

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ‘ಮಿಷನ್ ಮೌಸಮ್ ಯೋಜನೆಗೆ ಚಾಲನೆ ನೀಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ 150ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಮಹತ್ವದ ಯೋಜನೆಗೆ ಚಾಲನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆಯ 150 ವರ್ಷಗಳ ಪಯಣವನ್ನು ಅವಲೋಕಿಸಿದಾಗ, ಸುಧಾರಣೆಯ ಹಲವು ಮೈಲಿಗಲ್ಲುಗಳು, ಹೊಸತನ ಅಳವಡಿಕೆಯ ಯಶಸ್ವಿ ಪ್ರಯೋಗಗಳು ಹೆಮ್ಮೆ ಮೂಡಿಸುತ್ತವೆ. ಅಲ್ಲದೆ, ಹಂತ-ಹಂತವಾಗಿ ಬದಲಾವಣೆಗೆ ಒಡ್ಡಿಕೊಂಡು ರೈತರಿಗೆ, ಶ್ರೀಸಾಮಾನ್ಯರಿಗೆ ಹತ್ತಿರವಾಗಿದ್ದು ಮಹತ್ವದ ನಡೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನದಲ್ಲಿ ಆಗುವ ಬದಲಾವಣೆ ಹಲವು ಸವಾಲುಗಳನ್ನು ಸೃಷ್ಟಿಸಿರುವುದು ಹೌದು. ತಾಪಮಾನ ಏರಿಕೆಯಿಂದ ಪ್ರಾಕೃತಿಕ ವಿಕೋಪಗಳ ಸಂಖ್ಯೆ ಹೆಚ್ಚುತ್ತಿದೆ. ಹವಾಮಾನದಲ್ಲಿ ಆಗುವ ಬದಲಾವಣೆ ಮೇಲೆ ನಿಗಾ ಇಡುವಂತಹ ಅತ್ಯಾಧುನಿಕ ತಂತ್ರಜ್ಞಾನಗಳು, ರಾಡಾರ್ಗಳು ಮತ್ತು ಉಪಗ್ರಹಗಳು ‘ಮಿಷನ್ ಮೌಸಮ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೊಳ್ಳಲಿವೆ ಎಂಬುದು ಗಮನಾರ್ಹ. ಅಲ್ಲದೆ, ಗಾಳಿಯ ಗುಣಮಟ್ಟದ ಅಂಕಿ ಅಂಶವನ್ನೂ ಇದು ನೀಡಲಿದೆ.
ಮೊದಲೆಲ್ಲ ಚಂಡಮಾರುತಗಳು ಅಪ್ಪಳಿಸಿದಾಗ ಜೀವಹಾನಿಯ ಪ್ರಮಾಣ ಹೆಚ್ಚಾಗಿರುತ್ತಿತ್ತು. 1998ರಲ್ಲಿ ಗುಜರಾತಿನ ಕಾಂಡ್ಲಾ ಮತ್ತು 1999ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ ಚಂಡಮಾರುತಗಳು ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದವು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಸಿಗುವ ನಿಖರ ಮುನ್ಸೂಚನೆಯಿಂದ, ಹಾನಿ ಪ್ರಮಾಣ ತಗ್ಗಿದೆ. ಹವಾಮಾನ ಮುನ್ಸೂಚನೆ ಕ್ಷೇತ್ರದಲ್ಲಾದ ಬೆಳವಣಿಗೆಯೇ ಇದಕ್ಕೆ ಕಾರಣ. ಹಠಾತ್ ಪ್ರವಾಹದ ಬಗ್ಗೆ ಮುನ್ಸೂಚನೆ ನೀಡಲು ಭಾರತದಲ್ಲಿರುವ ವ್ಯವಸ್ಥೆಯು ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತಿದೆ.
‘ಮುಂಬರುವ ದಿನಗಳಲ್ಲಿ, ಭೂಕಂಪಗಳ ಬಗ್ಗೆ ಮುನ್ಸೂಚನೆ ನೀಡುವಂತಹ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮತ್ತು ಸಂಶೋಧಕರು ಕಾರ್ಯೋನ್ಮುಖರಾಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ಸೂಕ್ತವಾಗಿದೆ. ಈ ಬಗೆಯ ತಂತ್ರಜ್ಞಾನ ಅಭಿವೃದ್ಧಿಗೊಂಡರೆ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಪ್ಪಿಸಲು ನೆರವಾಗಲಿದೆ. ಕೆಲ ರಾಜ್ಯಗಳಲ್ಲಿ ಪದೇಪದೆ ಭೂಕಂಪನದ ಅನುಭವಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ಅಧ್ಯಯನ, ಸಂಶೋಧನೆಯೂ ಅಗತ್ಯವಾಗಿದೆ. ಪ್ರಧಾನಿಯವರು ಹೇಳಿದಂತೆ, ‘ಹವಾಮಾನ ಇಲಾಖೆಯು ದೇಶಕ್ಕೆ ವಿಪತ್ತುಗಳನ್ನು ನಿರ್ವಹಿಸುವ ಶಕ್ತಿಯನ್ನು ನೀಡುತ್ತದೆ’. ಆದರೆ, ಪ್ರಾಕೃತಿಕ ವಿಕೋಪಗಳ ಪರಿಣಾಮವನ್ನು ತಡೆಯಲು ಹವಾಮಾನ ಇಲಾಖೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿ, ತಂತ್ರಜ್ಞಾನಸ್ನೇಹಿ ಆಗಿಸಬೇಕಿದೆ. ನೂತನ ಯೋಜನೆಯಾದ ಮಿಷನ್ ಮೌಸಮ್ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಿದೆ.