More

    ತಬ್ಲಿಘಿ ಜಮಾತ್ ಮತ್ತು COVID19 ವಿವಾದದ ವಿಚಾರಗಳು ಏನೇನು?

    ನವದೆಹಲಿ: ನಮ್ಮ ದೇಶದಲ್ಲಿ ಸಂಭವಿಸಿರುವ ಕರೋನಾ ಸೋಂಕು ಸಂಬಂಧಿತ ಸಾವುಗಳ ಪೈಕಿ 39 ನವದೆಹಲಿಯ ನಿಜಾಮುದ್ದೀನ್​ನಲ್ಲಿರುವ ತಬ್ಲೀಘಿ ಜಮಾತ್​ನ ಪ್ರವಚನಕ್ಕೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ ತಬ್ಲಿಘಿ ಜಮಾತ್ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ. ಕರೊನಾ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಮಾರ್ಗದರ್ಶಿಯನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್ ಮತ್ತು ವಿವಾದದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

    ತಬ್ಲಿಘಿ ಜಮಾತ್ ಎಂದರೇನು?: ಸರಿಸುಮಾರು ಒಂಬತ್ತು ದಶಕಗಳ ಹಿಂದೆ ದೇವಬಂದಿ ಇಸ್ಲಾಮಿಕ್ ಸ್ಕಾಲರ್ ಮೌಲಾನ ಮುಹಮ್ಮದ್​ ಇಲಿಯಾಸ್ ಕಾಂಧಲವಿ ಧಾರ್ಮಿಕ ಸುಧಾರಣಾ ಚಳವಳಿಯ ಭಾಗವಾಗಿ ಇದನ್ನು ಸ್ಥಾಪಿಸಿದರು. ಇದು ಸಮಾಜದಲ್ಲಿ ನಂಬಿಕೆಯನ್ನು ಪಸರಿಸುವ ಕೆಲಸವನ್ನು ಮಾಡುತ್ತದೆ. ಇದು ಸಂಪೂರ್ಣವಾಗಿ ರಾಜಕೀಯೇತರ ಚಳವಳಿಯಾಗಿದ್ದು, ಪ್ರವಾದಿ ಮಹಮ್ಮದ್ ಅವರ ಕಲಿಮ್ಹಾ (ನಂಬಿಕೆಯ ಘೋಷಣೆ), ಸಲಾಹ್​(ಪ್ರಾರ್ಥನೆ), ಇಲ್ಮ್ ಓ ಝಿಕ್ರ್​ (ತಿಳಿವಳಿಕೆ), ಇಕ್ರಾಂ ಏ ಮುಸ್ಲಿಂ(​ಮುಸ್ಲಿಮನ ಗೌರವ), ಇಖ್ಲಾಸ್​-ಏ-ನಿಯ್ಯತ್ (ಉದ್ದೇಶದ ಪ್ರಾಮಾಣಿಕತೆ) ಮತ್ತು ತಫ್ರಿಘ್​ ಇ ವಕ್ತ್​ (ಬಿಡುವಿನ ವೇಳೆ) ಕುರಿತು ಪ್ರಚಾರ, ಪ್ರಸಾರ ಮಾಡುತ್ತದೆ. ಜಗತ್ತಿನ ಅತ್ಯಂತ ಪ್ರಭಾವಿ ಆಧ್ಯಾತ್ಮಿಕ ಚಳವಳಿ ಎಂದೇ ಪರಿಗಣಿಸಲ್ಪಡುವ ಜಮಾತ್​ ಈಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಬಣಗಳ ಪ್ರಭಾವ ಪೀಡಿತವಾಗಿವೆ ಎಂದು ಹೇಳಲಾಗುತ್ತಿದೆ.

    ಕಾರ್ಯವೇನು ಮತ್ತು ಹೇಗೆ?: ದಕ್ಷಿಣ ಏಷ್ಯಾದಲ್ಲಿ ಇದಕ್ಕೆ 15 ರಿಂದ 25 ಕೋಟಿ ಪ್ರಾಥಮಿಕ ಸದಸ್ಯರಿದ್ದಾರೆ. ಜಮಾತ್​ ಸದಸ್ಯರು ಕೇವಲ ಮುಸ್ಲಿಮರ ನಡುವೆ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರವಾದಿ ಮೊಹಮ್ಮದರ ಆದರ್ಶ ಜೀವನದ ದಾರಿಗಳನ್ನು ಹೇಳಿಕೊಡುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಜಮಾತ್ ಪ್ರವಚನ ಸಭೆಯಲ್ಲಿ ಬೋಧಕರ ಸಣ್ಣ ಸಣ್ಣ ಹಲವು ಗುಂಪುಗಳನ್ನಾಗಿ ವಿಂಗಡಿಸಿ ಅವರಲ್ಲಿ ಒಬ್ಬ ಹಿರಿಯನನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಗುಂಪುಗಳು ಮಸೀದಿಗಳ ಮೂಲಕ ನಿಶ್ಚಿತ ಪ್ರದೇಶಗಳಿಗೆ ತೆರಳಿ ಮುಸ್ಲಿಮರ ನಡುವೆ ಧರ್ಮ ಬೋಧನೆಯನ್ನು ಮಾಡುತ್ತವೆ.

