ಮುಗಿದ ನಾಮಪತ್ರ ಭರಾಟೆ, ಇನ್ನು ಮತಬೇಟೆ; ಕಾಂಗ್ರೆಸ್ ಜತೆ ಕುಸ್ತಿಗೆ ಸಿದ್ಧಗೊಂಡ ದೋಸ್ತಿ

JDS RoadShow
Published on

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಣ ಇನ್ನಷ್ಟು ರಂಗೇರಿದೆ. ನಾಮಪತ್ರ ಸಲ್ಲಿಕೆ ಕೊನೇ ದಿನವಾದ ಶುಕ್ರವಾರ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರೆ, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಾಸಿನ್ ಅಹ್ಮದ್ ಖಾನ್ ಪಠಾಣ್ ಕೂಡ ಉಮೇದುವಾರಿಕೆ ಸಲ್ಲಿಸಿದರು. ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಬಂಡಾಯ ಎದ್ದಿರುವ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಶಿಗ್ಗಾಂವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಹಾಕಿದ್ದಾರೆ. ಸಂಡೂರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪಕ್ಷದ ನಾಯಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಜತೆ ಬೃಹತ್ ಶಕ್ತಿ ಪ್ರದರ್ಶನ ನಡೆಸಿ ನಾಮಪತ್ರ ಸಲ್ಲಿಸಿದರು.

ಸಿ.ಪಿ.ಯೋಗೇಶ್ವರ್ ಹೊರನಡೆದು, ಕಾಂಗ್ರೆಸ್ ಅಭ್ಯರ್ಥಿಯಾದ ನಂತರ ಮಿತ್ರಪಕ್ಷಗಳಲ್ಲಿ ತಲೆದೋರಿದ್ದ ಗೊಂದಲ, ಅಪನಂಬಿಕೆ ಕಾಮೋಡ ಹಿಂದೆ ಸರಿದಿದೆ. ಕದನ ಕಣದಲ್ಲಿ ಒಂದಾಗಿ ಹೋರಾಡುವುದಕ್ಕೆ ಸನ್ನದ್ಧರಾಗಿದ್ದಾರೆ. ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿ, ಜೆಡಿಎಸ್ ರಾಜ್ಯ ನಾಯಕರು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಜತೆಗೆ ಬಿಜೆಪಿ ವರಿಷ್ಠರ ತೀವ್ರ ನಿಗಾ, ಕಟ್ಟುನಿಟ್ಟಿನ ಸೂಚನೆ ಕಾರಣಕ್ಕೆ ಮೈಯೆಲ್ಲ ಕಣ್ಣಾಗಿ ಶ್ರಮಿಸಲು ಮುಂದಾಗಿದ್ದಾರೆ.

ಆಡಳಿತ ಪಕ್ಷದೊಂದಿಗೆ ಕುಸ್ತಿಗೆ ಇಳಿಯಲು ದೋಸ್ತಿ ಪಡೆಯು ಜಂಟಿ ಕಾರ್ಯತಂತ್ರ, ಪ್ರತ್ಯೇಕ ರಣವ್ಯೂಹ ಹೆಣೆದಿದೆ. ಲೋಕಸಭೆ ಚುನಾವಣೆಯಲ್ಲಿ ಸಮನ್ವಯದ ಕೆಮಿಸ್ಟ್ರಿ ವರ್ಕೌಟ್ ಆಗಿರುವ ಕಾರಣ ಅದೇ ತಂತ್ರೋಪಾಯ ಪ್ರಯೋಗಿಸುವ ಉತ್ಸಾಹದಲ್ಲಿದೆ.

