

ಅತ್ಯಾಚಾರಿಯೊಬ್ಬ ಮಾಡಿದ ವಿಕೃತ ಕೆಲಸದಿಂದಾಗಿ ಆತನ ತಾಯಿ ಅನುಭವಿಸುವ ಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಡುವ ನಾಟಕ ‘ಕುದಿ ಮೌನ’. ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಈಚೆಗೆ ನಡೆದ ಈ ನಾಟಕ ‘ಏಷ್ಯಾ ಬುಕ್ ಆಫ್
ರೆಕಾರ್ಡ್’ನಲ್ಲಿ ದಾಖಲಾಗಿದೆ. ಸಾಮಾಜಿಕ ವ್ಯವಸ್ಥೆಯ ಹಲವು ದೋಷಗಳೇ ಅತ್ಯಾಚಾರವೆಂಬ ಪಿಡುಗಿಗೆ ಮೂಲ ಕಾರಣವಿರಬಹುದೇ ಎಂಬ ಚಿಕಿತ್ಸಕ ದೃಷ್ಟಿಯನ್ನು ಜಾಗೃತಗೊಳಿಸುವ ಈ ನಾಟಕದ ಮೇಲೊಂದು ನೋಟ...
ಇವಳೇ ನೋಡಿ ಆ ಅತ್ಯಾಚಾರಿ ಶಿವುನ ತಾಯಿ, ಅದೇನಂತ ಮಗನ ಹೆತ್ತಿದ್ಯೆ ನೀನು? ಥೂ ನಿನ್ ಜನ್ಮಕ್ಕೆ...
ಮಗ ಒಂದು ಹೆಣ್ಣಿನ ಬಾಳು ಹಾಳು ಮಾಡಿದ್ರೂ ಇನ್ನೂ ಬದುಕಿದ್ಯಲ್ಲೇ... ಎಲ್ಲಾದ್ರೂ ಹೋಗಿ ಸಾಯ್ಬಾರ್ದಾ...
ಅತ್ಯಾಚಾರಿಯ ತಾಯಿ ಇವಳು, ಕಲ್ಲಿನಿಂದ ಹೊಡೆದು ಸಾಯ್ಸ್ರೊ... ಇವಳಿಗೆ ಎಲ್ಲೂ... ಏನೂ ಕೊಡಬೇಡಿ, ಹಾಗೆ ನರಳಿ ನರಳಿ ಸಾಯ್ಲಿ...
ಈ ಮುಂಡೆಗೆ ಇಂಥ ಮಗ ಅದ್ಯಾವ್ನಿಗೆ ಹುಟ್ಟಿದ್ನೋ... ಅದಕ್ಕೇ ಹೀಗಾದ... ಇವ್ಳು ನಮ್ಮೂರಿಗೇ ಪೀಡೆ, ತೊಲಗಿಸಿ ಇವಳನ್ನ...
ನಿಮ್ಮ ಮಗ ಅತ್ಯಾಚಾರ ಮಾಡಿದ್ನಲ್ಲ... ನಿಮಗೆ ಏನ್ ಅನ್ನಿಸ್ತಾ ಇದೆ...? ಅವನ್ಯಾಕೆ ಹಾಗೆ ಮಾಡಿದ? ನಿಮ್ಮ ಮಗ ಹೀಗೆ ಅಂತ ಮೊದ್ಲೇ ಗೊತ್ತಿತ್ತಾ? ನೀವು ಅವನನ್ನ ಹೀಗೆ ಸಾಕಿದ್ದಾ..? ಹಿಂದೆನೂ ಹೀಗೇ ಮಾಡಿದ್ನಾ...?
ಅತ್ತ... ಇತ್ತ... ಸುತ್ತ... ಎತ್ತೆತ್ತಲೂ ಪ್ರಶ್ನೆಗಳು, ಟೀಕೆಗಳು, ಛೀಮಾರಿಗಳು... ಹೊರಗೆ ಹೆಜ್ಜೆ ಇಟ್ಟರೆ ಅಕ್ಕಪಕ್ಕದವರ ಚುಚ್ಚು ಮಾತುಗಳು, ಮನೆಯೊಳಗೆ ಇದ್ದರೆ ಮನೆ ಬಾಗಿಲು ತಟ್ಟಿ ಮಾಧ್ಯಮಗಳ ಪ್ರಶ್ನೆಗಳ ಸುರಿಮಳೆ...
ಇದಾವ ಪ್ರಶ್ನೆಗಳಿಗೂ ಅತ್ಯಾಚಾರಿಯ ಅಮ್ಮನ ಬಳಿ ಉತ್ತರವೇ ಇಲ್ಲ.‘ನನ್ನ ಮಗ ಹೀಗೇಕಾದ? ನನ್ನದೇ ತಪ್ಪೆ? ಇಲ್ಲವಲ್ಲ...! ಕಿತ್ತು ತಿನ್ನುವ ಬಡತನವಿದ್ದರೂ ಅವನಿಗೆ ಯಾವುದಕ್ಕೂ ಕೊರತೆಯನ್ನೇ ಮಾಡಿಲ್ಲವಲ್ಲ... ಹೊಟ್ಟೆ ಬಟ್ಟೆ ಕಟ್ಟಿ ಸಾಕಿದೆ, ಶಾಲೆಗೆ ಕಳಿಸಿದೆ... ಮತ್ತೊಂದು ಮಗು ಹುಟ್ಟಿದರೆ ಇವನ ಮೇಲಿನ ಪ್ರೀತಿ ಎಲ್ಲಿ ಕಮ್ಮಿಯಾಗಿಬಿಡುವುದೋ ಎಂದು ಗರ್ಭಕ್ಕೂ ಬೀಗ ಹಾಕಿದೆ. ಅವನಪ್ಪ ಸತ್ತ ಮೇಲೆ ನಾನೇ ಅವನಿಗೆ ಅಪ್ಪ- ಅಮ್ಮನಾದೆ. ಅವನ್ಯಾವಾಗ ಕಾಮಾಂಧನಾದ? ಮುಗ್ಧ ಹೆಣ್ಣುಮಗಳನ್ನು ಹರಿದು ಮುಕ್ಕಿ ತಿನ್ನುವ ಹಂತಕ್ಕೆ ಅದ್ಹೇಗೆ ಬಂದ...? ಅತ್ಯಾಚಾರಕ್ಕೆ ಈ ಮನೆ ಅದ್ಹೇಗೆ ಪಾಠಶಾಲೆಯಾಯಿತು? ಎಲ್ಲರೂ ಹೇಳುವಂತೆ ಇದು ನನ್ನ ತಪ್ಪೆ? ಇಲ್ಲ... ಇಲ್ಲ... ನಾನು ಅಂಥ ಸಂಸ್ಕಾರ ಅವನಿಗೆ ನೀಡಿಯೇ ಇಲ್ಲ. ಹಾಗಿದ್ದರೆ... ಹಾಗಿದ್ದರೆ... ಇವೆೆಲ್ಲಾ ಹೇಗೆ ಸಾಧ್ಯ...!
ಹೀಗೆ ಮಗ ಮಾಡಿದ ಕೆಲಸಕ್ಕೆ ಒಳಗೊಳಗೇ ಕುದಿಯುತ್ತ, ಉತ್ತರಗಳೇ ಸಿಗದ ಪ್ರಶ್ನೆಗಳನ್ನು ತನ್ನೊಳಗೇ ಮೌನವಾಗಿ ಕೇಳಿಕೊಳ್ಳುತ್ತ ನೊಂದು ಬೆಂದು ಹೋದ ಅಮ್ಮನೊಬ್ಬಳ ಕಥೆಯೇ ‘ಕುದಿ ಮೌನ’.
ಈಚೆಗೆ ದೆಹಲಿಯಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು (ದಿಶಾ ಪ್ರಕರಣವೆಂದು ಕರೆಯಲಾಗುತ್ತಿದೆ) ಆಧರಿಸಿ ಈ ನಾಟಕ ರಚಿಸಲಾಗಿದೆ.
