

ನವದೆಹಲಿ: ನಮ್ಮ ದೇಶದಲ್ಲಿ ಕರೊನಾ COVID19 ಸೋಂಕು ಪೀಡಿತರ ಸಂಖ್ಯೆ 2,000 ದ ಗಡಿ ಸಮೀಪಕ್ಕೆ ಬಂದಿದ್ದು, ಸಾವಿನ ಸಂಖ್ಯೆ 50ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶಗಳು ತಿಳಿಸಿವೆ.
ಕರೊನಾ ಕೇಸ್ಗಳ ಪೈಕಿ 1,764 ಕೇಸ್ಗಳು ಆ್ಯಕ್ಟಿವ್ ಆಗಿದ್ದು, 150 ಜನರಿಗೆ ಸೋಂಕು ವಾಸಿಯಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ನವದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರ ಪೈಕಿ 5,000ಕ್ಕೂ ಹೆಚ್ಚು ಜನರನ್ನು ವಿವಿಧ ರಾಜ್ಯಗಳಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಇನ್ನೂ 2,000 ಜನರ ಶೋಧ ಕಾರ್ಯ ಗುಜರಾತ್, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಮುಂದುವರಿದಿದೆ. ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರ ಪಟ್ಟಿಯಲ್ಲಿ ವಿದೇಶೀಯರೂ ಇದ್ದು, ಕೆಲವರನ್ನು ಗುರುತಿಸಿ ಅವರವರ ರಾಷ್ಟ್ರಗಳಿಗೆ ಕಳುಹಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇನ್ನು ಕೆಲವರು ದೆಹಲಿಗೆ ತಲುಪಿದ್ದು, ಅಲ್ಲಿಂದ ಸ್ವದೇಶಕ್ಕೆ ಮರಳಬೇಕಷ್ಟೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ ತಬ್ಲಿಘಿ ಜಮಾತ್ನ ಸಮ್ಮೇಳನವೇ ದೇಶವ್ಯಾಪಿ ಸೋಂಕು ಹರಡಿದ ಕೇಂದ್ರ ಸ್ಥಾನವಾಗಿ ರೂಪುಗೊಂಡಿದೆ. ಇಲ್ಲಿಂದ ಹೋದವರು ಪಸರಿಸಿದ ರೀತಿ, ಪ್ರಮಾಣ ಇನ್ನೂ ರಾಷ್ಟ್ರಮಟ್ಟದಲ್ಲಿ ಸರಿಯಾಗಿ ವ್ಯಕ್ತವಾಗಿಲ್ಲ. ಸರ್ಕಾರದ ನಿರ್ದೇಶನವನ್ನು ಪಾಲಿಸಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿಗಳಲ್ಲಿ ಅತಿ ಹೆಚ್ಚಿನ ಹೊಸ ಪ್ರಕರಣಗಳು ದಾಖಲಾಗಿವೆ. ಇಂದು ಪ್ರಧಾನಮಂತ್ರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಈ ಸೋಂಕಿನ ಕುರಿತ ಸ್ಥಿತಿಗತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಲಿದ್ದಾರೆ. ದೇಶಾದ್ಯಂತ ಲಾಕ್ಡೌನ್ ಆಗಿ ಒಂದು ವಾರದ ಮೇಲಾಗಿದ್ದು, ಗುರುವಾರ ಒಂಭತ್ತನೇ ದಿನಕ್ಕೆ ಕಾಲಿರಿಸಿದೆ.
ಇದೇ ವೇಳೆ, ಹೆಚ್ಚುತ್ತಿರುವ ಸೋಂಕಿನ ಪ್ರಮಾಣಕ್ಕೆ ಅನುಗುಣವಾಗಿ ಚಿಕಿತ್ಸಾ ಮೂಲಸೌಕರ್ಯ ಹೆಚ್ಚಿಸುವ ಕೆಲಸವೂ ನಡೆಯುತ್ತಿದೆ. 9,000 ಆಸ್ಪತ್ರೆ ಬೆಡ್ ಈಗ ಲಭ್ಯವಿದ್ದು, 8,500ಕ್ಕೂ ಹೆಚ್ಚು ಡಾಕ್ಟರ್ಗಳು ಮತ್ತು ಪೂರಕ ಸಿಬ್ಬಂದಿಯ ಸೇವೆಯೂ ಲಭ್ಯವಿದೆ. ರೈಲ್ವೆ ಕೂಡ ಐಸೋಲೇಷನ್ ಯುನಿಟ್ ಮತ್ತು ವೆಂಟಿಲೇಟರ್ಗಳನ್ನು ಸಿದ್ಧಪಡಿಸುವ ಕೆಲಸ ಮುಂದುವರಿಸಿದೆ. (ಏಜೆನ್ಸೀಸ್)