ಮೆಟಾ ಅಲರ್ಟ್ ಮಾಡಿದ ಕೇವಲ 16 ನಿಮಿಷಗಳಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ ತಡೆದ ಪೊಲೀಸರು! | student

untitled-design-2025-09-02t120633423-68b690792a107
Published on

student: ಇನ್​ಸ್ಟಾಗ್ರಾಮ್​ನಲ್ಲಿ ಕೀಟನಾಶಕ ಮಾತ್ರೆಗಳ ಛಾಯಾಚಿತ್ರ ಹಾಗೂ ಹತಾಶೆಯ ಶೀರ್ಷಿಕೆಯ ಸಂದೇಶವನ್ನು ಕಳುಹಿಸುವ ಮೂಲಕ 20 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಉತ್ತರ ಪ್ರದೇಶದ ಪೊಲೀಸರು ಮೆಟಾ ಅಲರ್ಟ್​ ನಂತರ 16 ನಿಮಿಷಗಳಲ್ಲಿ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.

ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಮ್​ನಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಪೋಸ್ಟ್​ಗಳ ಎಚ್ಚರಿಕೆ ಕುರಿತು ರಾಜ್ಯದಲ್ಲಿ ಜನವರಿ 2023 ರಿಂದ ಈವರೆಗೂ ಸುಮಾರು 1315 ಜನರನ್ನು ರಕ್ಷಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಘಟನೆ ಹಿನ್ನೆಲೆ?

ಪೊಲೀಸರ ಪ್ರಕಾರ, ಆಗಸ್ಟ್​ 31 ರಂದು ಮಧ್ಯಾಹ್ನ 12:45 ರ ಸುಮಾರಿಗೆ ಮೆಟಾ ರಾಜ್ಯ ಪೊಲೀಸರ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಇಮೇಲ್​ ಎಚ್ಚರಿಕೆಯನ್ನು ಕಳುಹಿಸಿದಾಗ, ವಿದ್ಯಾರ್ಥಿಯೊಬ್ಬಳು ತನ್ನ ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಕೀಟನಾಶಕಗಳ ಪ್ಯಾಕೇಟ್​ಗಳನ್ನು ತೋರಿಸಿ ಆತ್ಮಹತ್ಯೆ ಶೀರ್ಷಿಕೆಯೊಂದಿಗೆ ಪೋಸ್ಟ್​ ಮಾಡಿದ್ದಾಳೆ.

ಈ ಮಾಹಿತಿ ತಿಳಿದ ಕೂಡಲೇ, ಹಿರಿಯ ಅಧಿಕಾರಿಗಳು ಪೊಲೀಸ್​ ಮಹಾನಿರ್ದೇಶಕ ರಾಜೀವ್​ ಕೃಷ್ಣ ಅವರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಈ ವೇಳೆ ಎಚ್ಚರಿಕೆ ಬಂದ 16 ನಿಮಿಷಗಳಲ್ಲಿ ವಿಶೇಷ ಪೊಲೀಸ್​ ತಂಡ ಯುವತಿ ಇರುವ ಜಾಗವನ್ನು ಪತ್ತೆ ಹಚ್ಚಿದ್ದು, ಅವರ ಮನೆಗೆ ಧಾವಿಸಿದ್ದಾರೆ. ಅಲ್ಲಿ ಯುವತಿ ವಾಂತಿ ಮಾಡಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಇದ್ದುದನ್ನು ನೋಡಿದ ಪೊಲೀಸರು ಆಕೆಯನ್ನು ತಕ್ಷಣವೇ ಆಸ್ಪ್ರತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಯುವಕನೊಂದಿಗೆ ಪ್ರೀತಿ/ ನಿರಾಸೆ

ನಂತರ, ಆಕೆಯ ಈ ನಿರ್ಧಾರದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಆಕೆ ಇನ್ ಸ್ಟಾಗ್ರಾಮ್​ನಲ್ಲಿ ಒಬ್ಬ ಯುವಕನೊಂದಿಗೆ ಸ್ನೇಹ ಬೆಳೆಸಿಕೊಂಡು ಸಂಬಂಧ ಹೊಂದಿದ್ದಳು. ಇನ್ನು ಅವನೊಂದಿಗೆ ಜಗಳ ಮಾಡಿಕೊಂಡ ನಂತರ ಆತ ಈಕೆಯ ಸಂಖ್ಯೆಯನ್ನು ನಿರ್ಬಂಧಿಸಿದ್ದನು. ಆದರಿಂದ ಖಿನ್ನತೆಗೆ ಒಳಗಾಗಿ ಕೀಟನಾಶಕವನ್ನು ಸೇವಿಸಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net