ರಂಗಬ್ರಹ್ಮ ಡಾ. ಎಸ್.ಎಲ್.ಎನ್ ಸ್ವಾಮಿ ಅವರ ರಚನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಬೆಂಗಳೂರಿನಲ್ಲಿ ಕಳೆದ ಶನಿವಾರ ಏಕವ್ಯಕ್ತಿ ಮಹಿಳಾ ನಾಟಕ (ಪಾತ್ರಧಾರಿ ಭರನಾಟ್ಯ ಕಲಾವಿದೆ, ಪ್ರಾಧ್ಯಾಪಕಿ, ವಿದುಷಿ ಸಂತೋಷಿ ಪ್ರಶಾಂತ್) ನಡೆಯಿತು.
ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಪಾಲಕರು ಅದರಲ್ಲಿಯೂ ಆಕೆಯ ಅಮ್ಮನ ಕಡೆ ಗಮನ ಹೋಗುತ್ತದೆ. ಕಾಮಾಂಧರ ಕೈಯಲ್ಲಿ ನಲುಗಿ ತಮ್ಮ ಮಗಳನ್ನು ಕಳಕೊಂಡ ಆ ತಾಯಿಯ ಒಡಲಿನ ಆಕ್ರಂದನ ನೋಡಿ ಎಲ್ಲರ ಮನ ಕಲಕುತ್ತದೆ. ಅದೇ ಇನ್ನೊಂದೆಡೆ, ಕಾಮಾಂಧರ ತಾಯಿಯಂದಿರಿಗೆ ಎಲ್ಲೆಡೆಯಿಂದ ಚುಚ್ಚುಮಾತುಗಳ ಸುರಿಮಳೆ.
ಮಕ್ಕಳು ಮಾಡಿದ ವಿಕೃತ ಕೆಲಸಕ್ಕೆ ಕುದಿಯುತ್ತಲೇ, ಕುಹಕ ನುಡಿಗಳಿಗೆ ಉತ್ತರಿಸಲಾಗದೇ ಮೌನಕ್ಕೆ ಶರಣಾಗಲೇಬೇಕಾದ ಅನಿವಾರ್ಯತೆಯನ್ನು ಕುದಿಮೌನ ನಾಟಕದಲ್ಲಿ ಕಟ್ಟಿಕೊಡಲಾಗಿದೆ.
ಕುಡುಕ ಗಂಡನಿಂದ ದಿನವೂ ಹೊಡೆಸಿ, ಬಡಿಸಿಕೊಳ್ಳುವ ಈ ಅಮ್ಮನಿಗೆ ಮಗ ಶಿವನೇ ಬದುಕಿನ ಏಕೈಕ ಆಸರೆ. ತನ್ನ ಮಗನಾದರೂ ಜೀವನದಲ್ಲಿ ತನಗೆ ಮಂಗಳ ಉಂಟು ಮಾಡಲಿ ಎಂದು ಆತನಿಗೆ ‘ಶಿವ’ ಎಂದು ನಾಮಕರಣ ಮಾಡುತ್ತಾಳೆ. ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಾಳೆ. ಗಂಡ ಸತ್ತ ಮೇಲೆ ಅಪ್ಪ-ಅಮ್ಮ ಎರಡೂ ಆಗಿ ಮಗನನ್ನು ಸಾಕುತ್ತಾಳೆ. ಆದರೆ ಅದಾವಾಗ ಆತ ಕೆಟ್ಟ ಹಾದಿ ತುಳಿದನೋ ಈಕೆಗೆ ತಿಳಿಯುವುದೇ ಇಲ್ಲ. ಅದಕ್ಕಾಗಿ ತನ್ನ ಗರ್ಭವನ್ನೇ ಅಪರಾಧಿಯಾಗಿಸಬೇಕೋ, ತನ್ನ ಹಣೆಬರಹವನ್ನು ಹಳಿಯಬೇಕೋ, ತಾನು ಮಾಡಿದ್ದು ತಪ್ಪೋ, ಒಪ್ಪೋ ಒಂದೂ ತಿಳಿಯದೆ ಹಳಹಳಿಸುತ್ತಾಳೆ. ‘ನನ್ನ ಗರ್ಭ ಅತ್ಯಾಚಾರದ ಅಡಗುತಾಣವಾಯಿತೆ? ಕಾಮುಕನ ಕಾರಾಗೃಹ
ವಾಯಿತೆ? ರಾಕ್ಷಸನ ಗರಡಿಯಾಯಿತೆ? ಎಂದೆಲ್ಲಾ ಪ್ರಶ್ನಿಸಿಕೊಳ್ಳುವ ಅಮ್ಮನ ಮಾನಸಿಕ ತಳಮಳವನ್ನು ಇಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಇಲ್ಲಿ ‘ಶಿವು’ ಒಂದು ಸಂಕೇತ ಮಾತ್ರ. ಪ್ರತಿಯೊಬ್ಬ ಅತ್ಯಾಚಾರಿಯ ಅಮ್ಮನೂ ಇದೇ ರೀತಿ ಮನಸ್ಥಿತಿ ಹೊಂದುತ್ತಿರಬಹುದೇನೋ ಎಂಬುದನ್ನು ಈ ನಾಟಕದಲ್ಲಿ ನಿರೂಪಿಸಲಾಗಿದೆ.
