

Jabardasth Tanmay: ತೆಲುಗು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿ, 'ಜಬರ್ದಸ್ತ್' ಕಾಮಿಡಿ ಶೋ ಮೂಲಕ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ತನ್ಮಯಿ, ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾದವರು. ಈ ಸಂಗತಿಯನ್ನು ಖುದ್ದಾಗಿ ತಾವೇ ಹೇಳಿಕೊಂಡ ನಟಿ, ತಾವು ಎದುರಿಸಿದ ಕಷ್ಟಗಳನ್ನು ಎಳೆ ಎಳೆಯಾಗಿ ಇತ್ತೀಚಿನ ಯೂಟ್ಯೂಬ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಕೆಲವು ಸಮಯ ತೆರೆಯಿಂದ ದೂರ ಸರಿದಿದ್ದ ನಟಿ ಈಗ ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ತನ್ನ ವೈಯಕ್ತಿಕ ಹಾಗೂ ವೃತ್ತಿ ಜೀವನ ಕುರಿತಂತೆ ಹಲವಾರು ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. "ಒಂದು ತಿಂಗಳ ಹಿಂದೆ ನಾನು ಆತ್ಮಹತ್ಯೆಗೆ ಶರಣಾಗುವ ಕಠಿಣ ನಿರ್ಧಾರ ಕೈಗೊಂಡಿದ್ದೆ. ನನಗೆ ಈಗಲೂ ಆರ್ಥಿಕ ಸಮಸ್ಯೆಗಳಿವೆ. ಕೇವಲ ನನ್ನ ಸ್ನೇಹಿತರು ಮಾತ್ರವಲ್ಲ ನನ್ನ ಕುಟುಂಬ, ಸಂಬಂಧಿಕರು ದ್ರೋಹ ಬಗೆದಿದ್ದಾರೆ" ಎಂದರು.
"ನನ್ನ ಹಣ ಮತ್ತು ದೇಹವನ್ನು ಬಯಸಿದರೆ ವಿನಃ ಪ್ರೀತಿಯಲ್ಲ. ನನಗೆ ಪ್ರೀತಿ ನಿವೇದನೆ ಮಾಡಿದವರು ಮತ್ತು ನನ್ನ ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿಗಳು ಒಂದೇ ಒಂದು ದಿನವೂ ನನಗೆ ಊಟ ಕೊಟ್ಟಿಲ್ಲ. ನನ್ನ ಕಷ್ಟ, ಸಮಸ್ಯೆಗಳನ್ನು ಹಂಚಿಕೊಳ್ಳಲು ನನ್ನೊಂದಿಗೆ ಇರಲಿಲ್ಲ. ಇತ್ತೀಚೆಗಷ್ಟೇ ನನಗೆ ಸೊಂಟ ಶಸ್ತ್ರಚಿಕಿತ್ಸೆ ಆದಾಗಲೂ, ನನ್ನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಟ್ರಾನ್ಸ್ ಸಮುದಾಯದ ರಮ್ಯಾ ಅವರು ನನ್ನನ್ನು ಒಂದು ದಿನ ಪೂರ್ತಿ ನೋಡಿಕೊಂಡು, ಆರೈಕೆ ಮಾಡಿದರು" ಎಂದು ಹೇಳಿದರು. ಇದನ್ನೂ ಓದಿ: DK Shivakumar | ಆ ಜಾಗ ನಮಗೆ ಮೆಟ್ರೋಗೆ ಬೇಕು, ಅದನ್ನ ತಗೊಂಡೇ ತಗೋಳ್ತೇವೆ..!
"ಶಸ್ತ್ರಚಿಕಿತ್ಸೆ ಆದ ಬಳಿಕ ನನ್ನನ್ನು ಮನೆಗೆ ಬಿಟ್ಟರು. ನನಗೆ ತಂದೆ ಇಲ್ಲ, ತಾಯಿ ಒಬ್ಬರೇ. ನಾನು ನನ್ನ ಅಜ್ಜಿ ಮತ್ತು ಅಜ್ಜನನ್ನೂ ನೋಡಿಕೊಳ್ಳಬೇಕು. ನನ್ನ ಸಹೋದರ ಹಳ್ಳಿಯಲ್ಲಿ ಇಟ್ಟಿಗೆ ಕೆಲಸ ಮಾಡ್ತಾನೆ. ಅವರ ಮಕ್ಕಳಿಗೆ ನಾನೇ ಒಳ್ಳೆಯ ಶಿಕ್ಷಣ ಕೊಡಬೇಕು. ಇಂಡಸ್ಟ್ರಿಯವರಿಂದಲೂ ಮೋಸ ಆಗಿದೆ. ಉತ್ತಮ ಸ್ಥಾನದಲ್ಲಿರುವ ವ್ಯಕ್ತಿಗಳೇ ನನಗೆ ತುಂಬಾ ಕಿರುಕುಳ ಕೊಡುತ್ತಿದ್ದರು. ಈ ಜೀವನದಲ್ಲಿ ಬಹಳಷ್ಟು ನೋವು ಅನುಭವಿಸಿದ್ದೇನೆ. 8 ವರ್ಷಗಳ ಕಾಲ ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿದ್ದೆ. ಆದರೆ, ಆತ ನನ್ನ ಹಣವನ್ನು ಪ್ರೀತಿಸುತ್ತಿದ್ದನೇ ಹೊರತು ನನ್ನನ್ನಲ್ಲ ಎಂಬುದು ಸ್ಪಷ್ಟವಾಯಿತು. ಅಂದೇ ನಿರ್ಧರಿಸಿದೆ. ಯಾರೊಂದಿಗೂ ಪ್ರೀತಿ, ಪ್ರೇಮ ಸಂಬಂಧ ಬೇಡ. ಯಾರನ್ನೂ ಪ್ರೀತಿಸುವುದು ಬೇಡ ಎಂಬ ಕಠಿಣ ಮನಸ್ಥಿತಿಗೆ ಬಂದೆ" ಎಂದು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).