

| ಸುಬ್ರಹ್ಮಣ್ಯ ಸೋಮಯಾಜಿ
ಚೇತೋ ಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |
ಭಜ ಭಜ ಲಕ್ಷ್ಮೀನರಸಿಂಹಾನಘ ಪದಸರಸಿಜ ಮಕರಂದಂ ||
‘ಎಲೈ ಮನಸ್ಸೆಂಬ ದುಂಬಿಯೇ, ಸಂಸಾರವೆಂಬ ಮರುಭೂಮಿಯಲ್ಲಿ ಸುಮ್ಮನೇ ನೀರಸವಾಗಿ ಏಕೆ ಸುತ್ತುತ್ತೀಯೇ? ಅದರಿಂದ ಏನೂ ಪ್ರಯೋಜನವಿರದು. ಅದರ ಬದಲು ಪವಿತ್ರವಾದ ಲಕ್ಷ್ಮೀನರಸಿಂಹನ ಪದಕಮಲಗಳನ್ನು ಬಿಡದೇ ಸೇವಿಸುತ್ತಿದ್ದರೆ ಅದೇ ನಿತ್ಯಸುಖದ ಅಮೃತಪಾನ. ಆ ಪದಕಮಲದ ಮಕರಂದವು ಎಷ್ಟು ಸೇವಿಸಿದರೂ ಮುಗಿಯದು’. ಇದು ಶಂಕರಭಗವತ್ಪಾದರ ಮೇಲಿನ ಸ್ತೋತ್ರದ ಅಭಿಪ್ರಾಯ.
ವಾಸ್ತವವಾಗಿ ನಮ್ಮ ಮನಸ್ಸುಗಳಿಗೆ ನಾವೇ ಹೇಳಬೇಕಾದ ಮಾತಿದು. ನಮ್ಮ ಮನಸ್ಸು ಹುಟ್ಟಿದಾರಭ್ಯಸುಖವನ್ನು ಅರಸುತ್ತ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತಿದೆ. ಒಮ್ಮೆ ಒಳ್ಳೆಯ ತಿಂಡಿ ತಿನಿಸುಗಳು ಸುಖವೆನಿಸುವುವು. ಅದನ್ನು ಸವಿದ ಮೇಲೆ ಅದಲ್ಲ, ನಮಗೆ ಇಷ್ಟವಾದ ಉಡುಪುಗಳನ್ನು ಧರಿಸುವುದು ಸುಖ ಎನಿಸುವುದು. ನಂತರ ಅದೂ ಬೇಸರ ತರಿಸುವುದು. ಬಾಲ್ಯದಲ್ಲಿ ಸುಖವೆಂದು ಬಯಸುವ ಆಟಿಕೆಗಳು ಯೌವನದಲ್ಲಿ ಬೇಡವಾಗುತ್ತವೆ, ಬಾಲಿಶ ಎನಿಸುತ್ತವೆ. ಅಂದು ಅವೆಲ್ಲ ಬಹಳ ಸುಖವನ್ನು ಕೊಡುವ ಸಾಮಗ್ರಿಗಳೆಂದು ಹಿರಿಯರೊಡನೆ ಹಠ ಮಾಡಿ ತೆಗೆದುಕೊಂಡೆವಲ್ಲ. ಹೌದು. ಆದರೆ ಬಾಲ್ಯದಲ್ಲಿ ಸುಖ ಕೊಟ್ಟ ವಸ್ತುಗಳು, ವಿಷಯಗಳು ಯೌವನದಲ್ಲಿ ಕೊಡದು. ಯೌವನದಲ್ಲಿ ಬೇರೆ ಆಸೆಗಳು. ಸುಂದರವಾಗಿ ಕಾಣುವ ಆಸೆ, ಹುಡುಗ ಹುಡುಗಿಯರ ಪರಸ್ಪರ ಆಕರ್ಷಣೆ. ನಂತರ ವೃದ್ಧಾಪ್ಯದಲ್ಲಿ ಇವು ಯಾವುದರಲ್ಲೂ ಸುಖವಿಲ್ಲ ಇನ್ನೇನೋ ಬೇಕು ಎನಿಸುತ್ತೆ. ಟಿವಿ ನೋಡುವುದು, ಸಿನಿಮಾ ನೋಡುವುದು, ಕ್ರಿಕೆಟ್ ನೋಡುವುದು, ಆಟ ಆಡುವುದು, ಕಾರ್ ಕೊಳ್ಳುವುದು ಹೀಗೆ ಸುಖದ ಅರಸುವಿಕೆ ಕೊನೆ ಮೊದಲಿಲ್ಲದೇ ಸಾಗುತ್ತದೆ. ಇಷ್ಟೆಲ್ಲ ಆದಮೇಲೆ ಸುಖ ಸಿಕ್ಕಿದೆಯೇ ಎಂದರೆ ನಿರಾಸೆಯ ನಿಟ್ಟುಸಿರೇ ಹೆಚ್ಚು ಜನರಲ್ಲಿ.
