

ಬರೆ.
ಅದರಿಂದ ಮೂಡಲಿ ಸಮಾಜಕ್ಕೊಂದು ಬರೆ
ಮೂಡಿದ ಬರೆಯಿಂದ ಸಮಾಜವು ಮುಂಬರೆ
ಬರೆದುದು ವ್ಯರ್ಥವೆಂದಾರಾದರುಂ ಎಂಬರೆ?
ಕವಿ, ಸಾಹಿತಿಗಳು ಪ್ರಪಂಚದ ರಾಯಭಾರಿಗಳು. ಅವರನ್ನು ಹಿಡಿದಿಡಬಲ್ಲ ಏಕೈಕ ಗಡಿ ಎಂದರೆ ನೆಗಡಿ; ಏಕೈಕ ಬಂಧವೆಂದರೆ ಕೃತಿಗಳ ಕಡೆಯಲ್ಲಿ ಕಾಣಬರುವ ಅನುಬಂಧ; ಪ್ರಿಯವಾದ ಗಾಡ್ ಎಂದರೆ ಗುಡ್ಡಗಾಡು; ಪ್ರಿಯವಾದ ಮಾತೆಯೆಂದರೆ ಅಕ್ಷರಮಾತೆ. ಆತ್ಮೀಯರೂ, ಹಾಸ್ಯಾಂಕಣಗಳ ಪ್ರವರ್ತಕರೂ ಆದ ಎಮ್ಮೆಸ್ಸೆನ್ ಈ ವಿಶಿಷ್ಟ ಗುಣಗಳನ್ನು ಮೈಗೂಡಿಸಿಕೊಂಡು ಐದೂವರೆ ದಶಕಗಳಿಂದಲೂ ಕನ್ನಡ ಹಾಸ್ಯಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿರುವ ಹಾಸ್ಯಗಗನದ ಮಿತ್ರ.
ಕನ್ನಡದ ಹಾಸ್ಯಸಾಹಿತ್ಯಪಥದಲ್ಲಿ ಎಮ್ಮೆಸ್ಸೆನ್ರಷ್ಟು ‘ಬಾಳಿಕೆ ಬಂದವರು’ ವಿರಳ. ಪೊ›ಫೆಸರ್ ಅ.ರಾ.ಮಿತ್ರ, ಅ.ರಾ.ಸೇ. ಶ್ರೀನಿವಾಸ ವೈದ್ಯರ ಹೊರತಾಗಿ ಇಷ್ಟು ಸುದೀರ್ಘ ಕಾಲ ವೈನೋದಿಕ ಬರವಣಿಗೆಯಲ್ಲಿ ತೊಡಗಿಕೊಂಡು ಬೇಡಿಕೆಯನ್ನು ಕಾಪಾಡಿಕೊಂಡವರು ಇಲ್ಲ. ಎಮ್ಮೆಸ್ಸೆನ್ ಒಂದು ವಿಧವಾದ ಹಾಸ್ಯಕಾರ್ಖಾನೆ. ‘ಇಪ್ಪತ್ತು ನಿಮಿಷದ ಸ್ಕಿಟ್; ನಲವತ್ತು ಪಂಚ್ಗಳು ಇರಬೇಕು. ಮೂರು ಪಾತ್ರಗಳು; ಒಂದು ಹೆಣ್ಣು, ಎರಡು ಗಂಡು ಎಂದೋ’ ಅಥವಾ ಇನ್ನಾವುದೋ ಪಮ್ಯರ್ುಟೇಷನ್, ಕಾಂಬಿನೇಷನ್ ನೀಡಿಯೋ ‘ಯಾವಾಗ ಕೊಡ್ತೀರಿ ಸಾರ್ ಸ್ಕಿ ›ಪ್ಟು?’ ಎಂದು ಕೇಳಿದರೆ ಎಮ್ಮೆಸ್ಸೆನ್ ‘ಪಕ್ಕದ ಹೋಟೆಲಲ್ಲಿ ಮಸಾಲೆದೋಸೆ ತಿಂದು ಬನ್ನಿ, ರೆಡಿಯಾಗಿರುತ್ತೆ’ ಎಂದರೂ ಅತಿಶಯವೇನಲ್ಲ. ಅಂತಹ ವೇಗದಲ್ಲಿ ಉತ್ತಮ ಹಾಸ್ಯಲೇಖನಗಳನ್ನು ಬರೆಯುವ ಇವರನ್ನು ಕಂಡ ಎಷ್ಟೋ ಬಾರಿ ನಾನು ಹೊಟ್ಟೆಯುರಿ ತಡೆಯಲಾರದೆ ಆಂಟಾಸಿಡ್ ತೆಗೆದುಕೊಂಡಿದ್ದೇನೆ.