ನಾನು ಸಾಯುವುದಿಲ್ಲ...: ಅತ್ಯಾಚಾರಿಯ ತಾಯಿಯೆಂಬ ಹಣೆಪಟ್ಟಿ ಕಟ್ಟಿಕೊಂಡು ಜೀವನಪರ್ಯಂತ ಬದುಕಬೇಕಲ್ಲ ಎಂದು ಆತ್ಮಹತ್ಯೆಗೆ ಮನಸ್ಸು ಮಾಡಿದರೂ ಆಕೆ ಸಾಯಲು ಹೋಗುವುದಿಲ್ಲ. ‘ಎಷ್ಟೋ ವರ್ಷಗಳ ನಂತರ ಜೈಲಿನಿಂದ ನೀನು ವಾಪಸಾದಾಗ ಸುತ್ತಮುತ್ತಲ ಜನ ನಿನ್ನನ್ನು ಕಲ್ಲಿನಿಂದ ಹೊಡೆಯಬೇಕು, ಸಾರ್ವಜನಿಕವಾಗಿ ಗುಂಡಿಟ್ಟು ಸಾಯಿಸಬೇಕು, ಒಂದೊಂದು ಹೊಡೆತಕ್ಕೂ ನೀನು ಚೀರಬೇಕು, ನಿನ್ನಂಥ ಕಾಮುಕನಿಗೆ ಹುಚ್ಚು ನಾಯಿಯನ್ನು ಛೂ ಬಿಟ್ಟು ಸಾಯಿಸಬೇಕು, ಆ ಮುಗ್ಧ ಹೆಣ್ಣು ಮಗಳಿಗಿಂತಲೂ ಕ್ರೂರವಾದ ಸಾವು ನಿನ್ನಂಥವರಿಗೆ ಬರಬೇಕು. ನೀನು ರಕ್ತದ ಮಡುವಿನಲ್ಲಿ ಬಿದ್ದು ಅಮ್ಮಾ ಅಮ್ಮಾ ಎಂದು ಒದ್ದಾಡುತ್ತಿರುವಾಗ ನನ್ನ ಬತ್ತಿಹೋದ ಕಣ್ಣಿನಿಂದ ಎರಡು ಹನಿ ಕಣ್ಣೀರು ಬಂದಾಗಲೇ, ನೀನು ನನ್ನ ಮಗನಾಗನಾಗುವೆ. ಆ ಸಾವನ್ನು ನಾನು ನೋಡಬೇಕು...’ ಎಂದೆಲ್ಲಾ ಮೌನಿಯಾಗಿಯೇ ಹೇಳಿಕೊಳ್ಳುತ್ತಾಳೆ.
