

ಬೆಂಗಳೂರು: ಕರೊನಾ ವೈರಸ್ ಹಬ್ಬುವ ಭೀತಿಯಿಂದ ಕಳೆದ ವಾರವೇ ರಾಜ್ಯ ಸರ್ಕಾರವು ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ಅದರಂತೆ ಚಿತ್ರಪ್ರದರ್ಶನವಷ್ಟೇ ಅಲ್ಲ, ಬಹುತೇಕ ಚಿತ್ರೀಕರಣ ಸಹ ಸ್ಥಗಿತಗೊಂಡಿತ್ತು. ಇದೀಗ ಮಾರ್ಚ್ 31ರವರೆಗೂ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಗುರುವಾರ ಸಭೆ ಸೇರಿ ಒಂದಿಷ್ಟು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಪ್ರಮುಖವಾಗಿ ಸರ್ಕಾರ ಆದೇಶ ಹೊರಡಿಸಿದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಯಾವ್ಯಾವ ಚಿತ್ರಗಳು ಪ್ರದರ್ಶನ ಕಾಣುತ್ತಿತ್ತೋ, ಸರ್ಕಾರಿ ಆದೇಶ ಹಿಂಪಡೆದ ದಿನದಿಂದ ಅದೇ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಚಿತ್ರಮಂದಿರಗಳಷ್ಟೇ ಅಲ್ಲ, ಯುಎಫ್ಓ, ಕ್ಯೂಬ್ ಸಹ ಸಹಕಾರ ಕೊಡಬೇಕು.
ಸದ್ಯ ಯಾವುದಾದರೂ ಚಿತ್ರಗಳ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂಬ ಸೂಚನೆ ಇದ್ದರೆ, ಅಂತಹ ನಿರ್ವಪಕರು ಚಿತ್ರೀಕರಣಕ್ಕೆ ಅಗತ್ಯವಿರುವ ಕಲಾವಿದರು ಮತ್ತು ತಂತ್ರಜ್ಞರನ್ನು ಮಾತ್ರ ಇಟ್ಟುಕೊಂಡು ಚಿತ್ರೀಕರಣ ಮಾಡಬಹುದಾಗಿದೆ. ಕರೊನಾ ಸೋಂಕು ಹರಡದಂತೆ ಮಾಸ್ಕ್, ಸ್ಯಾನಿಟೈಸರ್ ಮುಂತಾದ ಸ್ವಚ್ಛತಾ ಕ್ರಮಗಳನ್ನು ಅನುಸರಿಸಿ ಚಿತ್ರೀಕರಣ ಮುಗಿಸಬಹುದಾಗಿದೆ.
ಚಿತ್ರದ ಚಿತ್ರೀಕರಣಕ್ಕೆ ಹೊರರಾಜ್ಯದ ಅಥವಾ ಹೊರದೇಶದ ಕಲಾವಿದರು ಅಥವಾ ತಂತ್ರಜ್ಞರು ಭಾಗವಹಿಸಿದ್ದಲ್ಲಿ ಅವರ ಮಾಹಿತಿಯನ್ನು ಸಂಗ್ರಹಿಸಬೇಕು. ಅದರ ಜತೆಗೆ ಚಿತ್ರತಂಡದವರು ಮುನ್ನೆಚ್ಚರಿಕೆ ವಹಿಸಿ, ಅವರಿಗೆ ಸೂಕ್ತ ತಪಾಸಣೆ ಮಾಡಿಸಿ, ಆರೋಗ್ಯ ಇಲಾಖೆಯಿಂದ ಖಾತ್ರಿಪಡಿಸಿಕೊಳ್ಳಬೇಕು.
ಚಿತ್ರಪ್ರದರ್ಶನ ಮುಂದುವರಿಸಬಹುದು ಎಂದು ಸರ್ಕಾರವು ಆದೇಶ ನೀಡುವವರೆಗೂ, ಸ್ಥಳೀಯ ಮತ್ತು ಹೊರರಾಜ್ಯಗಳಲ್ಲಿ ಹೊಸ ಚಿತ್ರಗಳ ಮುಹೂರ್ತ ಹಾಗೂ ಚಿತ್ರೀಕರಣವನ್ನು ಮುಂದೂಡಬೇಕು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿರುವ ನಿರ್ವಪಕರು, ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ಮುನ್ನ ಮಾತುಕತೆ ನಡೆಸಿ, ಯಾವುದೇ ಗೊಂದಲವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.