

ಶಿವಮೊಗ್ಗ: ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 16 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕ ಸಂತೋಷ್ ಕಾಂಚನ್ ಅವರ ಬೀಳ್ಕೊಡುಗೆಗೆ ಗ್ರಾಮಸ್ಥರು ಆಕರ್ಷಕ ಬಜಾಜ್ ಪಲ್ಸರ್ ಬೈಕ್ ಅನ್ನು ಗಿಫ್ಟ್ ಕೊಟ್ಟಿದ್ದಾರೆ.
ಸಂತೋಷ್ ಅವರು ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಬಂದಾಗ ಇಲ್ಲಿನ ಕಾಡು ಕುಣುಬಿ ಜನಾಂಗದವರಿಗೆ ವಾಹನ ವ್ಯವಸ್ಥೆ ಇರಲಿಲ್ಲ. ಮುಖ್ಯರಸ್ತೆಗೆ ತಲುಪಬೇಕೆಂದರೆ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಊರಿನವರಿಗಾಗಿ ಶಿಕ್ಷಕ ಸಂತೋಷ್ ಕಾಂಚನ್ ಬೈಕ್ ಅನ್ನು ಖರೀದಿಸಿದ್ದರು.
ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಬಂದರೆ ಈ ಶಿಕ್ಷಕನ ಬೈಕ್ ಆ್ಯಂಬುಲೆನ್ಸ್ ಆಗಿತ್ತು. ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿಭಾಕಾರಂಜಿಗೂ ಈ ಬೈಕ್ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ರು.
ಶಿಕ್ಷಕ ಸಂತೋಷ್ ಅವರಿಗೆ ಬೇರೆ ಊರಿನ ಶಾಲೆಗೆ ವರ್ಗವಣೆಯಾಗಿದೆ. ಸತತ 16 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಮಾಡಿದ ಅವರಿಗೆ ಗ್ರಾಮಸ್ಥರೆಲ್ಲಾ ಸೇರಿ ಹಣ ಒಗ್ಗೂಡಿಸಿ ಒಂದುವರೆ ಲಕ್ಷ ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್ ಗಿಫ್ಟ್ ನೀಡಿದ್ದಾರೆ.