

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಬಾಣಲೆಯಿಂದ ರಾಜಕೀಯ ಪ್ರಕ್ಷೋಭೆಯ ಬೆಂಕಿಗೆ ಜಾರಿರುವ ಶ್ರೀಲಂಕಾದಲ್ಲಿ ಮಂಗಳವಾರವೂ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ಸರ್ಕಾರ ಸೇನೆ ಮತ್ತು ಪೊಲೀಸರಿಗೆ ತುರ್ತು ಅಧಿಕಾರ ನೀಡಿದೆ. ಸೋಮವಾರ ಪ್ರತಿಭಟನೆಕಾರರ ಮೇಲೆ ಮಹಿಂದ ಬೆಂಬಲಿಗರು ಆಕ್ರಮಣ ನಡೆಸುವುದರೊಂದಿಗೆ ಹಿಂಸೆ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ರಾಜಪಕ್ಸ ಕುಟುಂಬ ರಾಜಕಾರಣದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದರೂ ಅಧ್ಯಕ್ಷ ಗೋತಬಯ ರಾಜಪಕ್ಸ ಇನ್ನೂ ಅಪಾರ ಅಧಿಕಾರ ಮತ್ತು ಭದ್ರತಾ ಪಡೆಗಳ ಮೇಲಿನ ಹಿಡಿತದೊಂದಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ತಮ್ಮ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸುವ ಬಗ್ಗೆ ಅಧ್ಯಕ್ಷ ಗೋಬಯ ಮಂಗಳವಾರ ಮುಂದಿಟ್ಟ ಆಫರ್ ಅನ್ನು ಪ್ರಮುಖ ಪ್ರತಿಪಕ್ಷ ಸಮಾಗಿ ಜನ ಬಲವೇಗಾಯ (ಎಸ್ಜೆಬಿ) ತಿರಸ್ಕರಿಸಿದೆ. ಗೋತಬಯರ ರಾಜೀನಾಮೆಗೆ ಅದು ಪಟ್ಟು ಹಿಡಿದಿದೆ.
ಅಂಗರಕ್ಷಕ ಕೂಡ ಸಾವು: ಸೋಮವಾರ ನಡೆದ ಹಿಂಸಾ ಚಾರದ ವೇಳೆ ಉದ್ರಿಕ್ತರ ಮುತ್ತಿಗೆಗೆ ಹೆದರಿ ಕಟ್ಟಡವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಸದ ಅಮರಕೀರ್ತಿ ಅಥುಕೋರಾಲ ಅವರ ಅಂಗರಕ್ಷಕ ಕೂಡ ಸತ್ತಿದ್ದಾನೆ. ಈತ ಕೆರೆಯಲ್ಲಿ ಮುಳುಗಿ ಸತ್ತಿದ್ದಾನೆ ಎಂದು ಹೇಳಲಾಗಿದೆ.
ಪ್ರತಿಭಟನಾಕಾರರಿಂದ ನಾಕಾಬಂದಿ: ರಾಜಪಕ್ಸ ಕುಟಂಬ, ಅವರ ನಿಷ್ಠರು ವಿದೇಶಕ್ಕೆ ಪಲಾಯನ ಮಾಡುವುದನ್ನು ತಡೆಯುವ ಉದ್ದೇಶದಿಂದ ಪ್ರತಿಭಟನೆಕಾರರು ಕೊಲಂಬೊದ ಬಂಡಾರನಾಯಿಕೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಚೆಕ್ಪೋಸ್ಟ್ ನಿರ್ವಿುಸಿ ನಾಕಾಬಂದಿ ಹಾಕಿದ್ದಾರೆ.
ಗೋಲಿಬಾರ್ಗೆ ಆದೇಶ: ಸರ್ಕಾರದ ವಿರುದ್ಧ ಎದ್ದಿರುವ ಬಂಡಾಯವನ್ನು ದಮನಿಸಲು ಸರ್ಕಾರ ಮಿಲಿಟರಿ ಮತ್ತು ಪೊಲೀಸರಿಗೆ ವ್ಯಾಪಕ ತುರ್ತು ಅಧಿಕಾರ ನೀಡಿದೆ. ಹಿಂಸಾಚಾರ ನಿರತರ ಮೇಲೆ ಕಂಡಲ್ಲಿ ಗುಂಡು ಹಾರಿಸಲು ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ತುರ್ತು ಅಧಿಕಾರದಲ್ಲಿ, ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ, ಅರೆಸ್ಟ್ ವಾರಂಟ್ ಇಲ್ಲದೇ ಯಾರನ್ನು ಬೇಕಾದರೂ ಬಂಧಿಸಬಹುದು. ಪೊಲೀಸರಿಗೆ ಹಸ್ತಾಂತರಿಸುವ ಮುನ್ನ ಮಿಲಿಟರಿಯವರು ಬಂಧಿತರನ್ನು 24 ಗಂಟೆ ವರೆಗೆ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು. ಮಿಲಿಟರಿಯವರು ವಾಹನಗಳ ಸಹಿತ ಜನರ ಖಾಸಗಿ ಆಸ್ತಿಗಳ ಶೋಧನೆ ನಡೆಸಬಹುದು. ಮಿಲಿಟರಿ ಮತ್ತು ಪೊಲೀಸರಿಗೆ ನೀಡಿರುವ ತುರ್ತು ಅಧಿಕಾರಗಳ ದುರುಪಯೋಗವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಬಹುದು ಎಂದು ರಾಜಕೀಯ ವೀಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದ ಬೆಂಬಲ: ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಭಾರತ ಮಂಗಳವಾರ ಘೋಷಿಸಿದೆ. ಲಂಕಾದ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಭಾರತ ನೆರವು ಒದಗಿಸಿದೆ ಎಂಬುದನ್ನೂ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ನೆನಪಿಸಿದ್ದಾರೆ. ಭಾರತ ಸದಾ ಶ್ರೀಲಂಕಾ ಜನರ ಹಿತಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಎಂದೂ ಬಾಗ್ಚಿ ಪ್ರತಿಪಾದಿಸಿದ್ದಾರೆ.
