* ಕುಣಿಗಲ್ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ
* ಸುಗಮ ಸಂಚಾರಕ್ಕೆ ತೊಡಕು
ಚನ್ನಪಟ್ಟಣ
ತಾಲೂಕಿನ ಬೈರಾಪಟ್ಟಣ ಗ್ರಾಮದ ಕೆವಿಜಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತಿರುವುದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.
ಬೈರಾಪಟ್ಟಣದಿಂದ ದೇವರಹಳ್ಳಿಗೆ ತೆರಳುವ ಈ ರಸ್ತೆಯಲ್ಲಿ ಮಳೆ ಬಂದರೆ ಇದು ರಸ್ತೆಯೋ ಅಥವಾ ಕೆರೆಯೋ ಎಂಬ ಅನುಮಾನ ಮೂಡುವಷ್ಟು ನೀರು ಸಂಗ್ರಹವಾಗುವ ಕಾರಣ ಬೈರಾಪಟ್ಟಣ ಸೇರಿ ಈ ಮಾರ್ಗದ ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆಯ ಎರಡೂ ಭಾಗದಲ್ಲಿರುವ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದಿರುವ ಕಾರಣ ಚರಂಡಿ ಸಂಪೂರ್ಣ ಮುಚ್ಚಿದೆ. ಕೆಲವರು ಚರಂಡಿ ಮುಚ್ಚಿ ರಸ್ತೆ ಮಾಡಿಕೊಂಡಿದ್ದಾರೆ. ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ನೀರು ರಸ್ತೆಯಲ್ಲಿ ಶೇಖರಣೆಯಾಗಿ ಹೊಂಡದಂತಾಗುತ್ತದೆ. ಹೀಗಾಗಿ ಸವಾರರು ಸೇರಿ ಪಾದಚಾರಿಗಳು ಹಾಗೂ ಶಾಲಾ&ಮಕ್ಕಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಈ ರಸ್ತೆಯೂ ಕುಣಿಗಲ್ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಕಾರಣ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಮಳೆ ಬಂದಾಗ ಇಡೀ ರಸ್ತೆ ನೀರಿನಲ್ಲಿ ಮುಳುಗಡೆಯಾಗುತ್ತಿದೆ. ಸಂಬಂಧಿಸಿದವರು ಈ ಸಮಸ್ಯೆಯನ್ನು ಪರಿಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಹರಿದಾಸ್, ನಿವೃತ್ತ ಶಿಕರು
ಬೈರಾಪಟ್ಟಣ ಗ್ರಾಮದ ಕೆವಿಜಿ ಶಾಲಾ ಮುಂಭಾಗ ಮಳೆಬಂದಾಗ ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಚರಂಡಿ ತುಂಬಿಕೊಂಡಿರುವುದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡುತ್ತೇವೆ.
> ಶಶಿಕಿರಣ್, ಮಳೂರು ಗ್ರಾಪಂ ಪಿಡಿಒ