‘ನಾನು ಬದುಕುತ್ತೇನೆ, ನಾನು ಬದುಕಿಯೇ ತೀರುತ್ತೇನೆ. ನಿನ್ನಂಥ ಪಿಶಾಚಿ ವಿರುದ್ಧ ಹೋರಾಡಲು, ನಿನ್ನಂಥವ ಇನ್ನೆಂದೂ ಹುಟ್ಟದಿರಲೆಂದು ಪ್ರಾರ್ಥಿಸುವುದಕ್ಕಾಗಿ, ನಾನು ಬದುಕುತ್ತೇನೆ. ಆ ಹೆಣ್ಣಿನ ಯಾತನೆಯನ್ನೇ ಉಸಿರಾಡುತ್ತ ನಾನು ಬದುಕುತ್ತೇನೆ. ನಿನ್ನ ತಾಯಿಯಾಗಿ ಅಲ್ಲ ನತದೃಷ್ಟ ಹೆಣ್ಣಾಗಿ ನಾನು ಬದುಕುತ್ತೇನೆ’ ಎನ್ನುವ ಮೂಲಕ ನಾಟಕ ಅಂತ್ಯಕಾಣುತ್ತದೆ.
ಅತ್ಯಾಚಾರಿಯನ್ನಷ್ಟೇ ಏಕಪ್ರಕಾರವಾಗಿ ದೂಷಿಸುತ್ತಿದ್ದವರ ಮನದಲ್ಲಿ, ಅತ್ಯಾಚಾರವೆಂಬ ಪಿಡುಗಿನ ಮೂಲವನ್ನು ಶೋಧಿಸುವಂತೆ ಮಾಡುವ, ಸಾಮಾಜಿಕ ವ್ಯವಸ್ಥೆಯ ಹಲವು ದೋಷಗಳೇ ಇದಕ್ಕೆ ಕಾರಣವಿರಬಹುದೇ ಎಂಬ ಚಿಕಿತ್ಸಕ ದೃಷ್ಟಿಯನ್ನು ‘ಕುದಿಮೌನ’ ಜಾಗೃತಗೊಳಿಸುತ್ತದೆ.
ಮನೋಜ್ಞ ನಟನೆ
ಈ ನಾಟಕದಲ್ಲಿ ಏಕೈಕ ಪಾತ್ರಧಾರಿ ಭರಟನಾಟ್ಯ ಕಲಾವಿದೆಯೂ ಆಗಿರುವ ವಿದುಷಿ ಸಂತೋಷಿ ಪ್ರಶಾಂತ್. ಇದು ರಂಗಭೂಮಿಯ ಮೇಲೆ ಅವರ ಮೊದಲ ನಾಟಕ. 1 ಗಂಟೆ 20 ನಿಮಿಷಗಳವರೆಗಿನ ಅವರ ನಟನೆಯು, ಅತ್ಯಾಚಾರಿಯ ತಾಯಿಯೊಬ್ಬಳ ಒಡಲಿನ ಬೇಗುದಿಯನ್ನು ಎಳೆಎಳೆಯಾಗಿ ಬಿಡಿಸಿತ್ತು.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್
ಏಕವ್ಯಕ್ತಿ ನಾಟಕವಾಗಿರುವ ‘ಕುದಿಮೌನ’ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ತುಟಿಯ ಚಲನೆ ಇಲ್ಲದೆಯೇ ಕೇವಲ ಹಿನ್ನೆಲೆಯ ದನಿಯನ್ನು ಆಧರಿಸಿ ಮೂಕಾಭಿನಯ ಮೂಲಕ ನಾಟಕ ಪ್ರದರ್ಶನ ಮಾಡಿರುವುದರಿಂದ ಈ ದಾಖಲೆ. ಸಂತೋಷಿ ಅವರೇ ಹಿನ್ನೆಲೆ ದನಿಯನ್ನೂ ನೀಡಿದ್ದಾರೆ.
ಯಾರಿಗೆ ಹೇಳಲಿ ನನ್ ಎದಿಯ ಬ್ಯಾನೆಯಾ?
ತನ್ನೊಬ್ಬಳನ್ನೇ ಅಪರಾಧಿಯಾಗಿ ಮಾಡುವ ಸಮಾಜಕ್ಕೆ ಅತ್ಯಾಚಾರಿಯೊಬ್ಬನ ಅಮ್ಮ ಕೇಳುವ ಪ್ರಶ್ನೆಗಳಿವು..
