

ಲಂಡನ್: ಫುಟ್ಬಾಲ್ ಆಟದಿಂದ ವಿಶ್ವಖ್ಯಾತಿ ಗಳಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ಮತ್ತೆ ಪ್ರಸಿದ್ಧರಾಗಿದ್ದಾರೆ. ಇದಕ್ಕೆ ಕಾರಣ, ಅವರು ತಮ್ಮ ಭಾವಿ ಪತ್ನಿಗೆ ನೀಡಿರುವ ಉಂಗುರದಿಂದಾಗಿ.
ಇದಾಗಲೇ ಒಬ್ಬಾಕೆಯ ಜತೆ ಲಿವ್ ಇನ್ ಸಂಬಂಧದಲ್ಲಿದ್ದು ಆಕೆಯಿಂದ ದೂರವಾಗಿರುವ ಕ್ರಿಸ್ಟಿಯಾನೊ , ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಇದರಲ್ಲಿ ಒಂದು ಮಗು ಇವರದ್ದಾಗಿದ್ದು, ಉಳಿದ ಮೂರು ಮಕ್ಕಳನ್ನು ಬಾಡಿಗೆ ತಾಯಿಯ (ಸರೋಗಸಿ) ಮೂಲಕ ಪಡೆದುಕೊಂಡಿದ್ದಾರೆ. ಇದೀಗ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರಾಡ್ರಿಗೀಸ್ ಜತೆಗೆ ವಿವಾಹವಾಗಲಿದ್ದಾರೆ.
ನಿನ್ನೆ ಇವರ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಭಾವಿ ಪತ್ನಿಗೆ 615,000 ಪೌಂಡ್ (ಸುಮಾರು 5.84 ಕೋಟಿ ರೂಪಾಯಿ) ಬೆಲೆ ಬಾಳುವ ವಜ್ರದ ಉಂಗುರ ನೀಡಿದ್ದಾರೆ.
ಈ ಮೂಲಕ ನಿಶ್ಚಿತಾರ್ಥಕ್ಕೆ ಅತ್ಯಂತ ಹೆಚ್ಚು ಖರ್ಚು ಮಾಡಿರುವ ಆಟಗಾರರ ಪೈಕಿ ಇವರು ಟಾಪ್ ಸ್ಥಾನವನ್ನು ಗಳಿಸಿದ್ದಾರೆ.
ಈ ಕುರಿತು ಬ್ರಿಟಿಷ್ ಟ್ಯಾಬ್ಲಾಯ್ಡ್, ದಿ ಸನ್ ವರದಿ ಮಾಡಿದೆ. ರೊನಾಲ್ಡೊ ಈ ವಜ್ರದ ಉಂಗುರಕ್ಕಾಗಿ 615,000 ಪೌಂಡ್ ನೀಡಿದ್ದಾರೆ. ಫುಟ್ಬಾಲ್ ಆಟಗಾರರಲ್ಲಿ ನಿಶ್ಚಿತಾರ್ಥದ ಉಂಗುರಗಳಿಗಾಗಿ ಅತಿ ಹೆಚ್ಚು ಖರ್ಚು ಮಾಡುವವರ ಪಟ್ಟಿಯಲ್ಲಿ ರೊನಾಲ್ಡೊ ಅಗ್ರಸ್ಥಾನ ಪಡೆದಿದ್ದಾರೆ. ಇಂಗ್ಲೆಂಡಿನ ಜೋರ್ಡಾನ್ ಪಿಕ್ಫೋರ್ಡ್ ತಮ್ಮ ಪತ್ನಿ ಮೆಗಾನ್ ಡೇವಿಸನ್ಗಾಗಿ 500,000 ಪೌಂಡ್ (ಅಂದಾಜು ರೂ. 4.74 ಕೋಟಿ) ವೆಚ್ಚದ ಉಂಗುರವನ್ನು ಖರೀದಿಸಿದ್ದರು ಎಂದು ವರದಿಯಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಈ ಹಿಂದೆ ರಷ್ಯಾದ ಇರಿನಾ ಶ್ಯಾಕ್ ಅವರ ಜತೆ ಸಂಬಂಧದಲ್ಲಿ ಇದ್ದರು.