

ಪಟನಾ: 23 ವರ್ಷದ ಯುವಕ ತನ್ನ 50 ವರ್ಷದ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಈ ಪಾಪಿ ಮಗನಿಗೆ ಗಾಂಜಾ ಕೊಳ್ಳಲು ಹಣ ಬೇಕಿತ್ತು. ಅಮ್ಮನ ಬಳಿ ಬಂದು 50 ರೂ.ಕೊಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಅದನ್ನು ಕೊಡಲು ನಿರಾಕರಿಸಿದ್ದಾರೆ. ಇದೇ ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಹತ್ಯೆ ಮಾಡಿದ್ದಾನೆ.
ಮೃತ ಮಹಿಳೆಯನ್ನು ಜಾಫ್ರೂನ್ ಬಿವಿ ಎಂದು ಗುರುತಿಸಲಾಗಿದೆ. ಆಕೆಯ ಮಗ, ಆರೋಪಿಯ ಹೆಸರು ನಯೀಮ್ ಖಾನ್.
ಡ್ರಗ್ ಅಡಿಕ್ಟ್ ಆಗಿದ್ದ ನಯೀಮ್ ಖಾನ್ ಹಣಕೊಡುವಂತೆ ಅಮ್ಮನನ್ನು ಪೀಡಿಸುತ್ತಿದ್ದ. ಹಾಗೇ ಶನಿವಾರ ರಾತ್ರಿ 50 ರೂ.ಕೊಡುವಂತೆ ಕೇಳಿದ. ಆದರೆ ತಾಯಿ ಬಿವಿ, ನನ್ನ ಬಳಿ ಹಣವಿಲ್ಲ. ಅಡುಗೆ ಸಾಮಗ್ರಿ ತರಲೂ ಏನೂ ಇಲ್ಲ ಎಂದಿದ್ದಾರೆ. ಅಷ್ಟಕ್ಕೇ ಸಿಟ್ಟಾದ ನಯೀಮ್ ಖಾನ್, ಅಲ್ಲಿಯೇ ಇದ್ದ ಕಬ್ಬಿಣದ ರಾಡ್ನಿಂದ ತನ್ನ ತಾಯಿಗೆ ಭೀಕರವಾಗಿ ಹೊಡೆದಿದ್ದಾನೆ. ಅಷ್ಟೇ ಅಲ್ಲ, ಆಕೆ ಕೂಗಬಾರದು ಎಂದು ಬಾಯಿಗೆ ಬಟ್ಟೆಯನ್ನೂ ತುರುಕಿದ್ದಾನೆ. ಅಷ್ಟೊತ್ತಿಗೆ ಮನೆಗೆ ಬಂದ ಆತನ ತಮ್ಮ ಗುಡ್ಡು, ಅಣ್ಣನಿಂದ ತಾಯಿಯನ್ನು ಬಿಡಿಸಿ, ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಆಕೆ ಬದುಕುಳಿಯಲಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ನಯೀಮ್ಖಾನ್ ಮಾದಕದ್ರವ್ಯ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ. (ಏಜೆನ್ಸೀಸ್)