ಮೂರು ತಂಡ: ಬಿಜೆಪಿ ರಾಜ್ಯ ನಾಯಕರು ಮೂರು ತಂಡಗಳಾಗಿ ವಿಂಗಡಣೆಯಾಗಿದ್ದಾರೆ. ಜನಶಕ್ತಿ ಪ್ರದರ್ಶನದ ಮೂಲಕ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿ, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಕೇವಲ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಬೇಸರ ಹೆಪು್ಪಗಟ್ಟಿದ್ದರೆ, ಮೈಸೂರು ಚಲೋ ಜಂಟಿ ಪಾದಯಾತ್ರೆಗೆ ದೊರೆತ ಜನಸ್ಪಂದನೆ ಸಾಕ್ಷಿಯಾಗಿದೆ. ಮೂರು ಕ್ಷೇತ್ರಗಳಲ್ಲಿ ಜನರು ಬೇಸರ, ಅಸಮಾಧಾನ ದಾಖಲಿಸುವ ವಿಶ್ವಾಸವಿದೆ. ರಾಜ್ಯ ರಾಜಕೀಯಕ್ಕೆ ದಿಕ್ಸೂಚಿಯಾಗಿ ಹೊಸ ಶಕ್ತಿ ತುಂಬಲಿದೆ ಎಂಬುದು ಬಿಜೆಪಿ ರಾಜ್ಯ ನಾಯಕರ ತರ್ಕವಾಗಿದೆ. ಸೇಡಿನ, ಕುತಂತ್ರದ ರಾಜಕಾರಣಕ್ಕೆ ಜನರ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂದು ಜೆಡಿಎಸ್ ನಾಯಕರು ನಂಬಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರಚಾರದ ಅಖಾಡಕ್ಕೆ ಕರೆದು ಭಾವನಾತ್ಮಕ ಕಾರ್ಡ್ ಪ್ರಯೋಗಿಸಲು ಉತ್ಸುಕರಾಗಿದ್ದಾರೆ.

Bangaru Hanumanthu

ಕ್ಷೇತ್ರ ಕಾರ್ಯಕ್ಕೂ ಅಣಿ: ಪ್ರವಾಸ, ಪ್ರಚಾರ, ಬಹಿರಂಗ ವೇದಿಕೆಯಲ್ಲಿ ಭಾಷಣಕ್ಕೆ ತಾಳಮೇಳ ಸೀಮಿತಗೊಳಿಸದೆ ಕ್ಷೇತ್ರ ಕಾರ್ಯದಲ್ಲಿ ಎರಡೂ ಪಕ್ಷಗಳ ಮುಖಂಡರನ್ನು ತೊಡಗಿಸಲು, ಕಾರ್ಯಕರ್ತರನ್ನು ಬೆಸೆಯಲು ಒತ್ತು ನೀಡಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಪ್ರತಿ ಗ್ರಾಪಂಗೆ ತಲಾ ಒಬ್ಬ ಹಾಲಿ-ಮಾಜಿ ಶಾಸಕ, ಜಿಪಂ ಕ್ಷೇತ್ರಕ್ಕೆ ಮಾಜಿ ಸಚಿವರನ್ನು ಜೋಡಣೆ ಮಾಡಿದ್ದು, ಜೆಡಿಎಸ್ ಸಂಘಟನಾ ಬಲವನ್ನು ಈ ತಂಡದೊಂದಿಗೆ ಸೇರಿಸಿಕೊಳ್ಳಲಾಗುತ್ತದೆ. ರಾಜ್ಯ ನಾಯಕರು ವಿಧಾನಸಭೆ ಕ್ಷೇತ್ರದ ಕೇಂದ್ರ ಸ್ಥಳದಲ್ಲಿ ಬಿಡಾರ ಹೂಡಿ, ಕ್ಷೇತ್ರದ ಪ್ರತಿ ಮನೆಗೆ ಒಬ್ಬ ಕಾರ್ಯಕರ್ತ ಭೇಟಿ ನೀಡುವ ರೀತಿಯಲ್ಲಿ ತಂತ್ರಗಾರಿಕೆ ಹೆಣೆಯಲಾಗಿದೆ.

