ಜಲಪಾತ ಸೂಪರ್ ಮೈಮರೆತರೆ ಡೇಂಜರ್

sfdc
Published on

ಭೀಕರ ಬಿಸಿಲು, ನೀರಿಗೆ ಹಾಹಾಕಾರ, ಜನ ಬದುಕುವುದೇ ಕಷ್ಟ ಎಂಬ ಸ್ಥಿತಿ ಇದ್ದ ಕರುನಾಡಿನ ಚಿತ್ರಣ ಒಂದೇ ತಿಂಗಳಲ್ಲಿ ಸಂಪೂರ್ಣ ಬದಲಾಗಿದೆ. ಇದೀಗ ಎಲ್ಲಿ ನೋಡಿದರೂ ಭೂರಮೆ ಹಸಿರನ್ನುಟ್ಟು ನಲಿಯುತ್ತಿದ್ದಾಳೆ. ಮಳೆ ಅಬ್ಬ

gokak
ರಿಸುತ್ತಿದೆ. ಬರಿದಾಗಿದ್ದ ಜಲಾಶಯಗಳ ಒಡಲು ಭರ್ತಿಯಾಗುತ್ತಿದ್ದರೆ, ಬತ್ತಿ ಬರಿದಾಗಿದ್ದ ಜಲಪಾತಗಳು ಭೋರ್ಗರೆಯುತ್ತಿವೆ. ಪ್ರಮುಖ ಜಲಪಾತಗಳಿಗೆ ಜನ ತಂಡೋಪತಂಡವಾಗಿ ಲಗ್ಗೆ ಇಡುತ್ತಿದ್ದು, ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವರ್ಷಧಾರೆ ಆಶಾಭಾವನೆ ಮೂಡಿಸಿದ್ದು, ಜಲಪಾತಗಳಲ್ಲಿ ಹರ್ಷ ಧಾರೆಯಾಗಿ ಹರಿಯುತ್ತಿದೆ.

ಜಲಪಾತಗಳು ತುಂಬಿ ಹರಿಯುತ್ತಿರುವುದು ಸಂತಸ ತಂದರೂ ಪ್ರವಾಸಿಗರ ಹುಚ್ಚಾಟಗಳು ಆತಂಕ ಮೂಡಿಸುತ್ತವೆ. ಜಲಪಾತಗಳಲ್ಲಿ ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಸೆಲ್ಪಿ ಗೀಳು, ಸಾಹಸದ ಹುಚ್ಚಾಟಗಳು ಅಪಾಯವನ್ನು ನಿರ್ಲಕ್ಷಿ್ಯಸುತ್ತಿವೆ. ಅಲ್ಲದೆ ದಟ್ಟ ಕಾನನದ ನಡುವೆ ಇರುವ ಸಣ್ಣಪುಟ್ಟ ಜಲಪಾತಗಳ ಮಾರ್ಗಗಳು ಪ್ರವಾಸಿಗರಿಗೆ ತೆರೆದುಕೊಂಡಿವೆ. ಅಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ನಿತ್ಯ ನೂರಾರು ಜನರು ತೆರಳುತ್ತಿದ್ದಾರೆ. ಬಹುತೇಕ ಜಲಪಾತದ ಬಳಿ ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಾರುವ ಕಲ್ಲುಗಳಿಂದ ಬಿದ್ದರೆ ಶವವೂ ಸಿಗಲಿಕ್ಕಿಲ್ಲ! ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಉಂಟಾದ ದುರ್ಘಟನೆ ಎಲ್ಲರಿಗೂ ಎಚ್ಚರಿಕೆ ಘಂಟೆಯಾಗಬೇಕಿದೆ. ಕೆಲವು ಕಡೆ ಅರಣ್ಯ ಸಿಬ್ಬಂದಿ ತಡೆಯಲು ಮುಂದಾದರೂ ಅವರ ಮೇಲೆ ಹಲ್ಲೆ ನಡೆಸಿದಂತಹ ಉದಾಹರಣೆಗಳು ಇವೆ. ದಟ್ಟ ಕಾನನದ ಮಧ್ಯೆ ಇರುವ ಬಹುತೇಕ ಜಲಪಾತಗಳ ಸಮೀಪ ಪ್ರವಾಸಿಗರಿಗೆ ಸುರಕ್ಷತಾ ಸ್ಥಳದಲ್ಲಿ ನಿಂತು ಧುಮ್ಮಿಕ್ಕುವ ನೀರು ವೀಕ್ಷಿಸುವ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಮಟ್ಟದಲ್ಲೇ ಕಾರ್ಯಯೋಜನೆ ಆಗಬೇಕು ಹಾಗೂ ಪ್ರವಾಸಿಗರೂ ಎಚ್ಚರಿಕೆ ವಹಿಸಬೇಕು ಎಂಬುದು ವಿಜಯವಾಣಿ ಕಳಕಳಿ.

