

ನವದೆಹಲಿ: ಇಷ್ಟು ವರ್ಷಗಳ ಕಾಲ ಯಾವುದೇ ಭಯವಿಲ್ಲದೇ ನಿರ್ಭೀತಿಯಿಂದ ಭಾರತದಲ್ಲಿಯೇ ತಮ್ಮ ಕಳ್ಳ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿದ್ದ 38 ಆರ್ಥಿಕ ಅಪರಾಧಿಗಳು ಕಳೆದ ಐದು ವರ್ಷಗಳಲ್ಲಿ ದೇಶಬಿಟ್ಟು ಹೋಗಿದ್ದಾರೆ!
ಈ ಕುರಿತು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. 2015ರ ಡಿಸೆಂಬರ್ 31ರಿಂದ 2019ರ ಮಧ್ಯೆ ಐದು ವರ್ಷಗಳಲ್ಲಿ 38 ಮಂದಿ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಪರಾರಿ ಆಗಿದ್ದಾರೆ. ಇವರು ಬ್ಯಾಂಕ್ಗಳಿಂದ ಸಾಲ ಪಡೆದು, ಅದನ್ನು ಮರುಪಾವತಿಸದೆ ಪರಾರಿ ಆಗಿರುವವರು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ವಂಚನೆ ಮಾಡಿ, ಬ್ಯಾಂಕ್ಗಳ ಮೂಲಕ ಸಾಲ ಪಡೆದುಕೊಂಡು, ದೇಶ ಬಿಟ್ಟು ಪರಾರಿಯಾದವರೂ ಸೇರಿದಂತೆ ಬೇರೆ ದೇಶಗಳಿಗೆ ವಲಸೆ ಹೋದವರ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದೆಯೇ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅವರು ಈ ಮಾಹಿತಿ ನೀಡಿದ್ದಾರೆ.
ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸೇರಿದಂತೆ 38 ಮಂದಿ ಉದ್ದೇಶಿತ ಸುಸ್ತಿದಾರರು ಭಾರತದಿಂದ ಪರಾರಿಯಾಗಿದ್ದಾರೆ ಎಂದರು. ಇವರ ವಿರುದ್ಧ ಕೇಂದ್ರೀಯ ತನಿಖಾ ದಳವು ಮೊಕದ್ದಮೆ ದಾಖಲು ಮಾಡಿತ್ತು. ಈ ಅವಧಿಗಿಂತ ಮುಂಚಿತವಾಗಿ ಸಾಲ ಪಡೆದುಕೊಂಡಿದ್ದ ಅವರು ವಾಪಸ್ ನೀಡಿರಲಿಲ್ಲ. ಮೊಕದ್ದಮೆ ದಾಖಲಾಗುತ್ತಿದ್ದಂತೆಯೇ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಇವರಲ್ಲಿ ಇದಾಗಲೇ 20 ಅಪರಾಧಿಗಳಿಗೆ ರೆಡ್ಕಾರ್ನರ್ ನೋಟಿಸ್ ನೀಡುವಂತೆ ಅರ್ಜಿ ಹಾಕಲಾಗಿದೆ. 14 ಮಂದಿಯ ಹಸ್ತಾಂತರಕ್ಕೆ ಮನವಿ ಸಲ್ಲಿಸಲಾಗಿದೆ. ಹನ್ನೊಂದು ಮಂದಿ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆ 2018ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅವರು ಲಿಖಿತವಾಗಿ ಉತ್ತರಿಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳ ಮಾಹಿತಿ ಪ್ರಕಾರ, 2014ರಿಂದ 2019ರ ಮಧ್ಯೆ ಉದ್ದೇಶಿತ ಸುಸ್ತಿದಾರರಿಂದ 7654 ಕೋಟಿ ರುಪಾಯಿ ವಸೂಲಿ ಮಾಡಲಾಗಿದೆ.