ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಸುರಿಯುತ್ತಿರುವ ಜಡಿ ಮಳೆಯಲ್ಲಿ ಹದಗೆಟ್ಟ ರಸ್ತೆಗಳ ದುಸ್ಥಿತಿಯ ದರ್ಶನವಾಗುತ್ತಿದೆ.
ಹೌದು..ಗ್ರಾಮೀಣ ಪ್ರದೇಶಗಳಲ್ಲಿನ ಮಣ್ಣಿನ ರಸ್ತೆಗಳನ್ನು ಮೀರಿಸುವಂತೆ ನಗರ, ಪಟ್ಟಣ ಪ್ರದೇಶಗಳಲ್ಲಿನ ಡಾಂಬರ ಕಿತ್ತು ಗುಂಡಿಮಯ ರಸ್ತೆಗಳು ಸುಗಮವಾಗಿ ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಜನರು ಅಧೋಗತಿಯ ಪರಿಸ್ಥಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಸಮಸ್ಯೆ: ಜಿಲ್ಲಾ ಕೇಂದ್ರದಲ್ಲಿನ ಬಹುತೇಕ ರಸ್ತೆಗಳು ಡಾಂಬರು ಕಂಡು ಹಲವು ವರ್ಷಗಳಾಗಿವೆ. ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಬೇಸಿಗೆಯಲ್ಲಿ ದೂಳಿನ ಕಿರಿಕಿರಿ, ಮಳೆಗಾಲದಲ್ಲಿ ಜಲಾವೃತಗೊಂಡಿರುತ್ತವೆ. ಇದರ ಜತೆಗೆ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ತ್ಯಾಜ್ಯ, ಮಣ್ಣು ರಸ್ತೆಗಳಿಗೆ ಹರಡಿಕೊಂಡು ಕೆಸರಿನ ಪ್ರದೇಶಗಳಾಗಿ ಪರಿವರ್ತನೆಯಾಗಲಿದ್ದು, ಭಯದಲ್ಲಿ ಓಡಾಡುವಂತಾಗಿದೆ. ಇದಕ್ಕೆ ಎಂ.ಜಿ.ರಸ್ತೆಯು ಒಂದು ನಿರ್ದಶನ. ಎಪಿಎಂಸಿ ಮಾರುಕಟ್ಟೆ, ಜಿಲ್ಲಾಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಕಚೇರಿ ಸೇರಿ ವಿವಿಧೆಡೆ ಕೆಲಸ ಕಾರ್ಯಗಳಿಗೆ ಜನರು, ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಸಮಚಾರ ಸಿಕ್ಕು, ಗುಂಡಿ ತಪ್ಪಿಸಲು ಹೋಗುವ ಭರದಲ್ಲಿ ಅಪಘಾತ, ಜಲಾವೃತ ಪ್ರರ್ದೆಶದಿಂದ ನೀರಿನ ಎರಚಾಟ ಸೇರಿ ವಿವಿಧ ಸಮಸ್ಯೆ ಸಾಮಾನ್ಯವಾಗಿವೆ.
ಕಾಮಗಾರಿ ನೆಪದಲ್ಲಿ ಹಾಳು
ಇತ್ತೀಚೆಗೆ ಚಿಕ್ಕಬಳ್ಳಾಪುರ ಹಾಗೂ ಮುಸ್ಟೂರು ಮಾರ್ಗದ ರಸ್ತೆಯ ಸಮಸ್ಯೆ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಸ್ಥಳಿಯ ಜನರು ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿದ್ದರು. ಕಾಮಗಾರಿ ನೆಪದಲ್ಲಿ ಹಳೇ ರಸ್ತೆ ಅಗೆದು ಬಳಿಕ ಡಾಂಬರು ಹಾಕಲು ತಿಂಗಳಾನುಗಟ್ಟಲೇ ಎದುರು ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ದೊಡ್ಡ ಗುಂಡಿಗಳ ನಡುವೆ ವಾಹನಗಳ ಸಂಚಾರ, ಜನರ ಪರದಾಟದ ವಿಡಿಯೋಗಳು ವೈರಲ್ ಆಗಿದ್ದವು.
