ಸ್ವಜನ ಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ ಮಾತ್ರ, ಯುವಕರಿಗೆ ಆರ್ಮಿ ಸೇರುವಂತೆ ಕರೆ ನೀಡಿದ ಸಿಡಿಎಸ್ ಅನಿಲ್ ಚೌಹಾಣ್ | CDS Anil Chauhan

General Anil Chauhan
Published on

CDS Anil Chauhan: ಭಾರತೀಯ ಸೇನೆ ಎಂಬುದು ಸ್ವಜನ ಪಕ್ಷಪಾತವಿಲ್ಲದ ಸ್ಥಳ ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಗುರುವಾರ (ಸೆಪ್ಟೆಂಬರ್​,18) ಹೇಳಿದ್ದಾರೆ. ಅಲ್ಲದೆ, ದೇಶ ಸೇವೆ ಮಾಡಲು ಯುವಕರು ಸಶಸ್ತ್ರ ಪಡೆಗಳಿಗೆ ಸೇರಬೇಕೆಂದು ಕರೆ ನೀಡಿದ್ದಾರೆ.

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಡಿಎಸ್​, ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಆದು ಸೇನೆ ಎಂದು ತಿಳಿಸಿದ್ಧಾರೆ. ನೀವು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಮತ್ತು ದೇಶ ಮತ್ತು ಜಗತ್ತನ್ನು ಅನ್ವೇಷಿಸಲು ಬಯಸಿದರೆ ನೀವು ಸಶಸ್ತ್ರ ಪಡೆಗಳನ್ನು ಸೇರಬೇಕು. ಅಲ್ಲದೆ, ದೇಶದಲ್ಲಿ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಜನರನ್ನು ರಕ್ಷಿಸುವಲ್ಲಿ ಸಶಸ್ತ್ರ ಪಡೆಗಳು ವಹಿಸಿದ ಪಾತ್ರವನ್ನು ಶ್ಲಾಘಿಸಿದ್ದಾರೆ.

ಮುಂದುವರೆದು ಮಾತನಾಡಿದ ಸಿಡಿಎಸ್, ಆಪರೇಷನ್ ಸಿಂಧೂರದಲ್ಲಿ ಸಶಸ್ತ್ರ ಪಡೆಗಳು ಬೆಳಗಿನ ಜಾವ 1 ಗಂಟೆಯಿಂದ 1.30ರ ನಡುವೆ ಪಾಕಿಸ್ತಾನದ ಗುರಿಗಳ ಮೇಲೆ ಏಕೆ ದಾಳಿ ನಡೆಸಿದವು ಎಂಬುದನ್ನು ಸಿಡಿಎಸ್ ವಿವರಿಸಿದ್ದಾರೆ. ಅಲ್ಲದೆ, ನಾಗರಿಕ ಸಾವುನೋವುಗಳನ್ನು ತಪ್ಪಿಸಲು ರಾತ್ರಿ ದಾಳಿ ಮಾಡಲಾಗಿದೆ. ಆ ಸಮಯದಲ್ಲಿ ದಾಳಿ ನಡೆಸುವುದರಿಂದ ಪುರಾವೆಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿದ್ದರೂ, ಸಶಸ್ತ್ರ ಪಡೆಗಳು ಚಿತ್ರಣವನ್ನು ಪಡೆಯುವ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿದೆ ಎಂದು ಸಿಡಿಎಸ್​ತಿಳಿಸಿದ್ಧಾರೆ.

ಉಗ್ರ ನೆಲೆಗಳ ಮೇಲೆ ದಾಳಿ ಮಾಡಲು ಬೆಳಿಗ್ಗೆ 5:30 ರಿಂದ 6:00 ಸಮಯ ಉತ್ತಮ ಸಮಯವಾಗಿತ್ತು. ಆದರೆ, ಈ ಸಮಯದಲ್ಲಿ, ಮೊದಲ ಪ್ರಾರ್ಥನೆ ನಡೆಯುತ್ತದೆ. ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ, ಈ ಸಮಯದಲ್ಲಿ ಸಾಕಷ್ಟು ನಾಗರಿಕರ ಚಲನವಲನಗಳು ಇರಬಹುದು ಎಂದು ತಿಳಿದು. ನಾವು ದಾಳಿಯನ್ನು ತಪ್ಪಿಸಲು ಬಯಸಿದ್ದೆವು, ಇದಕ್ಕಾಗಿಯೇ ನಾವು 1:00 ರಿಂದ 1:30 ರ ನಡುವಿನ ಸಮಯವನ್ನು ಆರಿಸಿಕೊಂಡಿದ್ದೇವೆ ಎಂದು ಅನಿಲ್​ ಚೌಹಾಣ್​​ ಹೇಳಿದ್ದಾರೆ.

ಆಪರೇಷನ್ ಸಿಂಧೂರ್

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ಘಟನೆಗೆ ಪ್ರತಿಯಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿತು. ಈ ದಾಳಿಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಮಿಲಿಟರಿ ಸಂಘರ್ಷಕ್ಕೆ ಕಾರಣವಾಯಿತು. ಇದರಲ್ಲಿ ಡ್ರೋನ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳು ವ್ಯಾಪಕವಾಗಿ ಬಳಸಲಾಗಿತು.

ಮೇ 10 ರಂದು, ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒ ಕರೆ ಮಾಡಿ ಯುದ್ಧಗಳನ್ನು ನಿಲ್ಲಿಸುವಂತೆ ವಿನಂತಿಸಿದ ನಂತರ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net