

ಕೋವಿಡ್-19 ಕಾಯಿಲೆಗೆ ಕಾರಣವಾಗುವ ನೊವಲ್ ಕರೊನಾ ವೈರಸ್ ಸೋಂಕು ಗಾಳಿಯಿಂದ ಹರಡುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಕರೊನಾ ಸೋಂಕು ಗಾಳಿಯಿಂದ ಹರಡುವುದಾಗಿದ್ದರೆ, ಮನೆಯಲ್ಲಿನ ಎಲ್ಲರಿಗೂ ಅದು ವ್ಯಾಪಿಸಬೇಕಿತ್ತು. ಇಷ್ಟೇ ಅಲ್ಲದೇ, ಆಸ್ಪತ್ರೆಯಲ್ಲಿರುವ ಇತರ ರೋಗಿಗಳು ಹಬ್ಬಬೇಕಿತ್ತು. ಆದರೆ, ಈವರೆಗಿನ ಪ್ರಕರಣಗಳಲ್ಲಿ ಅಂಥ ಯಾವುದೇ ನಿದರ್ಶನಗಳು ಕಂಡು ಬಂದಿಲ್ಲ ಎಂದು ಐಸಿಎಂಆರ್ನ ಎಪಿಡಮಿಯಾಲಜಿ ಹಾಗೂ ಕಮ್ಯುನಿಕೇಬಲ್ ಡಿಸೀಸ್ನ ಮುಖ್ಯಸ್ಥ ಡಾ. ರಮಣ್ ಆರ್. ಗಂಗಖೇಡ್ಕರ್ ಭಾನುವಾರ ಮಾಹಿತಿ ನೀಡಿದ್ದಾರೆ.
ಕರೊನಾ ಸೋಂಕು ಗಾಳಿಯಿಂದ, ಉಸಿರಿನಿಂದ, ಪರಸ್ಪರ ಎದುರು ನಿಂತು ಮಾತನಾಡುವುದರಿಂದ ಹಬ್ಬುತ್ತದೆ ಎಂಬ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಉನ್ನತ ಮಟ್ಟದ ಸೈಂಟಿಸ್ಟ್ಗಳ ಸಮಿತಿಯೊಂದು ವರದಿ ನೀಡಿತ್ತು. ಗಾಳಿಯಿಂದ ಹರಡುವುದು ಸಾದ್ಯವಾಗದಿದ್ದ ಪಕ್ಷದಲ್ಲಿ ಕೋವಿಡ್-19 ಇಷ್ಟೊಂದು ತೀವ್ರವಾಗಿ ಅಮೆರಿಕದಲ್ಲಿ ಹಬ್ಬಲು ಸಾದ್ಯವಾಗುತ್ತಿರಲಿಲ್ಲ ಎಂದು ಹೇಳಿತ್ತು.
ಅಮೆರಿಕದಲ್ಲಿ ಭಾನುವಾರದ ವೇಳೆಗೆ (ಏ.5) 3.11 ಲಕ್ಷ ಜನರಿಗೆ ಸೋಕು ತಗುಲಿದ್ದು, 8,454 ಜನರು ಮೃತಪಟ್ಟಿದ್ದಾರೆ. ಸಂಓಕು ತೀವ್ರವಾಗಿ ವ್ಯಾಪಿಸಲು ಗಾಳಿಯ ಮೂಲಕ ಹರಡುತ್ತಿರುವುದೇ ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಆದರೆ, ಇದೊಂದು ಸೀಮಿತ ಅಧ್ಯಯನವಾಗಿದೆ ಎಂದು ಸ್ಪಷ್ಟನೆ ನೀಡಿತ್ತು.
ಅಲ್ಲದೆ, ನೆಬ್ರಸ್ಕಾ ವಿವಿಯ ವೈದ್ಯಕೀಯ ವಿಭಾಗ ನಡೆಸಿದ್ದ ಅಧ್ಯಯನದಲ್ಲಿಯೂ ಈ ಅಂಶ ತಿಳಿದು ಬಂದಿದೆ ಎಂದು ಅಮೆರಿಕ ವಾದಿಸಿತ್ತು. ಆದರೆ, ಈ ಮಾಹಿತಿ ಸುಳ್ಳು ಎನ್ನುತ್ತದೆ ಐಸಿಎಂಆರ್ ಪರಿಣತರ ಹೇಳಿಕೆ. (ಏಜೆನ್ಸೀಸ್)