ಪ್ರವಾಸಿಗರ ದಾಂಗುಡಿ : ಮಳೆಯ ಕಾರಣ ರಾಜ್ಯದ ಬಹುತೇಕ ಜಲಪಾತಗಳು ಮೈದುಂಬಿವೆ. ಬೆಳಗಾವಿಯ ಗೋಕಾಕ ಫಾಲ್ಸ್, ಗೋಡಚಿನಮಲ್ಕಿ, ಮೈಸೂರು ಜಿಲ್ಲೆಯ ಚುಂಚನಕಟ್ಟೆ, ಕೊಡಗು ಜಿಲ್ಲೆಯ ಅಬ್ಬಿಫಾಲ್ಸ್, ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ಚೇಲಾವರ ಫಾಲ್ಸ್, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿವೆ. ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ವಯಿ ಫಾಲ್ಸ್, ದಿಡುಪೆಯ ಕಡಮಗುಂಡಿ, ಸುಳ್ಯ ವ್ಯಾಪ್ತಿಯ ಸೋಣಂಗೇರಿ, ಚಾಮಡ್ಕ ಹಾಗೂ ದೇವರಗುಂಡಿ ಫಾಲ್ಸ್, ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಅರ್ಭಿ ಫಾಲ್ಸ್, ಹೆಬ್ರಿ ಸಮೀಪದ ಕೂಡ್ಲು ಹಾಗೂ ಜೋಮ್ಲು ಫಾಲ್ಸ್, ಮೂಕಾಂಬಿಕಾ ವನ್ಯಜೀವಿ ವಿಭಾಗದ ಅರಶಿಣಗುಂಡಿ ಜಲಪಾತ, ಕಾರ್ಕಳ ಸಮೀಪದ ಹನುಮನಗುಂಡಿ ಹಾಗೂ ಮಾಳ ಫಾಲ್ಸ್, ಕುಂದಾಪುರ ತಾಲೂಕಿನ ಹೊಸಂಗಡಿಯ ಇರ್ಕಿಗದ್ದೆ ಫಾಲ್ಸ್, ಬಾಳೆಬರೆ ಜಲಪಾತ, ದೂರ್ಡ್ ಕುಂಚಿಕಲ್ ಜಲಪಾತಗಳು ಉಕ್ಕಿಹರಿಯುತ್ತಿದ್ದು, ಆದರೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

ಅಪಾಯಕಾರಿ ಚಾರ್ವಡಿ: ಚಿಕ್ಕಮಗಳೂರು ಜಿಲ್ಲೆಯ ಚಾರ್ವಡಿ ಘಾಟಿ ಮಸಣದ ಮನೆ ಎಂಬ ಅರಿವು ಪ್ರವಾಸಿಗರಿಗೆ ಇಲ್ಲ. ಮಳೆಗಾಲದಲ್ಲಿ ಚಾರ್ವಡಿ ಘಾಟಿಯ ರಸ್ತೆಗೇ ನೀರು ಧುಮ್ಮಿಕ್ಕುತ್ತದೆ. ಜಲಪಾತ ಕಣ್ತುಂಬಿಕೊಂಡ ದಾರಿಹೋಕರು ನೀರಿನಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಳ್ಳುತ್ತಾರೆ. ನಿರಂತರ ಮಳೆಯಾಗುವ ಹಿನ್ನೆಲೆಯಲ್ಲಿ ಬಂಡೆಗಳು ಪಾಚಿಕಟ್ಟಿರುತ್ತವೆ. ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವಾಗ ಅನೇಕರು ಕಾಲು ಜಾರಿ ಬಿದ್ದು ಜೀವ ಕಳೆದುಕೊಂಡಿದ್ದಾರೆ.

ಎಲ್ಲೆಲ್ಲಿ ನಿರ್ಬಂಧ

. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸಾತೊಡ್ಡಿ, ಮಾಗೋಡು, ಶಿರಸಿಯ ಶಿವಗಂಗೆ, ಮುರೇಗಾರ, ಅಂಕೋಲಾದ ಮಾಬಗಿ ಮುಂತಾದ ಪ್ರಮುಖ ಜಲಪಾತಗಳಿರುವ ತಾಣಗಳಿಗೆ ಪ್ರವೇಶವನ್ನು ಅರಣ್ಯ ಇಲಾಖೆಯವರು ನಿರ್ಬಂಧಿಸಿ, ಫಲಕ ಅಳವಡಿಸಿದ್ದಾರೆ.

. ದ.ಕ., ಉಡುಪಿ ಜಿಲ್ಲೆಯ ಪ್ರಮುಖ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರ ಸುರಕ್ಷೆ ದೃಷ್ಟಿಯಿಂದ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net