ನಾನಿಲ್ಲಿರುವುದೇ… ಆರ್​ಸಿಬಿ vs ಸಿಎಸ್​​ಕೆ ಪಂದ್ಯಕ್ಕೂ ಮುನ್ನವೇ ಎಂ.ಎಸ್​. ಧೋನಿ ಟ್ವೀಟ್​ ವೈರಲ್​!

MS Dhoni 2
Published on

ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ. ಟೂರ್ನಿ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಸದ್ಯ ಎಲ್ಲರ ಗಮನ ಆ ಒಂದು ಪಂದ್ಯದ ಮೇಲಿದೆ. ಹೀಗಾಗಿ ಆ ಪಂದ್ಯದ ಕುರಿತು ಜೋರು ಚರ್ಚೆಗಳು ನಡೆಯುತ್ತಿವೆ. ರಾಜಸ್ಥಾನ ರಾಯಲ್ಸ್ (ಆರ್​ಆರ್​) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಈಗಾಗಲೇ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನುಳಿದ ಎರಡು ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ.

ಸದ್ಯ ಎಲ್ಲರೂ ಮೇ 18ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಏಕೆಂದರೆ, ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಇದೊಂದು ರೀತಿಯಲ್ಲಿ ನಾಕೌಟ್​ ಪಂದ್ಯದಂತಿದೆ. ಇದರಲ್ಲಿ ಗೆದ್ದವರು ಪ್ಲೇಆಫ್‌ನಲ್ಲಿ ಮತ್ತೊಂದು ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಸದ್ಯ ಸಿಎಸ್​ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, 12 ಅಂಕಗಳೊಂದಿಗೆ ಆರ್​ಸಿಬಿ 6ನೇ ಸ್ಥಾನದಲ್ಲಿದೆ.

ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಉತ್ತಮ ಅಂತರದಿಂದ ಗೆದ್ದರೆ ಪ್ಲೇ ಆಫ್‌ಗೆ ಹೋಗಲಿದೆ. ಸಿಎಸ್‌ಕೆಗೆ ಯಾವುದೇ ರನ್​ ರೇಟ್​ ಅವಶ್ಯಕತೆ ಇಲ್ಲ, ಕೇವಲ ಗೆದ್ದರೆ ಸಾಕು ಪ್ಲೇಆಫ್​ಗೆ ಹೋಗುತ್ತದೆ. ಆದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್​ ಮಾಡಿದರೆ 18 ರನ್​​​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಚೇಸಿಂಗ್​ ಮಾಡಿದರೆ 18.1 ಓವರ್​ಗಳಲ್ಲೇ ಗುರಿ ಮುಟ್ಟಬೇಕು. ಹೀಗಾಗಿ ಇದೇ 18ರ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿದೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ ನಾಕೌಟ್ ಪಂದ್ಯವಾಗಿ ಮಾರ್ಪಟ್ಟಿದೆ.

ಇದರ ನಡುವೆಯೇ ಸಿಎಸ್​ಕೆ ಮಾಜಿ ನಾಯಕ ಎಂ.ಎಸ್​. ಧೋನಿ ಅವರ ಹಳೆಯ ಟ್ವೀಟ್​ ಒಂದು ವೈರಲ್​ ಆಗುತ್ತಿದೆ. 2014 ಮಾರ್ಚ್​ 24ರಂದು ಮಾಡಿರುವ ಟ್ವೀಟ್​ ಇದಾಗಿದೆ. ಅದರಲ್ಲಿ " ಯಾವ ತಂಡ ಗೆಲುವು ಸಾಧಿಸುತ್ತದೆ ಅನ್ನೋದು ಮುಖ್ಯವಲ್ಲ, ನಾನು ಇಲ್ಲಿರುವುದು ಮನರಂಜನೆ ನೀಡಲು ಮಾತ್ರ" ಎಂದು ಬರೆದುಕೊಂಡಿದ್ದಾರೆ.

Dhoni

ಆರ್​ಸಿಬಿ-ಸಿಎಸ್​ಕೆ ನಡುವಿನ ಪಂದ್ಯ ಆರಂಭಕ್ಕೂ ಮುನ್ನವೇ ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಧೋನಿ ಅಭಿಮಾನಿಗಳು ಈ ಟ್ವೀಟ್​ ಸ್ಕ್ರೀನ್​ಶಾಟ್​ ಶೇರ್​ ಮಾಡಿಕೊಂಡು ನಮ್ಮದೇ ಗೆಲುವು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪಂದ್ಯದ ಫಲಿತಾಂಶ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಳೆ ಭೀತಿ

ನಾಳೆ (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಆರ್​ಸಿಬಿ ಪ್ಲೇಆಫ್​ ಪ್ರವೇಶ ಮಾಡಲು ಈ ಪಂದ್ಯ ನಡೆಯಲೇಬೇಕು. ಆದರೆ, ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಆರ್​ಸಿಬಿ ಐಪಿಎಲ್​ನಿಂದ ಹೊರಬೀಳಲಿದೆ. ಸಿಎಸ್​ಕೆ ಪಾಲಿಗೆ ವರದಾನವಾಗಲಿದೆ. ಹವಾಮಾನ ಇಲಾಖೆಯಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇರುವುದರಿಂದ ಆರ್​ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net