ಚನ್ನಪಟ್ಟಣದಲ್ಲಿ ನಿಖಿಲ್ ಬೃಹತ್ ರೋಡ್ ಶೋ: ನ್​ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಉಮೇದುವಾರಿಕೆ ಸಲ್ಲಿಸಿದರು. ಇವರಿಗೆ ತಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ನಿಖಿಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ನಿಖಿಲ್ ಪತ್ನಿ ರೇವತಿ ಮತ್ತು ಹಲವು ಜೆಡಿಎಸ್ ನಾಯಕರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ನಗರದ ಷೇರ್ವಾ ಸರ್ಕಲ್ ಬಳಿ ನಿಖಿಲ್ ಸೇರಿ ಮೈತ್ರಿ ನಾಯಕರಿಗೆ ಎರಡೂ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಷೇರ್ವಾ ಸರ್ಕಲ್​ನಿಂದ ತಾಲೂಕು ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ನಾಯಕರ ದಾಂಗುಡಿ!: ನಿಖಿಲ್ ನಾಮಪತ್ರ ಸಲ್ಲಿಕೆ ಕಾರ್ಯ ಕ್ರಮಕ್ಕೆ ಹಲವು ಬಿಜೆಪಿ ನಾಯಕರು ಸಾಥ್ ನೀಡಿದರು. ಒಕ್ಕಲಿಗರ ಭದ್ರಕೋಟೆ ಎನ್ನಲಾದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಅಖಾಡಕ್ಕೆ ಭಾಜಪ ಒಕ್ಕಲಿಗರ ನಾಯಕರು ದಾಂಗುಡಿ ಇಟ್ಟಿದ್ದು ವಿಶೇಷವಾಗಿತ್ತು. ಮಾಜಿ ಸಿಎಂ ಸದಾನಂದಗೌಡ, ಸಂಸದರಾದ ಬಿ.ವೈ.ರಾಘವೇಂದ್ರ, ಡಾ.ಸುಧಾಕರ್, ಯದುವೀರ್ ಒಡೆಯರ್, ಡಾ.ಮಂಜುನಾಥ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ್, ಎಚ್.ವಿಶ್ವನಾಥ್, ಸಾ.ರಾ.ಮಹೇಶ್, ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ನಿಖಿಲ್ 113 ಕೋಟಿ ರೂ. ಒಡೆಯ

ಅಭ್ಯರ್ಥಿ: ನಿಖಿಲ್ ಕುಮಾರಸ್ವಾಮಿ ಕ್ಷೇತ್ರ: ಚನ್ನಪಟ್ಟಣ, ಪಕ್ಷ: ಜೆಡಿಎಸ್ ಒಟ್ಟು ಆಸ್ತಿ: 113.54 ಕೋಟಿ ರೂ.

ಚನ್ನಪಟ್ಟಣ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶತಕೋಟಿ ಒಡೆಯ. ಶುಕ್ರವಾರ ನಾಮಪತ್ರ ಸಲ್ಲಿಸಿದ ಅವರು, ತಮ್ಮ ಹೆಸರಲ್ಲಿ ಒಟ್ಟು 107.49 ಕೋಟಿ ರೂ. ಆಸ್ತಿ, ಪತ್ನಿ ರೇವತಿ ಹೆಸರಲ್ಲಿ 5.93 ಕೋಟಿ ರೂ. ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ. ನಿಖಿಲ್ ಬಳಿ ರೇಂಜ್ ರೋವರ್, ಸೇರಿ 5 ವಾಹನಗಳು, 1.5 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಸೇರಿ ಒಟ್ಟು 29.34 ಕೋಟಿ ರೂ. ಚರಾಸ್ತಿ ಇದ್ದರೆ, ಒಟ್ಟು 78.14 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರೇವತಿ ಬಳಿ 1.5 ಕೆಜಿ ಚಿನ್ನ, 33.5 ಕೆಜಿ ಬೆಳ್ಳಿ , 13 ಕ್ಯಾರೆಟ್ ವಜ್ರ ಸೇರಿ 5.49 ಕೋಟಿ ಸ್ತಿರಾಸ್ತಿ ಇದೆ. ಪುತ್ರ ಅವ್ಯಾನ್ ದೇವ್ ಹೆಸರಲ್ಲಿ 11.91 ಲಕ್ಷ ರೂ. ಠೇವಣಿ ಇದೆ ನಿಖಿಲ್ 70.45 ಕೋಟಿ ರೂ. ಸಾಲಗಾರ, ರೇವತಿಗೆ 4.96 ಕೋಟಿ ರೂ. ಸಾಲವಿದೆ.