ನಮ್ಮ ಮಹರ್ಷಿಗಳೂ ಜೀವನದಲ್ಲಿ ಸುಖಕ್ಕಾಗಿ ಹುಡುಕಿದವರೇ. ಆದರೆ ಸುಖವನ್ನು ಹುಡುಕುತ್ತ ಹೊರ ಜೀವನದಲ್ಲೇ ನಿಲ್ಲಲಿಲ್ಲ. ಈ ಜೀವನದ ವಿಕಾಸ ಎಲ್ಲಿಂದ ಆರಂಭ, ಎಲ್ಲಿ ಇದರ ನೆಲೆ ಎಂಬುದನ್ನೇ ಹುಡುಕಾಟದ ಪ್ರಧಾನ ವಿಷಯವಾಗಿ ತೆಗೆದುಕೊಂಡರು. ಈ ಸುಖವೆಂಬುದರ ಮೂಲವೇನು? ಇಂದ್ರಿಯಗಳಿಗೂ ಸಹ ಸುಖ ಎಲ್ಲಿಂದ ಹರಿಯುತ್ತಿದೆ ಎಂಬುದರ ಬಗೆಗೆ ಹುಡುಕು ನೋಟ ಹರಿಸಿದರು. ಅದು ಬುದ್ಧಿಯ ಮುಂದೆ ಹರಡಿದ ವಿಷಯ, ವಸ್ತುಗಳಲ್ಲಿನ ಹುಡುಕಾಟವಾಗಿರಲಿಲ್ಲ. ಬುದ್ಧಿಯ ಹಿಂಬದಿಯಲ್ಲಿ ಚೈತನ್ಯರೂಪವಾಗಿ ಯಾವ ಪರಂಜ್ಯೋತಿಯು ಬೆಳಗುತ್ತಿದೆಯೋ ಅದರೆಡೆಗೆ ಅವರ ಅಂತರಂಗದ ಪ್ರಯಾಣ ಸಾಗಿತ್ತು. ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ-‘ಜೀವನದ ವಿಕಾಸವನ್ನು ಗಮನಿಸಿದಾಗ ಉದ್ದಕ್ಕೂ ಜ್ಯೋತಿಯ ಆಶಯವನ್ನೇ ವ್ಯಾಖ್ಯಾನ ಮಾಡಿಕೊಂಡು ಜೀವನ ಬೆಳೆದುಬರುತ್ತಿದೆ. ಆದ್ದರಿಂದಲೇ ಜೀವದ ವಿಕಾಸದ ಹಿಂದಿರುವ ಪ್ರಕಾಶವನ್ನೂ ಅರಿಯಲು ಸಾಧ್ಯವಾಗುವುದು’.
ಈ ದೇಶದ ಜ್ಞಾನಿಗಳು ನಿರಂತರ ತಪಸ್ಸಿನಿಂದ ಮನಸ್ಸನ್ನು ಹೊರ ಇಂದ್ರಿಯಗಳಿಂದ ಹಿಂದೆ ಸೆಳೆದರು. ಮೂಲದಲ್ಲಿ ಎಲ್ಲದಕ್ಕೂ ತನ್ನ ಶಕ್ತಿಯನ್ನು ಹರಿಸುತ್ತಿರುವ, ತಾನೇ ತಾನಾಗಿ ಬೆಳಗುತ್ತಿರುವ ಆ ಪರಾತ್ಪರ ವಸ್ತುವಿನಲ್ಲಿ ಮನಸ್ಸನ್ನು ನೆಲೆ ನಿಲ್ಲಿಸಿದರು.
(ಲೇಖಕರು ಸಂಸ್ಕೃತಿ ಚಿಂತಕರು)
(ಪ್ರತಿಕ್ರಿಯಿಸಿ: manollasavv@gmail.com)