

ಶಿವಮೊಗ್ಗ: ವಿದ್ಯಾನಗರದ ಐದನೇ ತಿರುವಿನ ಸುಭಾಷ್‌ನಗರದಲ್ಲಿ ಶನಿವಾರ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ಸೋದರ ಮಾವ ಅಳಿಯನನ್ನು ತಳ್ಳಿದ್ದಾನೆ. ಮನೆ ಮುಂದಿನ ಚರಂಡಿಯಲ್ಲಿ ಬಿದ್ದು ಅಳಿಯನ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಭಾಷ್‌ನಗರದ ಜ್ಞಾನೇಶ್ವರ್ (43) ಮೃತ ವ್ಯಕ್ತಿ. ಈತನ ಸೋದರಮಾವ, ಚನ್ನಗಿರಿಯ ನಿವಾಸಿ ನಾಗರಾಜ್ ಎಂಬುವರು ತಳ್ಳಿದ್ದು ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜ್ಞಾನೇಶ್ವರ್ ಪತ್ನಿ ಇಂದುಮತಿ ಅವರ ತಾಯಿ ಮನೆಯಲ್ಲೇ ನೆಲೆಸಿದ್ದರು. ನಾಗರಾಜ್ ಅವರು ಪದೇ ಪದೇ ಬಂದು ಅಕ್ಕನ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಜಗಳ ಮಾಡುತ್ತಿದ್ದ.
ಶನಿವಾರ ತಡರಾತ್ರಿಯೂ ಬಂದಿದ್ದ ನಾಗರಾಜ್ ಏಕಾಏಕಿ ಜ್ಞಾನೇಶ್ವರ್ ಮೇಲೆ ಹಲ್ಲೆ ಮಾಡಿದ್ದಾನೆ. ಆನಂತರ ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆಯೂ ವಾಗ್ವಾದ ನಡೆದಿದೆ. ಈ ವೇಳೆ ನಾಗರಾಜ್ ಜೋರಾಗಿ ದೂಡಿದ್ದರಿಂದ ಜ್ಞಾನೇಶ್ವರ್ ಅವರು ಮನೆ ಎದುರಿನ ಚರಂಡಿಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಅಲ್ಲೇ ಮೃತಪಟ್ಟಿದ್ದಾರೆ. ಜ್ಞಾನೇಶ್ವರ್ ಅವರ ಅತ್ತೆ ಮನೆಯಲ್ಲಿ ಗಲಾಟೆ ಆಗಿದೆ. ಜ್ಞಾನೇಶ್ವರ್ ರಸ್ತೆ ಬದಿ ಮೇಲೆ ಬ್ಯಾಗ್ ರಿಪೇರಿ ಮಾಡಿ ಜೀವನ ನಡೆಸುತ್ತಿದ್ದರು.