ಹಾಳಾಗುತ್ತಿರುವ ಹೊಸ ರೋಡ್ಅಭಿವೃದ್ಧಿಯಿಲ್ಲದೆ ಹಲವು ರಸ್ತೆಗಳು ದುಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ಹೊಸ ಡಾಂಬರು, ಕಾಂಕ್ರೀಟ್ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ. ಇದಕ್ಕೆ ಮಂಡಿಕಲ್ನಲ್ಲಿ ಅವೈಜ್ಞಾನಿಕ ಕಾಮಗಾರಿಗಳೇ ಉದಾಹರಣೆ. ಗ್ರಾಮದಲ್ಲಿ ಜಲ ಜೀವನ್ ಮೀಷನ್ ಯೋಜನೆಯಡಿ ಪೈಪ್ಲೈನ್ ಅಳವಡಿಸುವ ಕೆಲಸ ನಡೆಯುತ್ತಿದೆ. ಹಲವು ದಿನಗಳ ಹಿಂದೆ ಗುತ್ತಿಗೆದಾರರು ಕಾಂಕ್ರೀಟ್ ರಸ್ತೆ ಅಗೆದು ಪೈಪ್ ಹಾಕಿ ಸರಿಪಡಿಸಿಲ್ಲ. ಇದರಿಂದಜನರು ಓಡಾಡಲು ತೊಂದರೆಯಾಗುತ್ತಿದೆ.
ಪುಟ್ಪಾತ್ ಅಯೋಮಯ
ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಬಜಾರ್ ರಸ್ತೆ, ಸಂತೆ ಮೈದಾನ ರಸ್ತೆ, ಹಳೇ ಬಸ್ ನಿಲ್ದಾಣ, ಸಾಧುಮಠ ರಸ್ತೆ ಸೇರಿ ಹಲವೆಡೆ ಪಾದಚಾರಿಗಳು ರಸ್ತೆಗ ಬಂದು ಓಡಾಡುವಂತಾಗಿದ್ದು, ಹಲವೆಡೆ ಜಾಗ ಒತ್ತುವರಿಯಾಗಿದೆ. ಪಾದಚಾರಿ ಮಾರ್ಗದ ಸ್ಥಳಗಳಲ್ಲಿ ಕೆಸರು, ನೀರು, ತ್ಯಾಜ್ಯ ತುಂಬಿರುತ್ತದೆ. ಅಲ್ಲಲ್ಲಿ ಒಳಚರಂಡಿಯ ಕಲ್ಲು ಹಾಸುಗಳು ಕಿತ್ತು ಬಂದಿದ್ದು ಓಡಾಡುವಾಗ ಎಲ್ಲಿ ಒಳಗೆ ಬೀಳುತ್ತವೆಯೇ? ಎಂಬ ಆತಂಕ ಕಾಡುತ್ತದೆ.
ಮಂಡಿಕಲ್ ಗ್ರಾಮದಲ್ಲಿ ಬಹುತೇಕ ರಸ್ತೆಗಳನ್ನು ಹಲವು ದಿನಗಳ ಹಿಂದೆಯೇ ಅಗೆದು ಹಾಗೆಯೇ ಬಿಡಲಾಗಿದೆ. ಸುಗಮ ಓಡಾಟಕ್ಕೆ ಮತ್ತೆ ಸರಿಪಡಿಸಬೇಕೆಂಬ ಪ್ರಜ್ಞಾವಂತಿಕೆ ಪ್ರದರ್ಶಿಸುತ್ತಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
| ಎಂ.ಎನ್.ರಾಮೂರ್ತಿ ಗ್ರಾಮಸ್ಥ ಮಂಡಿಕಲ್ಲು