‘ನಿನ್ನಂಥವರ ಸಾವಿನೊಂದಿಗೆ ಅತ್ಯಚಾರ ಮುಗಿದು ಹೋಗುತ್ತದೆಯೆ? ಇದು ಅತ್ಯಾಚಾರಿಗಳಿಗೆ ಪಾಠವಾಗುತ್ತದೆಯೇ? ಸಾಧ್ಯವೇ ಇಲ್ಲ. ಏಕೆಂದರೆ ಇದು ಅಪ್ಪ-ಅಮ್ಮನೊಬ್ಬರ ತಪ್ಪೇ ಅಲ್ಲ. cಜಿಞಜ್ಞಿಚ್ಝಠ ಚ್ಟಛಿ ್ಞಠಿ ಚಿಟ್ಟ್ಞ ಠಿಜಛಿಢ ಚ್ಟಛಿ ಞಚಛಛಿ. ಇಡೀ ವ್ಯವಸ್ಥೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು. ನೀರು ಸಿಗುವಷ್ಟೇ ಸಲೀಸಾಗಿ ಹೆಂಡವನ್ನು ಸಿಗಲು ಮಾಡಿದವರು, ಮರ್ಯಾದೆಯಿಂದ ಬದುಕುವವರಿಗೂ ಮದ್ಯದ ಚಟ ಹಿಡಿಸಿದವರು, ಬಡವರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡುವವರು, ಬಡ ಮಕ್ಕಳಿಗೆ ಸರ್ಕಾರಿ ಶಾಲೆ- ಉಳ್ಳವರಿಗೆ ಕಾನ್ವೆಂಟ್ ಎಂದು ಭೇದಭಾವ ಎಸಗಿರುವವರು, ಮಕ್ಕಳ ಭವಿಷ್ಯ ರೂಪಿಸಬೇಕಿರುವ ಶಿಕ್ಷಕ ವೃತ್ತಿಯಲ್ಲಿ ನೋಟಿನ ಶಿಫಾರಸು ಮಾಡುವವರು, ಚಿಕ್ಕ ಮಕ್ಕಳಿಗೂ ಸುಲಭವಾಗಿ ಮೊಬೈಲ್ ಸಿಗುವಂತೆ ಅತ್ಯಂತ ಕಡಿಮೆ ಬೆಲೆಗೆ ಅದನ್ನು ಮಾರಾಟ ಮಾಡುವವರು, ಮಚ್ಚು-ಲಾಂಗುಗಳನ್ನು ಹೀರೋಗಳ ಕೈಯಲ್ಲಿ ತೋರಿಸಿ ಅಂಥವರೇ ಹೀರೋ ಎಂದು ಬಿಂಬಿಸುತ್ತಿರುವ ಸಿನಿಮಾಗಳು, ಜನರನ್ನು ಹಳ್ಳಕ್ಕೆ ತಳ್ಳುತ್ತಿರುವ ಜಾಹೀರಾತುಗಳು, ಮಾಲ್ ಸಂಸ್ಕೃತಿಯನ್ನು ತಂದ ಸಿರಿವಂತರು... ಹೀಗೆ ಯಾರನ್ನು ದೂಷಿಸಲಿ? ಅವರನ್ನೆಲ್ಲಾ ದಂಡಿಸುವವರು ಯಾರು? ಇಂಥ ಮಗನನ್ನು ಹೆತ್ತ ನಾನೊಬ್ಬಳೇ ಅಪರಾಧಿಯೆ? ಇಂಥ ಸಮಾಜ ಸೃಷ್ಟಿಸಿರುವ ಯಾರು ಅಪರಾಧಿಯೇ ಅಲ್ಲವೆ? ಯಾರಿಗೆ ಹೇಳಲಿ ನನ್ನ ಎದಿಯ ಬ್ಯಾನೆಯಾ? ಎಂದು ಉತ್ತರ ಸಿಗದ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾಳೆ ಈ ಅಮ್ಮ...
ಸುಚೇತನಾ