

ಬೆಂಗಳೂರು: ಶಾಸಕ ಹ್ಯಾರಿಸ್ ಅವರ ಪುತ್ರ ಹಾಗೂ ಬೆಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಯುವ ಕಾಂಗ್ರೆಸ್ ಸಭೆಯಲ್ಲಿ ಉಂಟಾದ ಗಲಾಟೆ ಹಿನ್ನೆಲೆಯಲ್ಲಿ ಸಚಿನ್ಗೌಡ ಎಂಬುವವರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿದೂರು ನೀಡಿದ್ದಾರೆ.
ವೈಯಾಲಿಕಾವಲ್ನ ತೆಲುಗು ಸಮಿತಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. ಭಾಷಣ ಸ್ಪರ್ಧೆ ನಡೆದು ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ನಂತರ ಸಚಿನ್ಗೌಡ ಎಂಬುವವರು ಬೆಂಗಳೂರು ನಗರ ಯುವ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದ ಇಮ್ರಾನ್ ಬಳಿ ಶಾಸಕರ ಪುತ್ರನಾದ ಗೌತಮ್ನನ್ನು ವೇದಿಕೆಗೆ ಏಕೆ ಕರೆಯಲಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಇಮ್ರಾನ್ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಹೀಗಾಗಿ ನೀವು ಕೇಳುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸಚಿನ್ ಹಾಗೂ ಇಮ್ರಾನ್ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು.
ನಲಪಾಡ್ ಮಧ್ಯ ಪ್ರವೇಶ ಮಾಡಿ ಇಬ್ಬರನ್ನು ಸಮಾಧಾನಗೊಳಿಸಲು ಮುಂದಾದರು. ಆಗ ಸಚಿನ್ ಕೋಪಗೊಂಡು ಇದನ್ನು ಕೇಳಲು ನೀನು ಯಾರು? ನಾನು ಹಾಗೂ ಇಮ್ರಾನ್ ಮಾತನಾಡುತ್ತಿದ್ದೇವೆ ನೀನು ಮಧ್ಯ ಬರಬೇಡ ಎಂದು ಹೇಳಿದ್ದಾರೆ. ಇದಕ್ಕೆ ನಲಪಾಡ್ ಪ್ರತಿಕ್ರಿಯೆ ನೀಡಿ ನಾನು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದೇನೆ. ಈ ಕಾರ್ಯಕ್ರಮ ನನ್ನ ಉಸ್ತುವಾರಿಯಲ್ಲೇ ನಡೆಯುತ್ತಿದೆ. ಹೀಗಾಗಿ ನನಗೆ ಕೇಳುವ ಹಕ್ಕು ಇದೆ ಎಂದರು. ನಂತರ ಹೊರ ನಡೆದ ಸಚಿನ್ ಅಲ್ಲಿ ಎದುರಾದ ನಲಪಾಡ್ಗೆ ನಿನ್ನ ಮರ್ಯಾದೆಯನ್ನು ಮಾಧ್ಯಮಗಳಲ್ಲಿ ಹರಾಜುಹಾಕುತ್ತೇನೆ ಎಂದು ಬೆದರಿಕೆ ಹಾಕಿದರು. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ನಲಪಾಡ್ ಹೇಳಿದ್ದಾರೆ.
ನನ್ನ ಜತೆ ಜಗಳ ಮಾಡಿದ ಸಚಿನ್ ಯಾರು ಎಂದು ಗೊತ್ತಿಲ್ಲ. ಅಲ್ಲದೆ ನನ್ನ ವಿರುದ್ಧ ಸಂಚು ನಡೆಸಿ ತೇಜೋವಧೆ ಮಾಡಲು ಮುಂದಾಗಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಅವರು ದೂರು ನೀಡಿದ್ದಾರೆ.
ಸಚ್ಚಿನ್ಗೌಡ ಅವರು ನಲಪಾಡ್ ವಿರುದ್ಧ ದೂರು ನೀಡಲು ತಯಾರಿ ಮಾಡಿಕೊಂಡಿದ್ದರು. ಅವರು ದೂರು ನೀಡುವ ಮೊದಲೇ ನಲಪಾಡ್ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)