ಚನ್ನಪಟ್ಟಣದಲ್ಲಿ 50 ಮಂದಿ ನಾಮಪತ್ರ!: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂರು ಕ್ಷೇತ್ರಗಳಿಂದ ಒಟ್ಟಾರೆ 83 ಅಭ್ಯರ್ಥಿಗಳು 121 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಕೊನೇ ದಿನವಾದ ಶುಕ್ರವಾರ 58 ನಾಮಪತ್ರ ಸಲ್ಲಿಕೆಯಾಗಿವೆ. ಚನ್ನಪಟ್ಟಣದಲ್ಲಿ 50 ಅಭ್ಯರ್ಥಿಗಳು 62 ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾಂವಿಯಲ್ಲಿ 26 ಅಭ್ಯರ್ಥಿಗಳು 46 ನಾಮಪತ್ರ, ಸಂಡೂರಿನಲ್ಲಿ 7 ಅಭ್ಯರ್ಥಿಗಳು 13 ನಾಮಪತ್ರ ಸಲ್ಲಿಸಿದ್ದಾರೆ.

Shiggaon Congress

ಶಿಗ್ಗಾಂವಿಯಲ್ಲಿ ಕೈ- ಕಮಲ ಶಕ್ತಿ ಪ್ರದರ್ಶನ

ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಪಟ್ಟಣದಲ್ಲಿ ಶುಕ್ರವಾರ ಬೃಹತ್ ರ‍್ಯಾಲಿ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರೆ, ಗುರುವಾರವಷ್ಟೇ ಬಿ ಫಾಮ್ರ್ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್​ಖಾನ್ ಪಠಾಣ ನಾಮಪತ್ರ ಸಲ್ಲಿಸಿ, ಸಂಜೆ ರೋಡ್ ಶೋ ನಡೆಸಿದರು.

ಭರತ ಬೊಮ್ಮಾಯಿ ಪರ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರಿಗಿಂತ ಹೆಚ್ಚಿನ ಮತದ ಅಂತರದಲ್ಲಿ ಭರತ್​ರನ್ನು ಗೆಲ್ಲಿಸಬೇಕು ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಗೋವಿಂದ ಕಾರಜೋಳ, ಅರವಿಂದ ಬೆಲ್ಲದ, ಚಲವಾದಿ ನಾರಾಯಣಸ್ವಾಮಿ, ಮುರುಗೇಶ ನಿರಾಣಿ, ಶಿವಕುಮಾರ ಉದಾಸಿ, ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

ಕಾಂಗ್ರೆಸ್​ನಲ್ಲಿ ಗೊಂದಲ: ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ನಡೆಸಿದ ರೋಡ್ ಶೋದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಈಶ್ವರ ಖಂಡ್ರೆ, ಇತರರಿದ್ದರು. ರೋಡ್ ಶೋ ಸಮಯ, ಸ್ಥಳದ ಬಗ್ಗೆ ಕಾರ್ಯಕರ್ತರಲ್ಲೇ ಗೊಂದಲ ಇದ್ದ ಕಾರಣ ಕಾರ್ಯಕರ್ತರ ಸಂಖ್ಯೆ ಕಡಿಮೆ ಕಂಡುಬಂದಿತು.

