ಬಿಳಿ ಜೋಳದ ಧಾರಣೆ ಗಗನಕ್ಕೆ ರೊಟ್ಟಿ ಪ್ರಿಯರಿಗೆ ಚಡಪಡಿಕೆ: ಕ್ವಿಂಟಾಲ್​ಗೆ 6,000 ದಿಂದ 6,800 ರೂಪಾಯಿಗೆ ಏರಿಕೆ; ಹಿಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರಿಗೂ ಸಂಕಷ್ಟ

Jola
Published on

| ಮಂಜುನಾಥ ಕೋಳಿಗುಡ್ಡ ಬೆಳಗಾವಿ 
ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಕೃತಿ ವಿಕೋಪ ಮತ್ತು ಬಿಳಿ ಜೋಳ ಬಿತ್ತನೆ ಕ್ಷೇತ್ರ ಕುಸಿತದ ಪರಿಣಾಮ ಸಗಟು, ಚಿಲ್ಲರೆ ಮಾರುಕಟ್ಟೆಯಲ್ಲಿ ಬಿಳಿ ಜೋಳದ ಬೆಲೆ ಗಗನಕ್ಕೇರಿದೆ. ಬಿತ್ತನೆ ಬೀಜ ಕೂಡ ಪ್ರತಿ ಕೆಜಿ 78ರಿಂದ 90 ರೂ.ಮಾರಾಟವಾಗುತ್ತಿರುವುದು ಹಿಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರ ಜೇಬು ಸುಡುತ್ತಿದೆ.

ರಾಜ್ಯದ ವಿವಿಧ ಎಪಿಎಂಸಿ, ಖಾಸಗಿ ಸಗಟು ಮಾರುಕಟ್ಟೆಗಳ ಆವಕದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಸ್ತುತ ಸಗಟು ಮಾರುಕಟ್ಟೆಯಲ್ಲಿ ಜೋಳದ ದರ ಕ್ವಿಂಟಾಲ್​ಗೆ 4,200-4,800 ರೂ.ನಿಂದ 6,000 ರಿಂದ 6,800 ರೂ. ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 65ರಿಂದ 78 ರೂ.ವರೆಗೆ ಮಾರಾಟವಾಗುತ್ತಿದೆ.

ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಕೃಷಿ ಚಟುವಟಿಕೆಗಳ ಬೆಲೆ ಏರಿಕೆ ಇತರ ಕಾರಣಗಳಿಂದಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಪ್ರದೇಶ ಶೇ.25 ಕಡಿಮೆಯಾಗಿದೆ. ಅಲ್ಲದೆ, ಕೃಷಿ ಇಲಾಖೆಯು 2020ರಿಂದ 2022ರ ಸಾಲಿನಲ್ಲಿ ಸರಾಸರಿ 10.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಜೋಳ ಬಿತ್ತನೆ ಗುರಿ ಹಾಕಿಕೊಂಡಿತ್ತು. ಆ ಪೈಕಿ 7.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ, ಮಳೆ ಅಭಾವ, ರೋಗ ಇತರ ಕಾರಣಗಳಿಂದಾಗಿ ಬಿಳಿಜೋಳದ ಇಳುವರಿ ಕುಸಿತ ಕಂಡಿದೆ. ಇದರಿಂದಾಗಿ ಬಿತ್ತನೆಯಾಗಿರುವ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜೋಳ ಉತ್ಪಾದನೆ ಆಗುತ್ತಿಲ್ಲ. ಉತ್ಪಾದನೆ ಕಡಿಮೆಯಾಗುತ್ತಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೊಟ್ಟಿಯೂ ತುಟ್ಟಿ: ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಬಿಳಿಜೋಳದ ದರ ಗಗನಕ್ಕೇರಿದ್ದರಿಂದ ಜನರು ತತ್ತರಿಸಿದ್ದಾರೆ. ವಿವಿಧ ನಗರ ಪ್ರದೇಶಗಳಲ್ಲಿರುವ ಹೋಟೆಲ್​ಗಳಲ್ಲಿ ಜೋಳದ ರೊಟ್ಟಿಗೆ 10 ರಿಂದ 12 ರೂ. ಹಾಗೂ ಖಡಕ್ ರೊಟ್ಟಿಗೆ 8ರಿಂದ 10 ರೂ. ವರೆಗೆ ಮಾರಾಟವಾಗುತ್ತಿದೆ.