    COVID19 ಮತ್ತು ತಬ್ಲಿಘಿ ಜಮಾತ್: ಮಾರ್ಚ್ ಆರಂಭದಲ್ಲಿ ನಿಜಾಮುದ್ದೀನ್ ಪ್ರದೇಶದ ಬಂಗ್ಲಾವಾಲಿ ಮಸೀದಿಯಲ್ಲಿ ಈ ಬೋಧಕರ ಸಮ್ಮೇಳನ ನಡೆಯಿತು. ಇದೇ ಪ್ರದೇಶದಲ್ಲಿ ಜಮಾತ್​ನ ಕೇಂದ್ರ ಕಚೇರಿ ಅಥವಾ ಮರ್ಕಜ್​ ಕೂಡ ಇದೆ. ಮಾರ್ಚ್​ನಲ್ಲಿ ನಡೆದ ಸಮ್ಮೇಳನದಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್​, ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಕಿರ್ಗಿಸ್ತಾನ ಸೇರಿ ವಿವಿಧ ದೇಶಗಳ 800ಕ್ಕೂ ಹೆಚ್ಚು ಬೋಧಕರು ಪಾಲ್ಗೊಂಡಿದ್ದಾರೆ ಎಂದು ನಂಬಲಾಗುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ, 70 ದೇಶಗಳಿಂದ 2000 ಕ್ಕೂ ಹೆಚ್ಚು ವಿದೇಶೀಯರು ಭಾರತಕ್ಕೆ ಜನವರಿ 1ರಿಂದ ಈಚೆಗೆ ಜಮಾತ್​ನ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ಪೈಕಿ 1,000ಕ್ಕೂ ಹೆಚ್ಚು ಜನ ಲಾಕ್​ಡೌನ್ ಕಾರಣಕ್ಕೆ ಜಮಾತ್​ನಲ್ಲಿ ಸಿಲುಕಿಕೊಂಡಿದ್ದಾರೆ. ಹಲವರ ಬಳಿ ಇರುವ ಆರು ತಿಂಗಳ ಪ್ರವಾಸಿ ವೀಸಾದ ಅವಧಿಯೂ ಮುಗಿದಿದೆ.

    ಈ ಸಮ್ಮೇಳನ ಮುಗಿಸಿ ತೆಲಂಗಾಣಕ್ಕೆ ತೆರಳಿದ್ದ ಇಂಡೋನೇಷ್ಯಾದ ಪ್ರಜೆ ಮಾರ್ಚ್​ 18ರಂದು ಅಲ್ಲಿ ಮೃತಪಟ್ಟಾಗ, ಆತನಿಗೆ COVID19 ಸೋಂಕು ಇರುವುದು ಖಚಿತವಾಗಿದೆ. ಮಾರ್ಚ್ 21ರ ವೇಳೆಗೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಈ ಧರ್ಮ ಬೋಧಕರ ವಿವರ ನೀಡುವಂತೆ ಅಲರ್ಟ್ ಮಾಡಿದೆ. ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಣೆ ಆದಾಗ, ನಿಜಾಮುದ್ದೀನ್ ಮರ್ಕಜ್​ ಅಲ್ಲಿ 2,500ಕ್ಕೂ ಹೆಚ್ಚು ಸದಸ್ಯರು ಇರುವುದಾಗಿ ಘೋಷಿಸಿಕೊಂಡಿತ್ತು. ಇದಾಗಿ ಮರುದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್​ಡೌನ್ ಘೋಷಿಸಿದಾಗ 1,500ರಷ್ಟು ಜಮಾತ್ ಸದಸ್ಯರು ಅಲ್ಲಿ ಬಾಕಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಏಪ್ರಿಲ್ 1ರ ತನಕ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರ ಪೈಕಿ 10 ಜನ ಸಾವನ್ನಪ್ಪಿದ್ದು, ಈ ಪೈಕಿ ಫಿಲಿಪ್ಪಿನ್ಸ್​ನ ಪ್ರಜೆ ಮರ್ಕಜ್​ನಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದಂತೆ, 285 ಮಂದಿಗೆ ಕರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದ್ದು, ಮರ್ಕಜ್​ನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    VIDEO: ಭಯ ಬೇಡ! ನಿಮ್ಮ ವಿಜಯವಾಣಿ ಅತ್ಯಂತ ಸುರಕ್ಷಿತ- ಕೈಯಲ್ಲಿ ಹಿಡಿದುಕೊಂಡೇ ಓದಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts