ಮೂಕವಿಸ್ಮಿತ ಅಭಿನಯ!

mukavimitha 17 mar 20
Published on

ಬೆಂಗಳೂರು: ಖಾಕಿ ಧರಿಸಿ ಖಡಕ್ ಡೈಲಾಗ್ಸ್ ಉದುರಿಸಿ ಅಭಿನಯಿಸುವುದೆಂದರೆ ಸಾಮಾನ್ಯ ಮಾತಲ್ಲ. ಆದರೆ, ಅಂಥದ್ದೊಂದು ಪಾತ್ರವನ್ನು ಮಾತು ಬರದ, ಕಿವಿ ಕೇಳಿಸದ ಕಲಾವಿದರೊಬ್ಬರು ಮಾಡುತ್ತಾರೆಂದರೆ ಅದು ಅಪರೂಪವೇ ಸರಿ.

ಅಂಥದ್ದೊಂದು ಪಾತ್ರಧಾರಿಯ ದರ್ಶನ ಮಾಡಿಸಲು ಮುಂದಾಗಿದೆ ಈ ‘ವಿರಾಟಪರ್ವ’. ‘ಹುಡುಗರು’ ಸಿನಿಮಾದಲ್ಲಿನ ಒಂದು ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದ ತಮಿಳು ನಟಿ ಅಭಿನಯ, ಇದೀಗ ಕನ್ನಡದ ‘ವಿರಾಟಪರ್ವ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಆಗಿ ಮೂಕವಿಸ್ಮಿತಗೊಳಿಸುವಂತೆ ನಟಿಸಿದ್ದಾರಂತೆ.

‘ನಮ್ಮ ಚಿತ್ರದ ವಿಶೇಷವಾದ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಮುಗ್ಧ ಮುಖದ ಕಲಾವಿದೆಯೊಬ್ಬರು ಬೇಕಿತ್ತು. ಅದಕ್ಕಾಗಿ ಅಭಿನಯ ಅವರನ್ನು ಆರಿಸಿಕೊಂಡೆ’ ಎನ್ನುತ್ತಾರೆ ನಿರ್ದೇಶಕ ಅನಂತ್ ಶೈನ್. ಹಾಗಾದರೆ, ಈ ಪಾತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಯಾರೂ ಸಿಗಲಿಲ್ಲವೇ? ಎಂಬ ಕುತೂಹಲ ಸಹಜ. ಆ ಬಗ್ಗೆ ನಿರ್ದೇಶಕರು ಈ ವಿವರಣೆಯನ್ನು ನೀಡುತ್ತಾರೆ. ‘ಈ ಪಾತ್ರಕ್ಕೆ ಹರಿಪ್ರಿಯಾ ಸೂಕ್ತ ಎಂದುಕೊಂಡಿದ್ದೆ. ಆ ಬಗ್ಗೆ ಸಂರ್ಪಸಿದಾಗ, ಅವರು ಅದಾಗಲೇ ಪೊಲೀಸ್ ಅಧಿಕಾರಿಯ ಪಾತ್ರವೊಂದನ್ನು ನಿಭಾಯಿಸುತ್ತಿದ್ದರು. ಜತೆಗೆ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದರಿಂದ ಅವರು ಲಭ್ಯ ಇರಲಿಲ್ಲ. ಈ ಪಾತ್ರಕ್ಕಾಗಿ ಕನ್ನಡಲ್ಲಿ ಸುಮಾರು 15 ನಟಿಯರನ್ನು ಕೇಳಿಕೊಂಡಿದ್ದೆ. ಆದರೆ, ನಾನಾ ಕಾರಣಗಳಿಂದ ಯಾರೂ ಸಿಗಲಿಲ್ಲ. ಹೀಗಾಗಿ ಅಭಿನಯ ಅವರನ್ನು ಆಯ್ಕೆ ಮಾಡಲಾಯಿತು’ ಎನ್ನುತ್ತಾರೆ ಅನಂತ್.

‘ಮೊದಲಿಗೆ ಈ ಪಾತ್ರದ ಕುರಿತು ಅವರಿಗೆ ಇಂಗ್ಲಿಷ್​ನಲ್ಲಿ ಇ-ಮೇಲ್ ಮಾಡಿದ್ದೆ. ಅವರು ಒಪ್ಪಿದ ಬಳಿಕ ಅವರ ಪಾತ್ರದ ಸ್ಕ್ರಿಪ್ಟ್ ಭಾಗವನ್ನು ಇಂಗ್ಲಿಷ್​ಗೆ ಅನುವಾದಿಸಿ ಹಾಗೂ ಕನ್ನಡವನ್ನೇ ಇಂಗ್ಲಿಷ್ ಲಿಪಿಯಲ್ಲಿ ಬರೆದು ಎರಡೂ ಪ್ರತಿಯನ್ನು ಅವರಿಗೆ ಕಳಿಸಿಕೊಡಲಾಗಿತ್ತು. ಅದಕ್ಕೆ ಅವರು ಪರಿಪೂರ್ಣ ರೀತಿಯಲ್ಲಿ ತಯಾರಾಗಿ ಬಂದಿದ್ದರು’ ಎಂಬ ಮಾಹಿತಿ ನೀಡುತ್ತಾರೆ ನಿರ್ದೇಶಕರು. ‘ಮಹಾಭಾರತದ ವಿರಾಟ ಪರ್ವವೇ ಈ ಚಿತ್ರದ ಕಥಾಹಂದರಕ್ಕೆ ಸ್ಪೂರ್ತಿ. ಸಂಬಂಧಗಳಿಗೆ ಪೆಟ್ಟು ಬಿದ್ದಾಗ ಅದನ್ನು ಉಳಿಸಿಕೊಳ್ಳಲು ಮನುಷ್ಯ ಏನು ಮಾಡುತ್ತಾನೆ ಎಂಬುದೇ ಈ ಚಿತ್ರದ ಒಂದೆಳೆ ಕಥೆ. ಇಲ್ಲಿ ಹೀರೋ-ಹೀರೋಯಿನ್ ಅಂತೆಲ್ಲ ಇಲ್ಲ. ಯಶ್ ಶೆಟ್ಟಿ, ಅರು ಗೌಡ, ಅಭಿನಯ ಹಾಗೂ ಅನಿಲ್ ಸಿದ್ದು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಶೈನ್.

ಅಭಿನಯ ಅವರಿಂದ ಈ ಪಾತ್ರ ಮಾಡಿಸುವುದು ಚಾಲೆಂಜ್ ಎನ್ನುವುದಕ್ಕಿಂತ, ಅಷ್ಟರಮಟ್ಟಿಗೆ ಹೋಮ್ರ್ಕ್ ಮಾಡಿಟ್ಟುಕೊಳ್ಳಲಾಗಿತ್ತು. ಎಲ್ಲಕ್ಕಿಂತ ಹೆಚ್ಚು ಅವರ ಗ್ರಹಿಕೆ ಅದ್ಭುತವಾಗಿತ್ತು. ಅವರಿಗೆ ಮಾತು ಬರುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ ಎಂಬುದು ಅರಿವಿಗೇ ಬರದಷ್ಟು ಸಮರ್ಥವಾಗಿ ಅವರು ಅಭಿನಯಿಸಿದ್ದರು. | ಅನಂತ್ ಶೈನ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net