

ಲಿಂಗಸುಗೂರು (ರಾಯಚೂರು): ಸರ್ಕಾರಿ ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡಿದ್ದ ತುಂಬು ಗರ್ಭಿಣಿಗೆ ದಾರಿ ಮಧ್ಯೆಯೇ ಹೆರಿಗೆಯಾಗಿ ಮತ್ತೆ ಕ್ವಾರಂಟೈನ್‌ಗೆ ಒಳಪಡುವಂತಾಗಿದೆ!
ಮಹಾರಾಷ್ಟ್ರದ ಪೂನಾಕ್ಕೆ ಗುಳೆ ಹೋಗಿದ್ದ ತಾಲೂಕಿನ ಹಾಲಬಾವಿ ತಾಂಡಾದ ಲಕ್ಷ್ಮೀಬಾಯಿ, ಕಳೆದ ಹತ್ತು ದಿನಗಳ ಹಿಂದೆ ಗಂಡ, ಅತ್ತೆ, ಇಬ್ಬರು ಮಕ್ಕಳ ಜತೆ ತವರಿಗೆ ಬಂದಿದ್ದರು. ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಈಕೆಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಅಧಿಕಾರಿಗಳು ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸುವ ಸಿದ್ಧತೆಯಲ್ಲಿದ್ದರು.
ಆದರೆ ಅದೇ ಸಮಯದಲ್ಲಿ ಗರ್ಭಿಣಿಯು ತನ್ನ ಗಂಡ ಮತ್ತು ಅತ್ತೆ ಜತೆ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಳು. ಅಧಿಕಾರಿಗಳು ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಸ್ವಗ್ರಾಮ ಹಾಲಬಾವಿಯತ್ತ ತೆರಳುವಾಗ ಸೋಮವಾರ ರಾತ್ರಿ ಸುಣಕಲ್ ಗ್ರಾಮದ ಬಳಿ ಗಂಡು ಮಗುವಿಗೆ ಈಕೆ ಜನ್ಮ ನೀಡಿದ್ದಾಳೆ.
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ವಿಷಯ ತಿಳಿದ ವೈದ್ಯರು ಮತ್ತು ಅಧಿಕಾರಿಗಳು ಸಮೀಪದ ಆಸ್ಪತ್ರೆಯೊಂದರಲ್ಲಿ ಬಾಣಂತಿಯನ್ನು ಕ್ವಾರಂಟೈನ್ ಮಾಡಿಟ್ಟಿದ್ದಾರೆ.