

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ದಿವಂಗತ ಜಾನ್ ಎಫ್ ಕೆನಡಿಯ ಸೋದರ ರಾಬರ್ಟ್ ಎಫ್ ಕೆನಡಿಯ ಮೊಮ್ಮಗಳು ಮೇವ್ ಕೆನಡಿ ಟೌನ್ಸೆಂಡ್ (40) ಹಾಗೂ ಆಕೆಯ ಎಂಟು ವರ್ಷದ ಮಗ ಗಿಡೆನ್, ಅನ್ನಾಪೊಲಿಸ್ ಸಮೀಪದ ಚೆಸ್ಪೀಕ್ ಕೊಲ್ಲಿಯಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ದೋಣಿ ವಿಹಾರಕ್ಕೆ ತೆರಳಿದ್ದ ಇಬ್ಬರೂ ಗುರುವಾರದಿಂದ ನಾಪತ್ತೆಯಾಗಿದ್ದು ಅವರು ಸತ್ತಿರುವರೆಂದು ನಂಬಲಾಗಿದೆ. ಇವರಿಬ್ಬರನ್ನೂ ಹುಡುಕಲು ಕರಾವಳಿ ಕಾವಲು ಪಡೆ ನಡೆಸಿದ್ದ 26 ಗಂಟೆಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದು ಪ್ರಖ್ಯಾತ ಕೆನಡಿ ಕುಟುಂಬದ ಮೂರು ತಲೆಮಾರುಗಳಲ್ಲಿ ಸಂಭವಿಸಿದ ಇತ್ತೀಚಿನ ದುರಂತವಾಗಿದೆ. ರಾಬರ್ಟ್ ಕೆನಡಿಯ ಇನ್ನೊಬ್ಬಳು ಮೊಮ್ಮಗಳು ಸೊಯ್ರ್ಸೆ ಕೆನಡಿ ಹಿಲ್, 2019ರಲ್ಲಿ ಅತಿಯಾದ ಮಾದಕ ದ್ರವ್ಯ ಸೇವನೆಯಿಂದ ಮೃತಪಟ್ಟಿದ್ದಳು. ಕೆನಡಿ ಕುಟುಂಬದ ದುರಂತಗಳು ‘ಕೆನಡಿ ಶಾಪ’ ಎಂದೇ ಕುಖ್ಯಾತವಾಗಿದೆ.
ಅಮೆರಿಕದ ಜನಪ್ರಿಯ ಹಾಗೂ ಪ್ರಭಾವಶಾಲಿ ಕೆನಡಿ ಕುಟುಂಬ, ದುಃಖ ಹಾಗೂ ದುರಂತದ ಸರಮಾಲೆಯನ್ನೇ ಧರಿಸಿರುವುದು ಇತಿಹಾಸದ ಒಂದು ವ್ಯಂಗ್ಯ. ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿಯ ಹತ್ಯೆಗಿಂತ ಮುಂಚಿನಿಂದಲೇ ಈ ದುರಂತ ಸರಣಿ ಆರಂಭವಾಗಿದೆ. ಜಾನ್ ಹತ್ಯೆಗಿಂತ ಕೆಲವು ತಿಂಗಳ ಮುಂಚೆ ಅವರ ಎರಡು ದಿನಗಳ ಗಂಡು ಮಗ ಪ್ಯಾಟ್ರಿಕ್ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದ.
ದುರಂತದ ವಿವರ
# ಜೋಸೆಫ್ ಕೆನಡಿ
ಜಾನ್ ಎಫ್ ಕೆನಡಿಯ ಹಿರಿಯ ಸೋದರ ಜೋಸೆಫ್ ಕೆನಡಿ ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ನಲ್ಲಿ ಪೆಟ್ರೋಲ್ ಬಾಂಬರ್ನ ಪೈಲಟ್ ಆಗಿದ್ದರು. 1944 ಆಗಸ್ಟ್ 12ರಂದು ಇಂಗ್ಲಿಷ್ ಕಡಲ್ಗಾಲುವೆ ಮೇಲೆ ಹಾರಾಡುತ್ತಿದ್ದ ಅವರ ವಿಮಾನ ಸ್ಪೋಟಿಸಿತ್ತು.
# ಕ್ಯಾಥಲೀನ್ ಕೆನಡಿ
ಬ್ರಿಟಿಷ್ ರಾಜಕುಟುಂಬದ ಸದಸ್ಯರೊಬ್ಬರನ್ನು ಮದುವೆ ಆಗಿದ್ದ ಕೆನಡಿ ಕುಟುಂಬದ ಕ್ಯಾಥಲೀನ್ ಕೆನಡಿ, 1948 ಮೇ 13ರಂದು ಫ್ರಾನ್ಸ್ನಲ್ಲಿ ವಿಮಾನ ಅವಘಡದಲ್ಲಿ ಮೃತಪಟ್ಟರು. ಆಗ ಅವರಿಗೆ 28 ವರ್ಷ ವಯಸ್ಸು.