ಮಹಿಂದ ಕುಟುಂಬಕ್ಕೆ ಘೇರಾವ್: ಜನರ ಆಕ್ರೋಶಕ್ಕೆ ತುತ್ತಾಗಿ ಸೋಮವಾರವಷ್ಟೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಮಹಿಂದ ರಾಜಪಕ್ಸ ಕುಟುಂಬ ಸಹಿತ ದೇಶದ ಈಶಾನ್ಯದಲ್ಲಿರುವ ಟ್ರಿಂಕಾಮಲಿಯ ನೌಕಾ ನೆಲೆಗೆ ಒಂದು ಹೆಲಿಕಾಪ್ಟರ್ನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ನೌಕಾ ನೆಲೆಯ ಹೊರಗೂ ಪ್ರತಿಭಟನೆಕಾರರು ಜನರು ಜಮಾಯಿಸಿ ಮಾಜಿ ಪ್ರಧಾನಿ ಕುಟುಂಬವನ್ನು ಸುತ್ತುವರಿದಿರುವುದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೊಲಂಬೊದಲ್ಲಿರುವ ಮಹಿಂದ ಅವರ ಅಧಿಕೃತ ನಿವಾಸದ ಮುಂದೆ ಸೋಮವಾರ ರಾತ್ರಿ ಸಾವಿರಾರು ಉದ್ರಿಕ್ತ ಜನರು ಜಮಾಯಿಸಿದ್ದರಿಂದ ಮಂಗಳವಾರ ಬೆಳ್ಳಂಬೆಳಗ್ಗೆ ಮಿಲಿಟರಿ ಕಾರ್ಯಾಚರಣೆ ನಡೆಸಿ ಮಹಿಂದ ಕುಟುಂಬವನ್ನು ಪಾರು ಮಾಡಿತು. ಜನರನ್ನು ಚದುರಿಸಲು ಪಜನರಿಂದ ಲಂಕಾ ದಹನ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಮಹಿಂದ ನಿವಾಸದ ಆವರಣದೊಳಕ್ಕೆ ಕನಿಷ್ಠ 10 ಪೆಟ್ರೋಲ್ ಬಾಂಬ್ಗಳನ್ನು ಎಸೆಯಲಾಯಿತು ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನರಿಂದ ಲಂಕಾ ದಹನ: ಕರ್ಫ್ಯೂ ಜಾರಿಯಲ್ಲಿದ್ದರೂ ಸೋಮವಾರ ರಾತ್ರಿ ಆಳುವ ಪಕ್ಷದ ಕನಿಷ್ಠ 41 ಉನ್ನತ ನಾಯಕರ ಮನೆಗಳಿಗೆ ಕೊಳ್ಳಿಯಿಡಲಾಗಿದೆ. ಅವರ ಮನೆಗಳ ಮುಂದಿದ್ದ ನೂರಾರು ವಾಹನಗಳು ಬೆಂಕಿಗಾಹುತಿಯಾಗಿವೆ. ‘ನಾವು ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಹಾಗೆ ಮಾಡದಿದ್ದುದಕ್ಕೆ ಕ್ಷಮೆಯಿರಲಿ’ ಎಂದು ಸಚಿವರೊಬ್ಬರ ಉರಿಯುತ್ತಿರುವ ಮನೆ ಮುಂದೆ ನಿಂತಿದ್ದ ಉದ್ರಿಕ್ತ ಪ್ರತಿಭಟನೆಕಾರನೊಬ್ಬ ಹೇಳಿದ್ದು ಪುಟ್ಟ ದ್ವೀಪ ರಾಷ್ಟ್ರದ ಜನರಲ್ಲಿ ಮಡುಗಟ್ಟಿರುವ ಅಸಹನೆಯನ್ನು ಬಿಂಬಿಸುತ್ತದೆ.