ಎಮ್ಮೆಸ್ಸೆನ್ ಬರೆದ ಬರಹಗಳನ್ನು ಆಸ್ವಾದಿಸಲು ನಮಗೆ ಹಸುವಿನ ಬುದ್ಧಿ ಇರಬೇಕು. ಮುಂದಿರಿಸಿದ ಹಾಸ್ಯದ ಮೇವನ್ನು ಮೊದಲಿಗೆ ನಮ್ಮ ಚಿತ್ತಕೋಶಕ್ಕೆ ತುಂಬಿಕೊಂಡು, ನಂತರ ಆಗಾಗ್ಗೆ ಹಸುಗಳು ಮೇವನ್ನು ಮೆಲುಕು ಹಾಕುವ ರೀತಿಯಲ್ಲಿ ಮತ್ತೆ ಮತ್ತೆ ಚಿತ್ತಭಿತ್ತಿಯಿಂದ ಹೆಕ್ಕಿ ಅದರ ರಸವನ್ನು ಆಸ್ವಾದಿಸಬೇಕು. ಇವರು ಬರೆದ ಅನೇಕ ಕೃತಿಗಳನ್ನು ನಾನು ಅನೇಕ ಬಾರಿ ಓದಿದ್ದೇನೆ. ಇವರು ಸಂಭಾಷಣೆ ನೀಡಿದ ಸಾವಿರಾರು ಧಾರಾವಾಹಿ ಕಂತುಗಳನ್ನು ಕುಳಿತು ನೋಡಿದ ಕಾರಣ ನನ್ನ ಮನೆಯ ಮರದ ಸೋಫಾದ ಆ ಭಾಗವು ಸವೆದುಹೋಗಿದೆ. ನನ್ನ ಹದಿಹರೆಯದಲ್ಲಿ ಇವರು ಪೆನ್ನಿಸಿದ ‘ಮಂದಸ್ಮಿತ’ ಧಾರಾವಾಹಿಯಂತೂ ನನ್ನ ನೆನಪಲ್ಲಿ ಇಂದಿಗೂ ಸವಿವರವಾಗಿ ಅಚ್ಚೊತ್ತಿದಂತಿದೆ.
ಹಾಸ್ಯವನ್ನು ಮಂಡಿಸುವಾಗ ವಿಷಯವನ್ನು ಪರಿಚಯಿಸುವುದೂ ಮುಖ್ಯ. ಎಮ್ಮೆಸ್ಸೆನ್ ಈ ವಿಷಯವನ್ನು ನವಿರಾಗಿ ಕೈಗೊಳ್ಳುತ್ತಾರೆ. ರಾಜಕಾರಣಿಗಳು ದೇಶದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಅರ್ಧ ಶತಮಾನವೇ ಕಳೆದಿದೆ. ಇದನ್ನು ಇವರು ‘ದೇಶದ ಬಗ್ಗೆ ಸದಾ ಚಿಂತೆ ಮಾಡುವವರು ರಾಜಕಾರಣಿ ಆಗೋಲ್ಲ. ತಮ್ಮ ದೇಹದ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಹಣ ಮಾಡೋ ಬಗ್ಗೆ ಆಸಕ್ತಿ ಇರಬೇಕು’ ಎನ್ನುತ್ತ ಬಿಹಾರದಲ್ಲಿನ ಮೇವು ಹಗರಣವನ್ನು ಸೂಕ್ಷ್ಮವಾಗಿ ಉಲ್ಲೇಖಿಸಿ ‘‘ತಿನ್ನೋದು ಮುಖ್ಯವಲ್ಲ, ಜೀರ್ಣಿಸಿಕೊಳ್ಳೋದು ಮುಖ್ಯ. ಸಿಕ್ಹಾಕ್ಕೊಳ್ಳೋದು ಮುಖ್ಯವಲ್ಲ, ನುಣುಚಿಕೊಳ್ಳೋದು ಮುಖ್ಯ; ಅಧಿಕಾರವನ್ನು ವೈಯಕ್ತಿಕವಾಗಿ ಕಳೆದುಕೊಂಡರೂ ‘ದಾಂಪತ್ಯಿಕವಾಗಿ’ ಉಳಿಸಿಕೊಳ್ಳುವುದು ಮುಖ್ಯ’ ಎಂಬ ಪಾಠಗಳನ್ನು ಪರೋಕ್ಷವಾಗಿ ಸೂಚಿಸುತ್ತಾರೆ. ಮೇಯಲೆಂದೇ ಇರುವವರನ್ನು ಮೇಯರ್ ಎಂದೂ, ಅದಕ್ಕೆಂದೇ ಇರುವ ಭವನವನ್ನು ಮೇಯೋ ಹಾಲ್ ಎಂದೂ ಕರೆಯಬಹುದಲ್ಲವೆ!
