

ಬೆಂಗಳೂರು: ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದಂತೆ, ಸೈಬರ್ ವಂಚನೆ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿದೆ. ಸ್ವಲ್ಪ ಮೈಮರೆತರೂ ನಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಅಷ್ಟೂ ಹಣ ದೋಚುವ ಖದೀಮರು ನಮ್ಮ ನಡುವೆಯೇ ಇದ್ದಾರೆ. ಸೈಬರ್ ಕ್ರೈಂ ವಂಚನೆಯನ್ನೇ ದಾಳವಾಗಿಸಿಕೊಂಡ ವಂಚಕರ ಜಾಲ ನಮ್ಮ ನಡುವೆಯೇ ಇದೆ. ಹೀಗಾಗಿ ನಮ್ಮ ಮಾಹಿತಿ ಸೋರಿಕೆ ಆಗದಂತೆ ಜಾಗರೂಕತೆ ಮಾಡಬೇಕಾದ್ದು, ನಮ್ಮದೇ ಕರ್ತವ್ಯ.
ಇದೀಗ ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ವಂಚನೆ ಮಾಡುತ್ತಿದ್ದ ಜಾಲವೊಂದನ್ನು ಬಂಧಿಸಿದ್ದಾರೆ.
ವಂಚಕರು ಮೊದಲು ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿಕೊಂಡು ಮಾತುಕತೆ ನಡೆಸುತ್ತಿದ್ದರು. ನಂತರ ನಕಲಿ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮೂಲಕ, ಸಾಮಾಜಿಕ ಜಾಲತಾಣ ಬಳಸಿಕೊಂಡು ಜನರಿಗೆ ಲಿಂಕ್ ಕಳುಹಿಸುತ್ತಿದ್ದರು. ಜನರು ಮೈಮರೆತು ಲಿಂಕ್ ಓಪನ್ ಮಾಡುತ್ತಿದ್ದಂತೆ ಬ್ಯಾಂಕ್ ಖಾತೆಯ ವಿವರ ವಂಚಕರಿಗೆ ಲಭ್ಯವಾಗುತ್ತಿತ್ತು. ಕೂಡಲೇ ಬ್ಯಾಂಕ್ ಖಾತೆಯಲ್ಲಿದ್ದ ಹಣ ದೋಚುತ್ತಿದ್ದರು.
ವಂಚಕರ ಜಾಲದಲ್ಲಿದ್ದ ಕೇರಳ ಮೂಲದ ಶನೀದ್ ಅಬ್ದುಲ್ ಹಮೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 222 ಸಿಮ್ ಕಾರ್ಡ್, 10 ಮೊಬೈಲ್ ಹಾಗೂ 10 ಡೆಬಿಟ್ ಕಾರ್ಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೋರ್ವ ಆರೋಪಿ ಮೊಹಮದ್ ನಿಹಾಲ್ ತಲೆಮರೆಸಿಕೊಂಡಿದ್ದಾನೆ.