

ತ್ರಿವಕ್ರೆಯನ್ನು ಉದ್ಧರಿಸಿದ ಶ್ರೀಕೃಷ್ಣ ಮುಂದೆ ಹೊರಟಿದ್ದಾನೆ. ಮಾರ್ಗದಲ್ಲಿ ನೋಡಿದ ಧನುಸ್ಸನ್ನು ಎಡಗೈಯಿಂದ ಎತ್ತಿ ಮುರಿದಿದ್ದಾನೆ. ಭಯಾನಕ ಶಬ್ದ ಕೇಳಿಸಿದೆ. ಹತ್ತಿರದಲ್ಲಿಯೇ ಇದ್ದ ಕಂಸನ ಎದೆ ಸೀಳಿದ ಹಾಗೆ ಆಗಿದೆ. ಮೃತ್ಯುದೇವತೆಯೇ ಹೀಗೆ ಶಬ್ದ ಮಾಡುತ್ತಿದ್ದಾನೆ ಎಂದು ಗಾಬರಿಯಾಗಿದ್ದಾನೆ. ಸುತ್ತ ನಿಂತ ಜನರು ಶ್ರೀಕೃಷ್ಣನನ್ನು ಸಂಹಾರ ಮಾಡುವುದಕ್ಕೆ ಬಂದರೆ ಅವರೆಲ್ಲರನ್ನೂ ಅದೇ ಮುರಿದ ಧನುಸ್ಸಿನಿಂದ ಹೊಡೆದು ಉರುಳಿಸಿದ್ದಾನೆ. ಕಂಸನಿಗೆ ಭಯ ಆರಂಭವಾಗಿದೆ. ನಾಳೆ ಬೆಳಿಗ್ಗೆ ಏನಾಗುತ್ತದೆಯೋ ಏನೋ ಎಂದು ಬಹಳ ವಿಚಾರ ಮಾಡುತ್ತಿದ್ದಾನೆ.
ಸಾವು ಸಮೀಪಿಸಿದಾಗ ಸಾವಿರ ಚೇಳು ಕಡಿದಷ್ಟು ದುಃಖ ಆಗುತ್ತದೆ. ಸಾವು ಬರುವುದಿದೆ ಅಥವಾ ಬರುತ್ತದೆ ಎಂಬ ಜ್ಞಾನ ಬದುಕಿದ್ದಾಗ ಬರಬಾರದು. ಬಂದರೆ ಬದುಕಿದ್ದರೂ ಸತ್ತಂತೆ. ಕೃಷ್ಣ ಧನುಸ್ಸನ್ನು ಮುರಿದು ಕಂಸನಿಗೆ ಸೂಚನೆ ಕೊಟ್ಟಿದ್ದಾನೆ. ಕಂಸನನ್ನು ಒಂದೇ ಬಾರಿ ಕೊಲ್ಲುವುದು ಬೇಡ. ಒಂದೊಂದೇ ಹೆದರಿಕೆ ಹುಟ್ಟಿಸುತ್ತ ಕಂಸ ಪ್ರತಿದಿನವೂ ಸಾಯಲಿ ಎಂದು ಹೀಗೆ ಮಾಡಿದ್ದಾನೆ. ಕಂಸನಿಗೆ ರಾತ್ರಿ ಕನಸು ಬಿದ್ದಿದೆ. ಅಪಶಕುನಗಳು ಕಾಣುತ್ತಿವೆ. ಶ್ರೀಕೃಷ್ಣನ ವಿಚಾರವನ್ನೇ ಮಾಡುತ್ತ ಆಚೆ ಈಚೆ ಓಡಾಡುತ್ತಿದ್ದರೆ ಕನ್ನಡಿಯಲ್ಲಿ ತನ್ನ ಕುತ್ತಿಗೆ ಕಾಣಿಸುತ್ತಿಲ್ಲ.
ಮಂಗಗಳು ಹಂದಿಗಳು ಕರಿ ಹಲ್ಲಿನ ಮನುಷ್ಯರು ಕಾಣಿಸುತ್ತಿದ್ದಾರೆ. ಚಂದ್ರ ನಕ್ಷತ್ರಗಳು ಎಲ್ಲವೂ ಎರಡೆರಡು ಕಾಣುತ್ತಿವೆ. ಗಿಡಗಳೆಲ್ಲ ಬಂಗಾರ ವರ್ಣದ್ದು ಎಂದು ಕಾಣುತ್ತಿವೆ. ಭೂಮಿಯ ಮೇಲೆ ನಡೆದರೆ ಹೆಜ್ಜೆ ಗುರುತು ಕಾಣಬೇಕು. ಏನೂ ಕಾಣಿಸುತ್ತಿಲ್ಲ. ಇನ್ನು ಮೇಲೆ ನಿನ್ನ ಹೆಜ್ಜೆಗಳು ಈ ಭೂಮಿಯ ಮೇಲೆ ಇರುವುದಿಲ್ಲ ಎನ್ನುವುದನ್ನು ಸೂಚಿಸುತ್ತಿವೆ. ಸ್ವಪ್ನದಲ್ಲಿ ಪ್ರೇತದ ಜೊತೆಗೆ ಆಲಿಂಗನ ಮಾಡಿಕೊಂಡಂತೆ ಕಾಣುತ್ತಿದೆ.
ಕತ್ತೆಯ ಮೇಲೆ ಕುಳಿತಂತೆ ಕಮಲದ ದೇಟುಗಳನ್ನು ತಿಂದಂತೆ ಕೆಂಪು ಬಣ್ಣದ ಹೂಗಳನ್ನು ಹಾಕಿಕೊಂಡಂತೆ ಎಣ್ಣೆ ಹಚ್ಚಿಕೊಂಡು ದಿಗಂಬರನಾಗಿ ದಕ್ಷಿಣದ ದಿಕ್ಕಿಗೆ ಕತ್ತೆಯ ಮೇಲೆ ಕುಳಿತುಕೊಂಡು ಹೊರಟಂತೆ ಕಾಣಿಸುತ್ತಿದೆ. ಇಷ್ಟೆಲ್ಲ ಅಪಶಕುನಗಳು ಸಾವು ಸಮೀಪಿಸಿದ ವ್ಯಕ್ತಿಯಲ್ಲಿ ಕಾಣುತ್ತವೆ ಎಂದು ಐತರೇಯೋಪನಿಷತ್ತು ಹೇಳುತ್ತದೆ