ಕೈ ಹಿಡಿದವಳು ಜುಟ್ಟು ಹಿಡಿದಾಗ ಏನು ಮಾಡಬೇಕು? ಅವಳನ್ನು ಗೆಲ್ಲುವುದು ಹೇಗೆ?
-ಹೆಂಡತಿಯನ್ನು ಗೆಲ್ಲೋಕೆ ಇರೋದು ಒಂದೇ ವಿಧ. ಅವಳಿಗೆ ಸೋತುಬಿಡಿ.
ಶಾಲು, ಗಂಡ ಅಂದರೆ ದೇವರು ಗೊತ್ತಾ? ಪತಿದೇವರು.
-ಗೊತ್ತು, ಅದಕ್ಕೇ ಆಗಾಗ ಅವರ ಮುಖಕ್ಕೆ ಮಂಗಳಾರತಿ ಮಾಡ್ತಿರ್ತೀನಿ.
ಗಾದೆಗಳನ್ನು ಬಳಸಿಯೋ, ಸೃಷ್ಟಿಸಿಯೋ ಹಾಸ್ಯವನ್ನು ಉತ್ಪಾದಿಸುವ ಕಲೆ ನಾ.ಕಸ್ತೂರಿಯವರಿಗೆ ಸಿದ್ಧಿಸಿದಂತೆಯೇ ಎಮ್ಮೆಸ್ಸೆನ್ಗೂ ಸಿದ್ಧಿಸಿದೆ. ಇದೋ ಇವರ ಹೊಸ ಗಾದೆಗಳ ಸ್ಯಾಂಪಲ್:
ಸಿಡಿಲು ಎಲ್ಲ ಮರಕ್ಕೂ ಬಡಿಯೊಲ್ಲ. ಸೈಟ್ ಅಲಾಟ್ಮೆಂಟ್ ಲಕ್ಕು ಎಲ್ಲರ್ಗೂ ಹೊಡೆಯೊಲ್ಲ.
ಟ್ಯಾಕ್ಸ್ ಕಟ್ಟೋ ಕುರಿ ಕೋಡಂಗಿ, ಗಿಡ ತಿನ್ನೋ ಮೇಕೆ ಈರಭದ್ರ!
ಲಂಚಕೋರ ಅಧಿಕಾರಿಗಳು, ವೈದ್ಯರ ಭಂಡತನವನ್ನು ಇವರು ಉಲ್ಲೇಖಿಸಿರುವ ಪರಿ ನೋಡಿ:
ನೀನು ಧೈರ್ಯವಾಗಿರು ಮೋಹನ. ಇದು ಬೀದಿ ನಾಯಿಗಳ ಊಚಞಜ್ಝಿಢ ಟ್ಝಚ್ಞ್ಞ್ಞಗೆ ಮೀಸಲಿಟ್ಟ ಹಣ. ತಮಗೆ ಕೊಯ್ಯಲಿಲ್ಲ, ಸಂತಾನಹರಣ ಚಿಕಿತ್ಸೆ ಮಾಡಲಿಲ್ಲ ಅಂತ ಯಾವ ನಾಯೀನೂ ಬಂದು ಕಂಪ್ಲೇಂಟ್ ಮಾಡೊಲ್ಲ.
ಛೇ, ನಾನು ಹೇಳಿದಷ್ಟು ಮಾಡ್ರೀ. ನಾಳೆ ಬೆಳಗ್ಗೆ ಬಂದು ನೋಡ್ತೀನಿ. ಅಷ್ಟರಲ್ಲಿ ಹೋಗೇ ಬಿಟ್ರೆ ತಿಳಿಸಿ, ವೈಕುಂಠಕ್ಕೆ ಬರ್ತೀನಿ.
