

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಿಲ್ಲವರ್ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಬಿಲ್ಲವರ್ನ ಮಚೇಡಿ ಪ್ರದೇಶದಲ್ಲಿ ಬೆಟ್ಟದ ಮೇಲಿಂದ ಭಯೋತ್ಪಾದಕರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಅವರು ಸೇನಾ ವಾಹನದ ಮೇಲೆ ಗ್ರೆನೇಡ್ಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಈ ಘಟನೆ ನಡೆದ ಬಳಿಕ ಯೋಧರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಆದರೆ ಉಗ್ರರು ಸ್ಥಳದಿಂದ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳಲ್ಲಿ ನಡೆದ ಎರಡನೇ ಉಗ್ರ ದಾಳಿ ಇದಾಗಿದೆ. ಆರಂಭಿಕ ದಾಳಿಯನ್ನು ವಿಫಲಗೊಳಿಸಲಾಗಿದ್ದು, ಎನ್ಕೌಂಟರ್ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆ ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ಗಡಿಯನ್ನು ಹೊಂದಿದೆ.
ಕಳೆದ ಕೆಲವು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಳು ಉಲ್ಬಣಗೊಂಡಿವೆ. ಜೂನ್ 11 ರಂದು, ಚತ್ತರಗಲ್ಲದ ಜಂಟಿ ಚೆಕ್ ಪೋಸ್ಟ್ ಮೇಲೆ ಭಯೋತ್ಪಾದಕರು ದಾಳಿ ವೇಳೆ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆ, ಜೂನ್ 12 ರಂದು ಗಂಡೋ ಪ್ರದೇಶದ ಕೋಟಾ ಮೇಲ್ಭಾಗದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ದಾಳಿಯ ನಂತರ, ಭದ್ರತಾ ಪಡೆಗಳು ತಮ್ಮ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಜಿಲ್ಲೆಯಲ್ಲಿ ನುಸುಳಿ ಕಾರ್ಯಾಚರಣೆ ನಡೆಸಿದ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರಿಗೆ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು.
ಜೂನ್ 26 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದರು. ಜೂನ್ 11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಭಯೋತ್ಪಾದಕ ದಾಳಿಯ ನಂತರ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಜೊತೆಗೆ ಪೊಲೀಸರು ನಡೆಸಿದ ತೀವ್ರ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆಯ ನಡುವೆ ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು.