

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ಹೆಚ್ಚಿಸಿದ್ದು, ವಾಲ್ಮೀಕಿ ಜಯಂತಿ ಆಚರಣೆ ಘೋಷಿಸಿದ್ದು, ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಬಿಜೆಪಿ ಸರ್ಕಾರ. ಆದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗಿದ್ದು ಏಕೆ? ಎನ್ನುವ ವಿಷಯ ಬಿಜೆಪಿ ನಾಯಕರನ್ನು ತೀವ್ರವಾಗಿ ಕಾಡಿತು.
ಅರಮನೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಸ್.ಟಿ.ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ನಾಯಕರೆಲ್ಲ ಚುನಾವಣೆಯಲ್ಲಾದ ಹಿನ್ನೆಡೆ ಪ್ರಸ್ತಾಪಿಸಿ, ಮುಂದೆ ಲೋಕಸಭೆ ಚುನಾವಣೆಯಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ವಿಧಾನಸಭೆಯ 15 ಕ್ಷೇತ್ರಗಳಲ್ಲಿ ಸಮುದಾಯದ ಒಬ್ಬ ನಾಯಕರೂ ಗೆದ್ದಿಲ್ಲ. ಸಮುದಾಯದ ಪರವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಕೆಲಸಗಳನ್ನು, ತೆಗೆದುಕೊಂಡ ತೀರ್ವನಗಳನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ನ ಗಿಮಿಕ್ ರಾಜಕಾರಣವನ್ನು ಜನರಿಗೆ ಮನದಟ್ಟು ಮಾಡಿದರೆ ಮಾತ್ರ ಗೆಲುವಿನ ಸಿಹಿ ಸವಿಯಲು ಸಾಧ್ಯ. ಅದಕ್ಕಾಗಿ ಸಮುದಾಯ ಕಂಕಣಬದ್ಧವಾಗಬೇಕು ಎಂದು ಸಮುದಾಯದ ನಾಯಕರು ಕರೆ ನೀಡಿದರು. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸಮುದಾಯ ಬಿಜೆಪಿಯಿಂದ ದೂರ ಹೋದದ್ದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಮುದಾಯಕ್ಕೆ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ ಎನ್ನುವುದನ್ನು ನಾವು ತಿಳಿಸಿಕೊಡಬೇಕು. ಬಿಜೆಪಿ ಮತ್ತು ಎಸ್ಟಿ ಸಮಾಜದ ನಡುವೆ ಅವಿನಾಭಾವ ಸಂಬಂಧ ಹಿಂದಿನಿಂದಲೂ ಇದೆ. ಯಡಿಯೂರಪ್ಪ ಮಾಡಿದ ಅಭಿವೃದ್ಧಿ ಕಾರ್ಯದ ಹಿಂದೆ ವಾಲ್ಮೀಕಿ ಸಮುದಾಯದ ಶಾಸಕರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಚುನಾವಣೆಗೆ ಸಜ್ಜಾಗಲು ಬಿಎಸ್ವೈ ಕರೆ: ನಾನು ಸಿಎಂ ಆಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಲಾಯಿತು. ಇದೆಲ್ಲವನ್ನು ಜನರಿಗೆ ಅರ್ಥ ಮಾಡಿಸಬೇಕಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸಮುದಾಯವನ್ನು ಕಾಂಗ್ರೆಸ್ ಮತಬ್ಯಾಂಕ್ ಮಾಡಿಕೊಂಡಿತ್ತು. ಮುಖ್ಯವಾಹಿನಿಗೆ ತರುವಲ್ಲಿ ಬಿಜೆಪಿ ಸರ್ಕಾರ ಎಲ್ಲ ರೀತಿಯಲ್ಲೂ ಆದ್ಯತೆ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಶ್ರಮಿಸಲು ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಟಿ.ರವಿ, ಸುನೀಲ್ ಕುಮಾರ್, ರಾಜುಗೌಡ ನಾಯಕ್ ಮುಖಂಡರು ಉಪಸ್ಥಿತರಿದ್ದರು.
22ಕ್ಕೆ ರಜೆ ಘೊಷಿಸಲು ಬಿ.ವೈ.ವಿಜಯೇಂದ್ರ ಆಗ್ರಹ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ವೀಕ್ಷಿಸಲು ಅನುವಾಗುವಂತೆ ಜ.22ರಂದು ರಾಜ್ಯ ಸರ್ಕಾರ ರಜೆ ಘೊಷಿಸಲಿ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಈಗಾಗಲೆ ಅನೇಕ ರಾಜ್ಯಗಳು 22ರಂದು ರಜೆ ಘೊಷಿಸಿದ್ದು, ಕೇಂದ್ರ ಸರ್ಕಾರವೂ ಅರ್ಧ ದಿನ ರಜೆ ಘೊಷಿಸಿದೆ. ಆದ್ದರಿಂದ ರಾಜ್ಯ ಸರ್ಕಾರವೂ ರಜೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಹಿಂದು ಸಮಾಜಕ್ಕೆ ಈ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಮಹತ್ವವಾಗಿದ್ದು, ಅದನ್ನು ವೀಕ್ಷಿಸಲು ಈ ಮೂಲಕ ಅವಕಾಶ ಮಾಡಿಕೊಡಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಸಾಕಷ್ಟು ಸೌಲತ್ತು ಕಲ್ಪಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಮೀಸಲಾತಿ ಸೇರಿ ಎಲ್ಲ ಸೌಲಭ್ಯವನ್ನು ಆದ್ಯತೆ ಮೇರೆಗೆ ನೀಡಲಾಗಿದೆ. ಆದರೂ, ಕಳೆದ ಚುನಾವಣೆಯಲ್ಲಿ ನಮಗೆ ಸ್ವಲ್ಪ ಹಿನ್ನಡೆ ಆಗಿರಬಹುದು. ಚಿಂತೆ ಬೇಡ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಕೈ ಬಲಪಡಿಸೋಣ.
|ಪ್ರಲ್ಹಾದ ಜೋಶಿ ಕೇಂದ್ರ ಸಚಿವರು
ಮೊಣಕೈ, ಮೂಗಿಗೆ ತುಪ್ಪ ಸವರುವುದೇ ಕಾಂಗ್ರೆಸ್ನ ಸಾಮಾಜಿಕ ನ್ಯಾಯ. ಆ ತುಪ್ಪವನ್ನು ತಿನ್ನಲಾಗುತ್ತದೆಯೇ? ಶೇ.3ರಷ್ಟಿದ್ದ ಎಸ್ಟಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದ್ದು ಬಿಜೆಪಿ ಎನ್ನುವುದನ್ನು ಮರೆಯದಿರಿ.
| ಸಿ.ಟಿ.ರವಿ ಮಾಜಿ ಸಚಿವ.