ರೊಟ್ಟಿಗೆ ಅಕ್ಕಿ ಮಿಶ್ರಣ ಪ್ರಮಾಣ ಹೆಚ್ಚಳ: ಬೆಂಗಳೂರು ಮಹಾನಗರ ಸೇರಿ ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಹೋಟೆಲ್​ಗಳಲ್ಲಿ ಬಿಳಿ ಜೋಳದ ರೊಟ್ಟಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನಿತ್ಯ ಲಕ್ಷಾಂತರ ಗ್ರಾಹಕರಿಗೆ ಬಿಸಿ, ಖಡಕ್ ಜೋಳದ ರೊಟ್ಟಿ ಮಾಡಿಕೊಡಲಾಗುತ್ತಿದೆ. ಆದರೆ ಜೋಳದ ಅಭಾವ ಕಂಡು ಬಂದಿರುವುದರಿಂದ ಜೋಳದ ಹಿಟ್ಟಿಗೆ ಅಕ್ಕಿ ಹಿಟ್ಟು ಮಿಶ್ರಣ ಮಾಡಿ ರೊಟ್ಟಿ ಮಾಡುತ್ತಿದ್ದಾರೆ. ಈ ಅಕ್ಕಿ ಹಿಟ್ಟು ಮಿಶ್ರಣದ ಜೋಳದ ರೊಟ್ಟಿಯು ನೋಡಲು ಬೆಳ್ಳಗೆ ಕಂಡರೂ ಅಷ್ಟೇನು ರುಚಿಕರವಾಗಿರುವುದಿಲ್ಲ. ಹೋಟೆಲ್ ಮಾಲೀಕರು ತಮ್ಮ ವ್ಯಾಪಾರಕ್ಕಾಗಿ ಜೋಳದ ಹಿಟ್ಟಿಗೆ ನಾನಾ ರೀತಿ ಮಿಶ್ರಣ ಮಾಡುತ್ತಿರುವುದು ಕಂಡುಬಂದಿದೆ.

ರೈತರ ಬಳಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪನ್ನಗಳು ಇಲ್ಲದಿರುವ ಕಾರಣ ಮಾರುಕಟ್ಟೆಯಲ್ಲಿ ಬಿಳಿಜೋಳದ ಬೆಲೆ ಏರಿಕೆ ಕಂಡಿದೆ. ಕ್ವಿಂಟಾಲ್​ಗೆ 6ರಿಂದ 7 ಸಾವಿರ ರೂ. ಹಾಗೂ ಕೆಜಿಗೆ 65 ರಿಂದ 80 ರೂ.ವರೆಗೆ ಮಾರಾಟವಾಗುತ್ತಿದ್ದು, ದಾಖಲೆ ನಿರ್ವಿುಸಿದೆ. ಹಿಂಗಾರಿನಲ್ಲೂ ಬರ ಮುಂದುವರಿದರೆ ಜೋಳ ಇನ್ನೂ ತುಟ್ಟಿಯಾಗುವುದು. | ರಾಚಪ್ಪ ಅಂಗಡಿ, ಕಾಳಿನ ವ್ಯಾಪಾರಿ, ಗೋಕಾಕ ಸದ್ಯ ಕಬ್ಬು ಸೇರಿ ಇತರ ವಾಣಿಜ್ಯ ಬೆಳೆಗಳ ಪ್ರಭಾವ ಹೆಚ್ಚಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ. ಉತ್ಪಾದನೆ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಏರಿಕೆ ಕಂಡಿದೆ. | ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net