ಹೆತ್ತ ಮಕ್ಕಳನ್ನೇ ಕೊಂದ ತಾಯಿ !

death (3)
Published on

ಬೆಂಗಳೂರು: ಜನ್ಮ ನೀಡಿದ ತಾಯಿಯೇ ಮಲಗಿದ್ದ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಗರದ ಜಾಲಹಳ್ಳಿಯಲ್ಲಿ ನಡೆದಿದೆ.

ಜಾಲಹಳ್ಳಿಯ ನಿವಾಸಿಗಳಾದ ಲಕ್ಷ್ಮೀ (9) ಹಾಗೂ ಗೌತಮ್ (7) ಕೊಲೆಯಾದ ದುರ್ದೈವಿಗಳು. ಮಕ್ಕಳನ್ನು ಕೊಲೆ ಮಾಡಿದ ತಾಯಿ ಗಂಗಾದೇವಿ, ತಾನೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಪರಿಶೀಲನೆ ನಡೆಸಿ ಆರೋಪಿ ಗಂಗಾದೇವಿಯನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲಾ ಅಡಾವತ್ ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶ ಮೂಲದ ಗಂಗಾದೇವಿ ಕುಟುಂಬ ಜಾಲಹಳ್ಳಿಯಲ್ಲಿ ನೆಲೆಸಿತ್ತು. ಆರೋಪಿ ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆ ಪತಿ ಬಿಬಿಎಂಪಿಯ ಗುತ್ತಿಗೆ ಆಧಾರದ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.

ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪತಿಯ ವಿರುದ್ಧ ಗಂಗಾದೇವಿ ಮತ್ತು ತನ್ನ ಪುತ್ರಿ ಜತೆಯಲ್ಲಿ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದರು. ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಗಂಗಾದೇವಿ ಮತ್ತು ಬಾಲಕಿಗೆ ಕೌನ್ಸಲಿಂಗ್ ಮಾಡಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲದೆ, ಬಾಲಕಿ ತಂದೆಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಕ್ಕಳೊಂದಿಗೆ ನೆಲೆಸಿದ್ದ ಗಂಗಾದೇವಿ, ಮಂಗಳವಾರ ಯುಗಾದಿ ಹಬ್ಬವನ್ನು ಆಚರಿಸಿದ್ದರು. ಹಬ್ಬದ ಊಟವನ್ನು ಸವಿದು ಮಕ್ಕಳೊಂದಿಗೆ ಗಂಗಾದೇವಿ ಮಲಗಿದ್ದಳು. ತಡರಾತ್ರಿ ಮಲಗಿದ್ದ ಮಕ್ಕಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ಬಳಿಕ ತಾನು ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಕೊನೆಗೆ ತಡರಾತ್ರಿ 1 ಗಂಟೆಯಲ್ಲಿ ಗಂಗಾದೇವಿ ನಮ್ಮ 112ಗೆ ಕರೆ ಮಾಡಿ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು, ಪೊಲೀಸರ ನೆರವು ಬೇಕೆಂದು ಕೋರಿದ್ದಳು. ದೂರು ಸ್ವೀಕರಿಸಿದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಪೊಲೀಸರ ಎದುರು ಗಂಗಾದೇವಿ ತಾನೇ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಗಂಗಾದೇವಿಯನ್ನು ಬಂಧಿಸಿದ್ದಾರೆ. ಮಕ್ಕಳ ಕೊಲೆ ಪ್ರಕರಣವನ್ನು ಎಲ್ಲ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಸೈದುಲಾ ಅಡಾವತ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net