೋವು ನೀಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಯುವತಿಯೊಬ್ಬಳು ಬಾತ್ರೂಮ್ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಆದರೆ, ಪಾಲಕರು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.
ಮೃತ ಯುವತಿಯನ್ನು ಪ್ರಭುಧ್ಯಾ (21) ಎಂದು ಗುರುತಿಸಲಾಗಿದೆ. ಈಕೆ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಮನೆಯ ಬಾತ್ರೂಮ್ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಬುಧವಾರ (ಮೇ 15) ಶವ ಪತ್ತೆಯಾಗಿದೆ. ಪ್ರಭುದ್ಯಾ ಬಾತ್ರೂಮ್ನಲ್ಲಿ ಶವವಾಗಿ ಬಿದ್ದಿರುವುದನ್ನು ಮೊದಲು ಗಮನಿಸಿದ್ದು ಆಕೆಯ ಕಿರಿಯ ಸಹೋದರ. ಎಷ್ಟೋ ಹೊತ್ತಾದರೂ ಅಕ್ಕ ಬಾತ್ರೂಮ್ನಿಂದ ಹೊರಗಡೆ ಬಾರದಿದ್ದಾಗ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಕ್ಕನನ್ನು ನೋಡಿದ್ದಾನೆ. ತಕ್ಷಣ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಡಿಸಿಪಿ ಎಸ್.ಲೋಕೇಶ್ ಜಗಲಸರ್ ಬುಧವಾರ ರಾತ್ರಿ 7.30ರ ವೇಳೆಗೆ ಘಟನೆ ನಡೆದಿರುವುದನ್ನು ಬಹಿರಂಗಪಡಿಸಿದ್ದಾರೆ. ಪ್ರಭುಧ್ಯಾ ಸ್ನಾನ ಮಾಡುವುದಾಗಿ ಹೇಳಿ ಬಾತ್ರೂಮ್ಗೆ ಹೋಗಿ, ತುಂಬಾ ಹೊತ್ತಾದರೂ ಹೊರಗೆ ಬರಲೇ ಇಲ್ಲ. ಕೊನೆಗೆ ಆಕೆಯ ಸಹೋದರ ಸ್ನಾನಗೃಹದ ಬಾಗಿಲು ಒಡೆದು ನೋಡಿದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಿಂದ ಡೆತ್ನೋಟ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಯುವತಿಯ ಕುತ್ತಿಗೆ ಮತ್ತು ಮಣಿಕಟ್ಟಿನ ಮೇಲೆ ಚಾಕುವಿನಿಂದ ಗಾಯಗಳಾಗಿರುವುದನ್ನು ಪೊಲೀಸರು ಗುರುತಿಸಿದ್ದಾರೆ. ಹೆಚ್ಚಿನ ರಕ್ತಸ್ರಾವದಿಂದ ಯುವತಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.
ಡೆತ್ನೋಟ್ ವಶಕ್ಕೆ ಪಡೆಯಲಾಗಿದೆ ಎಂಬ ವಿಚಾರ ತಿಳಿದಾಗ ಯುವತಿಯ ತಾಯಿ ಅದನ್ನು ನಿರಾಕರಿಸಿದರು. ಮಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು ಮತ್ತು ಆಕೆ ತುಂಬಾ ಧೈರ್ಯವಂತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವಳಲ್ಲ ಎಂದು ತಾಯಿ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ಯುವತಿಯ ತಾಯಿ ಮತ್ತು ಕಿರಿಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವರದಿ ಬಂದ ಬಳಿಕ ಇದು ಕೊಲೆಯೋ? ಅಥವಾ ಆತ್ಮಹತ್ಯೆಯೋ? ಎಂದು ತಿಳಿಯಲಿದೆ. (ಏಜೆನ್ಸೀಸ್)