ಸಂಚಾರಕ್ಕೆ ಸಿದ್ಧ ರಾಜ್ಯದ ಮೊದಲ ಕಿಸಾನ್ ರೈಲು

Kissan Rail
Published on

ಬೆಂಗಳೂರು: ರಾಜ್ಯದ ಮೊದಲ ಕಿಸಾನ್ ರೈಲು ಸೇವೆ ಸೆ. 19ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನಿಂದ ದೆಹಲಿ ನಡುವೆ ಸಂಚರಿಸಲಿದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ನಲ್ಲಿ ಘೋಷಿಸಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚಾಲನೆ ಪಡೆದುಕೊಂಡಿರುವ ಕಿಸಾನ್ ರೈಲು ಈಗಾಗಲೇ ಉತ್ತರ ಭಾರತದ ಹಲವು ನಗರಗಳಲ್ಲಿ ಸೇವೆ ಆರಂಭಿಸಿದೆ. ಈ ರೈಲಲ್ಲಿ ಕೃಷಿ ಉತ್ಪನ್ನಗಳಾದ ಕ್ಯಾಬೇಜ್, ಕ್ಯಾಪ್ಸಿಕಂ, ಮೆಣಸಿನಕಾಯಿ, ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬಹುದಾಗಿದೆ. ಅದರ ಜತೆಗೆ ಹಾಲು, ಮಾಂಸ, ಮೀನು ಸೇರಿದಂತೆ ಬೇಗನೆ ಕೆಡಬಲ್ಲ ಪದಾರ್ಥಗಳನ್ನೂ ಸಾಗಿ ಸಬಹುದಾಗಿದೆ. ಅದಕ್ಕಾಗಿ ಕೋಲ್ಡ್ ಸ್ಟೋರೇಜ್ ಬೋಗಿಗಳನ್ನು ಅಳವಡಿಸಲಾಗಿದೆ.

ಹದಿನಾರು ಕಡೆ ನಿಲುಗಡೆ

ರೈಲಿನಲ್ಲಿ 10 ಅಧಿಕ ಸಾಮರ್ಥ್ಯದ ಪಾರ್ಸಲ್ ಬೋಗಿ (10 ವಿಪಿಎಚ್) ಅಳವಡಿಸಲಾಗಿರುತ್ತದೆ. ಅದರ ಜತೆಗೆ 2 ಲಗೇಜ್ ಕಂ ಜನರೇಟರ್ ಬೋಗಿಗಳಿರಲಿವೆ. ವಿಶೇಷ ರೈಲು ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡಾ, ಬೆಳಗಾವಿ, ಮೀರಜ್, ಪುಣೆ, ಮನ್ಮಾಡ್, ಭೂಸಾವಳ ಇಟಾರ್ಸಿ, ಭೋಪಾಲ್, ಝಾನ್ಸಿ, ಆಗ್ರಾ ದಂಡು ಮತ್ತು ಮಥುರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ಎಲ್ಲಿಂದ ಎಲ್ಲೆಲ್ಲಿಗೆ?: ಕಿಸಾನ್ ರೈಲು ಸೆ.19ರಿಂದ ಅ.19ರವರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಸೇವೆ ನೀಡಲಿದೆ. ಪ್ರತಿ ಶನಿವಾರ ಸಂಜೆ 4.45ಕ್ಕೆ ಕೆಎಸ್​ಆರ್ ನಿಲ್ದಾಣದಿಂದ ತೆರಳುವ ರೈಲು ಸೋಮವಾರ ರಾತ್ರಿ 11.45ಕ್ಕೆ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲಿದೆ. ಅದೇ ರೀತಿ ಸೆ. 22ರಿಂದ ಅ. 20ರವರೆಗೆ ಪ್ರತಿ ಮಂಗಳವಾರ ಸಂಜೆ 5.45ಕ್ಕೆ ನಿಜಾಮುದ್ದೀನ್ ನಿಲ್ದಾಣದಿಂದ ಹೊರತುವ ರೈಲು ಶುಕ್ರವಾರ ಮಧ್ಯರಾತ್ರಿ 1.45ಕ್ಕೆ ಕೆಎಸ್​ಆರ್ ನಿಲ್ದಾಣಕ್ಕೆ ಬರಲಿದೆ.

ಏನೇನು ಸೌಲಭ್ಯ?

ಈ ರೈಲು ಬಹು ವಿಧದ ಸರಕು, ಸಾಗಣೆದಾರರು ಮತ್ತು ಗ್ರಾಹಕರನ್ನು ಹೊಂದಿರಲಿದೆ. ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸರಕುಗಳನ್ನಷ್ಟೇ ತೆಗೆದುಕೊಂಡು ಹೋಗದೆ, ರೈತರು, ಹೈನುಗಾರರು, ಮಾಂಸ ಉತ್ಪಾದಕರ ಪದಾರ್ಥಗಳನ್ನು ಸಾಗಿಸಲಾಗುತ್ತದೆ. ಈವರೆಗೆ ಸರಕು ಸಾಗಣೆ ರೈಲುಗಳು ಆರಂಭದ ಮತ್ತು ಅಂತಿಮ ನಿಲ್ದಾಣಗಳಲ್ಲಷ್ಟೇ ನಿಲುಗಡೆ ನೀಡುತ್ತಿದ್ದವು. ಆದರೆ, ಕಿಸಾನ್ ರೈಲು ಸಾಗುವ ಮಾರ್ಗದಲ್ಲಿ ಸಿಗುವ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಸರಕುಗಳ ಲೋಡ್ ಮತ್ತು ಅನ್​ಲೋಡ್​ಗೆ ಅವಕಾಶ ನೀಡುತ್ತದೆ.

ಪ್ರಯೋಜನಗಳೇನು?

* ಸರಕು ಸಾಗಣೆಗೆ ಹೆಚ್ಚುವರಿ ದರ ಪಾವತಿಸುವಂತಿಲ್ಲ* 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರದ ಉದ್ದೇಶಕ್ಕೆ ಸಹಕಾರಿ* ರೈತರ ಉತ್ಪಾದನೆಗೆ ದೇಶದೊಳಗೆ ಮಾರುಕಟ್ಟೆ ಸೃಷ್ಟಿಸಲು ಸಹಕಾರಿ* ಸಣ್ಣ ರೈತರುಗಳ ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ಸಾಗಿಸಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net