

ಕೋಲಾರ/ಮುಳಬಾಗಿಲು: ನಗರದ ಅಶ್ವತ್ಥ್ ನಾರಾಯಣಶೆಟ್ಟಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಬರ್ಬರವಾಗಿ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದು, ಘಟನೆ ಸುತ್ತಮುತ್ತಲಿನವರನ್ನು ಬೆಚ್ಚಿ ಬೀಳಿಸಿದೆ.
ದಿವ್ಯಶ್ರೀ, (46) ಕೊಲೆಯಾದವರು. ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದಾಗ ರಾತ್ರಿ 7.30ರ ಆಸುಪಾಸಿನಲ್ಲಿ ಏಕಾಏಕಿ ಮನೆಗೆ ಆಗಮಿಸಿದ ಮೂವರು ಆಗಂತುಕರು ಶಿಕ್ಷಕಿಯ ಕುತ್ತಿಗೆ ಕೊಯ್ದು ಪರಾರಿಯಾಗಿದ್ದು, ಮನೆಯ ಮೇಲ್ಭಾಗದಲ್ಲಿದ್ದ ಪುತ್ರಿ ಕೆಳಗೆ ಬರುವಷ್ಟರಲ್ಲಿ ಹಂತಕರು ಪರಾರಿಯಾಗಿದ್ದಾರೆ.
ದಿವ್ಯಶ್ರೀ ಮುಳಬಾಗಿಲು ತಾಲೂಕಿನ ಮುಡಿಯನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಿಕ್ಷಕಿಯ ಪತಿ ಪದ್ಮನಾಭಶೆಟ್ಟಿ ಹಣಕಾಸು ಮತ್ತು ಊದುಬತ್ತಿ ಕಾರ್ಖಾನೆ ಮಾಲೀಕರಾಗಿದ್ದಾರೆ.
ಕೋಲಾರದಿಂದ ಬೆರಳಚ್ಚು, ಎಫ್‌ಎಸ್‌ಎಲï ತಜ್ಞರು, ಶ್ವಾನ ದಳ ಸಿಬ್ಬಂದಿ ಆಗಮಿಸಿ ಮಾದರಿ ಸಂಗ್ರಹಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಶಾಸಕ ಸಮೃದ್ಧಿ ವಿ.ಮಂಜುನಾಥ, ಎಸ್‌ಪಿ ಬಿ.ನಿಖಿಲ್, ತಹಸಿಲ್ದಾರ್ ಬಿ.ಎಸ್.ವೆಂಕಟಾಚಲಪತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ, ಜಗದೀಶ್, ಡಿವೈಎಸ್ಪಿ ಡಿ.ಸಿ.ನಂದಕುಮಾರ್, ನಗರ ಠಾಣೆ ಇನ್‌ಸ್ಪೆಕ್ಟರ್ ಎಚ್.ಎಂ.ಶಿವಕುಮಾರ್, ಗ್ರಾಮಾಂತರ ಠಾಣೆ ಸಿಪಿಐ ಕೆಜಿ ಸತೀಶ್, ಪಿಎಸ್‌ಐಗಳಾದ ವಿಠಲ್ ವೈ.ತಳವಾರ್, ಎಲï.ಮಮತಾ, ನಂಗ್ಲಿ ಠಾಣೆಯ ಪಿಎಸ್‌ಐ ಅರ್ಜುನ್, ಆರ್.ಎಸ್.ಗೌಡ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.