

ದಾವಣಗೆರೆ: ಡ್ಯಾಂ ನೋಡಲು ಹೋಗಿದ್ದ ಕುಟುಂಬಕ್ಕೆ ಶೋಕದ ಛಾಯೆ ಆವರಿಸಿದೆ. ಸಂಭ್ರಮಿಸಲು ಎಂದು ಬಂದವರು ದುಃಖದ ಮಡುವಿನಲ್ಲಿ ಮುಳುಗುವಂತಾಗಿದೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ರಜೆಗೆಂದು ಪಿಕ್ನಿಕ್ಗೆ ಬಂದಿದ್ದು, ಅವರಲ್ಲಿ ತಂದೆ-ಮಗ ಸಾವಿಗೀಡಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ಈ ದುರಂತ ಸಂಭವಿಸಿದೆ. ಮಿಟ್ಲಕಟ್ಟೆ ಗ್ರಾಮದ ಚಂದ್ರು (42) ಹಾಗೂ ಅವರ ಪುತ್ರ ಶೌರ್ಯ (9) ಸಾವಿಗೀಡಾದ ದುರ್ಧೈವಿಗಳು. ತೀವ್ರ ಅಸ್ವಸ್ಥಗೊಂಡಿದ್ದ ಚಂದ್ರು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದರೆ, ಪುತ್ರ ಶೌರ್ಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ.
ನೀರಿನಲ್ಲಿ ಈಜಾಡುತ್ತಿದ್ದ ಮಕ್ಕಳಿಬ್ಬರು ಸುಳಿಗೆ ಸಿಲುಕಿದ್ದನ್ನು ನೋಡಿದ ತಂದೆ ರಕ್ಷಣೆಗೆ ಧಾವಿಸಿದ್ದರು. ಒಬ್ಬ ಪುತ್ರನನ್ನು ರಕ್ಷಿಸಿ ದಡಕ್ಕೆ ಕರೆತಂದು ಬಿಟ್ಟು, ಇನ್ನೊಬ್ಬ ಪುತ್ರನ ರಕ್ಷಣೆಗೆ ಧಾವಿಸಿದ್ದರು. ಆದರೆ ಈ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.