ಎಮ್ಮೆಸ್ಸೆನ್ ಪದದ ಪದರಗಳಲ್ಲಿ ಅಡಗಿರುವ ಅರ್ಥ, ಅನರ್ಥ, ಅಪಾರ್ಥ, ಅಪಾರಾರ್ಥ, ಅನೇಕಾರ್ಥ, ಅನ್ಯಾರ್ಥಗಳನ್ನು ಹೆಕ್ಕುವಲ್ಲಿ ಇವರು ನಿಸ್ಸೀಮರು. ‘ಪೋಟೋ ಸಿಂಥೆಸಿಸ್’ ಎಂದರೆ ‘ಫೋಟೋಗ್ರಾಫರ್ ಅಜ್ಜಿಯ ಫೋಟೋಗೆ ಸಿಂಥೆಟಿಕ್ ಗಾಜು ಹಾಕಿ ಫ್ರೇಂ ಹಾಕಿಕೊಡುವುದು’ ಎನ್ನುತ್ತಾರೆ. ‘ತೀರ’ ಎಂಬ ಪದವನ್ನೇ ಹಿಡಿದು ‘ಯುವಕರು, ರಾಜಕಾರಣಿಗಳು ಗೋವಾಗೆ ಪಿಕ್ನಿಕ್ ಏಕೆ ಹೋಗುತ್ತಾರೆ?’ ಎಂದು ಕೇಳಿದಾಗ ‘ಅವರದು ತೀರದ ಬಯಕೆ’ ಎಂದುತ್ತರಿಸಿದ್ದರು.
ಎಮ್ಮೆಸ್ಸೆನ್ ಇದ್ದಲ್ಲಿ ನಗೆ ಗ್ಯಾರಂಟಿ. ಈ ಗ್ಯಾರಂಟಿ ಸರ್ಕಾರದ ಗ್ಯಾರಂಟಿಗಳಂತೆ ಬೊಕ್ಕಸವನ್ನು ಬರಿದಾಗಿಸುವುದಿಲ್ಲ. ಬದಲಿಗೆ ಮನಸ್ಸಿನ ಖಜಾನೆಯನ್ನು ಶ್ರೀಮಂತಗೊಳಿಸುತ್ತದೆ. ಇವರ ಅನೇಕ ವಿಡಂಬನೆಗಳು ಖಡ್ಗಮೃಗಗಳ ಮೂಗನ್ನೂ ಚುಚ್ಚುವಷ್ಟು ಮೊನಚಾಗಿವೆ. ದುರದೃಷ್ಟವಶಾತ್ ನಮ್ಮ ರಾಜಕಾರಣಿಗಳ ಚರ್ಮ ಅವುಗಳ ಮೂಗಿಗಿಂತ ದಪ್ಪ!
ಎಮ್ಮೆಸ್ಸೆನ್ ನಾಡು ಕಂಡ ಅದ್ವಿತೀಯ ಹಾಸ್ಯಪಟು. ಎಪ್ಪತ್ತೈದರ ಹರೆಯದಲ್ಲಿ ಇಪ್ಪತ್ತೈದರ ಲವಲವಿಕೆಯಿಂದ ‘ಹೇಯ್! ನಾನ್ಬರ್ತೀನೀ! ಸಂಜೆ ಐದಕ್ಕಲ್ವಾ? ನಾಲ್ಕೂನಲವತ್ತಕ್ಕೆ ಅಲ್ಲಿರ್ತೀನಿ. ಬೇಕಾದ್ರೆ ನೀವು ಆ ಟೈಮಿಗೆ ನಿಮ್ಮ ಗಡಿಯಾರ ಸೆಟ್ ಮಾಡ್ಕೋಬಹುದು’ ಎನ್ನುವ ಸಮಯಪ್ರಜ್ಞೆಯುಳ್ಳ ಶಿಸ್ತಿನ, ನೆಚ್ಚಿನ, ‘ಕಿರಿಯರೊಳ್ ಕಿರಿಯ’ನಾಗಿ ಬೆರೆವ, ಸಾವಿರಾರು ಹಾಸ್ಯೋತ್ಸವಗಳ ಸೂತ್ರ ಹಿಡಿದ ಈ ಹಿರಿಯರು ಹೀಗೆಯೇ ಬರೆಯುತ್ತ ಹಾಸ್ಯಕ್ಷೇತ್ರವನ್ನು ಮತ್ತಷ್ಟು ಮಗದಷ್ಟು ಶ್ರೀಮಂತಗೊಳಿಸಲೆಂದು ಹಾರೈಸುತ್ತೇನೆ.
