

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇವೆರಡೂ ತೀವ್ರ ಎದುರಾಳಿ ಕುಟುಂಬಗಳೆಂದೇ ಜನಜನಿತ. ಆದರೆ ಕಳೆದೆರಡು ದಿನಗಳಿಂದ ಈ ಎರಡೂ ಕುಟುಂಬಗಳ ಮಧ್ಯೆ ಲವ್ವಿ-ಡವ್ವಿ!
ನಿನ್ನೆ (ಸೋಮವಾರ) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬರ್ತ್‌ಡೇ ಇತ್ತು. ಅವರ ಕುಟುಂಬದ ರಾಜಕೀಯ ಶತ್ರು ಎಂದೇ ಪರಿಗಣಿತರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಮನೆಗೇ ಹೋಗಿ ಶುಭಾಶಯ ಕೋರಿದ್ದರು. ಅಷ್ಟೇ ಅಲ್ಲ, ದೇವೇಗೌಡರ ಪಕ್ಕ ನಸುನಗುತ್ತ ಕುಳಿತು ಊಟ ಮಾಡಿ ಅಚ್ಚರಿ ಮೂಡಿಸಿದ್ದರು.
ಈಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ- ಸಂಸದ ಡಿ.ಕೆ. ಸುರೇಶ್ ಸರದಿ. ಇಂದು (ಮಂಗಳವಾರ) ಇವರಿಬ್ಬರೂ ಜತೆಗೂಡಿ ಚನ್ನಪಟ್ಟಣ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ರೈತರ ಸಂಕಷ್ಟಗಳಿಗೆ ಜತೆಯಾಗಿಯೇ ಸ್ಪಂದಿಸಿದ್ದಾರೆ!
ರಾಮನಗರ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ಬಿರುಗಾಳಿ ಸಹಿತ ಭಾರಿ ಮಳೆಗೆ 150 ಎಕರೆಯಷ್ಟು ಬಾಳೆ ತೋಟ ಹಾಗೂ ತೆಂಗಿನ ಮರಗಳು ಹಾನಿಗೀಡಾಗಿದ್ದವು. ಗೋವಿಂದಹಳ್ಳಿ, ಕೋಲೂರು, ಬೆಳಕೆರೆ, ಸೀಬನಹಳ್ಳಿ ಹಾಗೂ ಮುದಿಗೆರೆ ಗ್ರಾಮಗಳಲ್ಲಿನ ತೋಟಗಳಿಗೆ ಕುಮಾರಸ್ವಾಮಿ ಹಾಗೂ ಸುರೇಶ್ ಭೇಟಿ ನೀಡಿ ರೈತರನ್ನು ಸಂತೈಸಿದರು. ಅವರ ಜತೆಗೆ ಎಚ್‌ಡಿಕೆ ಪುತ್ರ, ನಟ ನಿಖಿಲ್ ಕೂಡ ಇದ್ದಿದ್ದು ಗಮನ ಸೆಳೆಯಿತು.
ಹಾನಿಗೀಡಾದ ಪ್ರತಿ ಎಕರೆ ಬಾಳೆತೋಟಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ರೂ. ಪರಿಹಾರವನ್ನು ಎಚ್.ಡಿ.ಕೆ. ಘೋಷಣೆ ಮಾಡಿದರು.