# ಜಾನ್ ಎಫ್ ಕೆನಡಿ
ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ, 1963 ನವೆಂಬರ್ 22ರಂದು ಡಲ್ಲಾಸ್ನಲ್ಲಿ ಹಂತಕರ ಗುಂಡಿಗೆ ಬಲಿಯಾದರು. ಹಂತಕ ಲೀ ಹಾರ್ವೆ ಸೆರೆ ಸಿಕ್ಕರೂ ಹತ್ಯೆಗೆ ಕಾರಣ ಏನೆಂಬುದು ಇಂದಿಗೂ ನಿಗೂಢ.
# ರಾಬರ್ಟ್ ಎಫ್ ಕೆನಡಿ: ಜಾನ್ ಎಫ್ ಕೆನಡಿಯ ಕಿರಿಯ ಸೋದರ ರಾಬರ್ಟ್ ಎಫ್ ಕೆನಡಿ ದೇಶದ ಅಟಾರ್ನಿ ಜನರಲ್ ಆಗಿದ್ದು ಸೆನೆಟರ್ ಕೂಡ ಆಗಿದ್ದವರು. ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಸುತ್ತಿನಲ್ಲಿ ಗೆದ್ದಿದ್ದ ಅವರ ಮೇಲೆ ಲಾಸ್ ಏಂಜಲ್ಸ್ನಲ್ಲಿ 1968 ಜೂನ್ 5ರಂದು ಗುಂಡಿನ ದಾಳಿ ನಡೆದಿತ್ತು. ಮರುದಿನ ಸಾವು.
# ಡೇವಿಡ್ ಕೆನಡಿ: ರಾಬರ್ಟ್ ಕೆನಡಿ ಮೇಲೆ ಗುಂಡಿನ ದಾಳಿ ನಡೆದಿದ್ದನ್ನು ಟಿವಿ ಪರದೆ ಮೇಲೆ ನೋಡಿದ್ದ ಅವರ 12 ವರ್ಷದ ಮಗ ಡೇವಿಡ್, ತಂದೆಯ ಸಾವಿನಿಂದ ಖಿನ್ನನಾಗಿ ಮದ್ಯವ್ಯಸನಿಯಾದ. ಅತಿಯಾಗಿ ಮಾದಕದ್ರವ್ಯ ಸೇವನೆ ಪರಿಣಾಮ 28ನೇ ವಯಸ್ಸಿನಲ್ಲಿ, 1984ರಲ್ಲಿ ಫ್ಲಾರಿಡಾದಲ್ಲಿ ಕೊನೆಯುಸಿರೆಳೆದ.
# ಜಾನ್ ಎಫ್ ಕೆನಡಿ ಜೂನಿಯರ್: ಜಾನ್ ಎಫ್ ಕೆನಡಿಯ ಪುತ್ರನಾದ ಜೂನಿಯರ್ ಜಾನ್ ಎಫ್ ಕನಡಿ ಪೈಲಟ್ (38) ಆಗಿದ್ದರು. ಅವರು ಚಲಾಯಿಸುತ್ತಿದ್ದ ವಿಮಾನ ಮಾರ್ಥಾ ವೈನ್ಯಾರ್ಡ್ ಸಮೀಪ ಸಮುದ್ರದಲ್ಲಿ ಪತನವಾಯಿತು. ಈ ದುರಂತದಲ್ಲಿ ಅವರ ಪತ್ನಿ ಕ್ಯಾರೊಲಿನ್ ಬೆಸೆಟ್ಟೆ ಕೆನಡಿ ಹಾಗೂ ನಾದಿನಿ ಲಾರೆನ್ ಬೆಸೆಟ್ಟೆ ಕೂಡ ಮೃತರಾದರು.
# ಮೈಕಲ್ ಕೆನಡಿ: ರಾಬರ್ಟ್ ಕೆನಡಿಯ ಇನ್ನೊಬ್ಬ ಮಗ ಮೈಕಲ್ ಕೆನಡಿ, 1997ರಲ್ಲಿ ಹಿಮದಲ್ಲಿ ಸ್ಕೀಯಿಂಗ್ ಆಡುತ್ತಿದ್ದಾಗ ಮರಕ್ಕೆ ಬಡಿದು ಮರಣಿಸಿದರು. ಆಗ ಅವರಿಗೆ 39 ವರ್ಷ ವಯಸ್ಸು.