(ಲೇಖಕರು ಸಾಹಿತಿ)
ಹೆಸರು ಮಾತ್ರ ನರಸಿಂಹಮೂರ್ತಿ
ಇವರೇನೂ ಉಗ್ರನಲ್ಲ
ನಕ್ಸಲೈಟಲ್ಲ ಎಲ್ಲರ ನಗಿಸೊ ಲೈಟ್
ಪ್ರಖ್ಯಾತ ಹರಟೆಮಲ್ಲ
ಮೂರ್ತಿಯ ಪೆನ್ನು ಸೃಷ್ಟಿಸಿದ ಪಾತ್ರ
ವಿಶ್ವ ಮತ್ತು ವಿಶಾಲು
ತಂದುಕೊಟ್ಟಿದೆ ಅವರಿಗೆ ಕೀರ್ತಿ
ಸನ್ಮಾನ, ಹಾರ, ಶಾಲು
ಎಂಎಸ್ಎನ್ ಆ ವಿಶ್ವನ ಹಾಗೆ
ಚತುರಮತಿ, ಕಿಲಾಡಿ
ಅವರ ಪತ್ನಿ ವಿಶಾಲುವಂತೆ ಅಲ್ಲ
ತುಂಬಾ ಒಳ್ಳೆಯ ಲೇಡಿ
ಐವತ್ತಕ್ಕೂ ಹೆಚ್ಚು ಕೃತಿಗಳ ಲೇಖಕ
ಗಳಿಸಿದ್ದಾರೆ ಪ್ರಶಸ್ತಿ, ಮನ್ನಣೆ
ಲೇಖನಗಳ ಜತೆ ನಾಟಕ, ಕಾದಂಬರಿ
ಸಿನಿಮಾಗಳಿಗೂ ಸಂಭಾಷಣೆ
ದಾಖಲೆ ಸಂಖ್ಯೆಯಲ್ಲಿ ಧಾರಾವಾಹಿಗೆ
ಡೈಲಾಗ್ ಬರೆದ ಸರದಾರ
ಮಾತಿನ ಚಕಮಕಿ, ಹಾಸ್ಯದ ಪಂಚು
ಎಲ್ಲರೂ ಹೀಗೆ ಬರೆದಾರ?
ಎಂಎಸ್ಎನ್ ಮತ್ತು ನಾನು ಇಬ್ಬರೂ
ಕರುಗಳು ಸಾರ್ ಕರುಗಳು
ಏಕೆಂದರೆ ವೃತ್ತಿ ಜೀವನದಲ್ಲಿ ನಾವು
ಆಗಿದ್ದೆವು ಬ್ಯಾಂಕರುಗಳು!
ಇಂದು ಎಪ್ಪತೆôದರ ಸಂಭ್ರಮದಲ್ಲಿ
ಇದ್ದಾರೆ ಹಾಸ್ಯ ಕೇಸರಿ
ಜನ್ಮ ದಿನದಂದು ಎಂ ಎಸ್ ಎನ್ಗೆ
ನೀವೂ ಶುಭ ಹರಸಿರಿ
| ಡುಂಡಿರಾಜ್
ಇಂದು ಅಭಿನಂದನಾ ಸಮಾರಂಭ: ಎಂಎಸ್ಎನ್ ಅಭಿನಂದನೆ ಕಾರ್ಯಕ್ರಮ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಅ. 20 ಬೆಳಗ್ಗೆ 9.30ಕ್ಕೆ ನಡೆಯಲಿದೆ. ಜಾಗೃತಿ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ‘ನಾ ಕಂಡ ಎಂಎಸ್ಎನ್’ ಮತ್ತು ಎಂಎಸ್ಎನ್ ರಚಿಸಿರುವ ಹಾಸ್ಯ ಕಾದಂಬರಿ ‘ಪುತ್ರಕಾಮ್ಯ’ ಪುಸ್ತಕಗಳು ಲೋಕಾರ್ಪಣೆಯಾಗಲಿವೆ. ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಸಾಹಿತಿಗಳಾದ ಬಾಬು ಕೃಷ್ಣಮೂರ್ತಿ, ನಾ. ಸೋಮೇಶ್ವರ, ನಟ ಸಿಹಿಕಹಿ ಚಂದ್ರು, ಎನ್. ರಾಮನಾಥ್, ಮಿಮಿಕ್ರಿ ಗೋಪಿ, ಉಮೇಶ್ ಗೌಡ ಮುಂತಾದವರು ಭಾಗವಹಿಸಲಿದ್ದಾರೆ.