ಕಾಂಗ್ರೆಸ್ ವಿರುದ್ಧ ಬಂಡಾಯ ಘೊಷಿಸಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಮಂಜುನಾಥ ಕುನ್ನೂರ ನಾಮಪತ್ರ ಸಲ್ಲಿಸಿದ್ದಾರೆ. ಖಾದ್ರಿ ಮಧ್ಯಾಹ್ನ 2.45ಕ್ಕೆ ತಹಸೀಲ್ದಾರ್ ಕಚೇರಿಗೆ ಓಡೋಡಿ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಪಠಾಣ ವಿರುದ್ಧ ತೊಡೆ ತಟ್ಟಿರುವ ಖಾದ್ರಿ, ‘ಪಠಾಣ ಒಬ್ಬ ರೌಡಿಶೀಟರ್, ಅವರಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ಹರಿಹಾಯ್ದಿದಿದ್ದಾರೆ. ರಾಜು ಕುನ್ನೂರಗೆ ಟಿಕೆಟ್ ಸಿಗದ ಕಾರಣ ಬೇಸರಗೊಂಡಿರುವ ಮಾಜಿ ಸಂಸದ ಮಂಜುನಾಥ ಕುನ್ನೂರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಜಮೀರ್ ಕಾರಿಗೆ ಕಲ್ಲು: ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಟಿಕೆಟ್ ಸಮರ ತಾರಕಕ್ಕೇರಿದ್ದು, ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಸಚಿವ ಜಮೀರ್ ಅಹ್ಮದ್ ಅವರಿದ್ದ ಕಾರಿಗೆ ಕಲ್ಲು ತೂರಿ ಗಾಜು ಒಡೆದಿದ್ದಾರೆ. ಖಾದ್ರಿ ಅಸಮಾಧಾನ ಶಮನಗೊಳಿಸಲು ಸಚಿವ ಜಮೀರ ಅಹ್ಮದ್ ಹುಲಗೂರಿನ ಖಾದ್ರಿ ನಿವಾಸಕ್ಕೆ ಬಂದಿದ್ದರು. ಈ ವೇಳೆ ಆಕ್ರೋಶಗೊಂಡಿದ್ದ ಖಾದ್ರಿ ಬೆಂಬಲಿಗರು ಜಮೀರ್ ಕಾರಿಗೆ ಕಲ್ಲು ತೂರಿದರು.

ಯಾಸೀರ್​ಖಾನ್​ಗಿಂತ ಪತ್ನಿ ಶ್ರೀಮಂತೆ

ಅಭ್ಯರ್ಥಿ: ಯಾಸೀರ್ ಅಹ್ಮದ್​ಖಾನ್ ಪಠಾಣ ಕ್ಷೇತ್ರ: ಶಿಗ್ಗಾಂವಿ, ಹಾವೇರಿ ಜಿಲ್ಲೆ ಪಕ್ಷ: ಕಾಂಗ್ರೆಸ್ ಒಟ್ಟು ಆಸ್ತಿ: 3.04 ಕೋಟಿ ರೂ.

ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಗಿಂತ ಅವರ ಪತ್ನಿ ಸಾಯಿದಾಬಾನು ಶ್ರೀಮಂತೆಯಾಗಿದ್ದು, ಕುಟುಂಬದ ಒಟ್ಟು ಆಸ್ತಿ ಮೌಲ್ಯ 3.04 ಕೋಟಿ ರೂ. ಆಗಿದೆ. ಯಾಸೀರ್​ಖಾನ್ ಬಳಿ 85 ಸಾವಿರ ನಗದು, 4.27 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಸೇರಿ 6.02 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ. ಹೆಂಡತಿ ಬಳಿ 500 ಗ್ರಾಂ ಚಿನ್ನ: 3 ಲಕ್ಷ ರೂ. ನಗದು, 1.93 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಸೇರಿ 2.17 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಮೂವರು ಪುತ್ರರು ಮತ್ತು ಪುತ್ರಿ ಇದ್ದು, ಅವರ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ.

ಎನ್​ಡಿಎ ಅಭ್ಯರ್ಥಿಗಳ ಗೆಲುವು ಖಚಿತ: ಉಪ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣ ಇರುವು ದರಿಂದ ಮೂರೂ ಕ್ಷೇತ್ರಗಳಲ್ಲಿಯೂ ಎನ್​ಡಿಎ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಎಲ್ಲೆಡೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರವಾದ ವಾತಾವರಣ ಇದೆ. ಇಡೀ ಜಗತ್ತೇ ಮೋದಿ ಅವರತ್ತ ನೋಡುತ್ತಿದೆ. ಹಾಗಾಗಿ, ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಅನುಮಾನವೇ ಬೇಡ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net